ನಿಮ್ಮ ಶೌರ್ಯ ವಿಶ್ವಕ್ಕೇ ಒಂದು ಸಂದೇಶ ರವಾನಿಸಿದೆ: ಲಡಾಖ್ ನಲ್ಲಿ ಭಾರತೀಯ ಯೋಧರನ್ನು ಕೊಂಡಾಡಿದ ಪ್ರಧಾನಿ ಮೋದಿ

ವಿಶ್ವಾದ್ಯಂತ ಭಾರತೀಯ ಸೈನಿಕರ ಶೌರ್ಯದ ಬಗ್ಗೆ ಚರ್ಚೆಯಾಗುತ್ತಿದೆ. ಭಾರತ ಮಾತೆಯ ವಿರೋಧಿಗಳು ನಿಮ್ಮ ತಾಕತ್ತು, ಕೋಪವನ್ನು ನೋಡಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಲಡಾಖ್ ನಲ್ಲಿ ಪ್ರಧಾನಿ ಮೋದಿ
ಲಡಾಖ್ ನಲ್ಲಿ ಪ್ರಧಾನಿ ಮೋದಿ

ಲೇಹ್: ವಿಶ್ವಾದ್ಯಂತ ಭಾರತೀಯ ಸೈನಿಕರ ಶೌರ್ಯದ ಬಗ್ಗೆ ಚರ್ಚೆಯಾಗುತ್ತಿದೆ. ಭಾರತ ಮಾತೆಯ ವಿರೋಧಿಗಳು ನಿಮ್ಮ ತಾಕತ್ತು, ಕೋಪವನ್ನು ನೋಡಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಚೀನಾ-ಭಾರತೀಯ ಸೈನಿಕರ ಸಂಘರ್ಷಕ್ಕೆ ಕಾರಣವಾಗಿರುವ ಲಡಾಖ್‌ ನ ನಿಮ್ಮೂ ಸೆಕ್ಟರ್ ಗೆ ಇಂದು ದಿಢೀರ್ ಭೇಟಿ ನೀಡಿದ್ದ ಪ್ರಧಾನಿ ಮೋದಿ ಅವರು, ಅಲ್ಲಿ ಯೋಧರನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಯೋಧರ ಶೌರ್ಯ ಮತ್ತು ತಾಕತ್ತು ಪ್ರಶಂಸಿದ ಮೋದಿ, ನಿಮ್ಮ ಶೌರ್ಯ ಮತ್ತು ಸಾಹಸ ಇದೀಗ ಇಡೀ ವಿಶ್ವಕ್ಕೇ ಭಾರತದ ತಾಕತ್ತಿನ ಪರಿಚಯ ಮಾಡಿದೆ. ಭಾರತ ಮಾತೆಯ ವಿರೋಧಿಗಳು ನಿಮ್ಮ ತಾಕತ್ತು, ಕೋಪವನ್ನು ನೋಡಿದ್ದಾರೆ. ವಿಶ್ವಾದ್ಯಂತ ಭಾರತೀಯ ಸೈನಿಕರ ಶೌರ್ಯದ ಬಗ್ಗೆ ಚರ್ಚೆಯಾಗುತ್ತಿದೆ ಎಂದು ಹೇಳಿದರು.

'ಯಾವ ಎತ್ತರದ ಪ್ರದೇಶದಲ್ಲಿ ನೀವು ಕರ್ತವ್ಯ ನಿರ್ವಹಿಸುತ್ತಿರುವಿರೋ ಅದಕ್ಕಿಂತಲೂ ಎತ್ತರವಾದದ್ದು ನಿಮ್ಮ ಧೈರ್ಯ ಮತ್ತು ಶೌರ್ಯ. ನಿಮ್ಮ ತ್ಯಾಗ ಮತ್ತು ಬಲಿದಾನ, ಶೌರ್ಯ ಮತ್ತು ಸಾಹಸ ಆತ್ನ ನಿರ್ಭರ್ ಭಾರತದ ಸಂಕಲ್ಪಕ್ಕೆ ಬಲ ನೀಡಿದೆ. ಸ್ವಾವಲಂಬಿಗಳಾಗಬೇಕು ಎಂಬ ನಮ್ಮ ಸಂಕಲ್ಪ ಇದೀಗ ಇನ್ನಷ್ಟು ಗಟ್ಟಿಯಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಗಾಲ್ವನ್‌ ಕಣಿವೆಯಲ್ಲಿ ಭಾರತ–ಚೀನಾ ಯೋಧರ ನಡುವೆ ಸಂಘರ್ಷ ನಡೆದು ಎರಡು ವಾರಗಳ ಬಳಿಕ ಅಲ್ಲಿಗೆ ತೆರಳಿ ಪರಿಸ್ಥಿತಿ ಅವಲೋಕಿಸಿದ ಪ್ರಧಾನಿಯವರು ಯೋಧರನ್ನು ಉದ್ದೇಶಿಸಿ ಮಾತನಾಡಿದರು.

ವಿಸ್ತರಣೆಯ ಕಾಲ ಮುಗಿದಿದೆ
ನಿಮ್ಮ ಶೌರ್ಯದ ಬಗ್ಗೆ ಎಲ್ಲೆಡೆ ಮಾತನಾಡುತ್ತಿದ್ದಾರೆ. ನಿಮ್ಮ ಸಾಹಸಗಾಥೆ ದೇಶದ ಪ್ರತಿಯೊಂದು ಮನೆಯಲ್ಲಿಯೂ ಪ್ರತಿಧ್ವನಿಸುತ್ತಿದೆ. ಗಾಲ್ವನ್ ಕಣಿವೆಯಲ್ಲಿ ಹುತಾತ್ಮರಾದ ಯೋಧರಿಗೆ ಮತ್ತೊಮ್ಮೆ ಗೌರವ ಸಲ್ಲಿಸುತ್ತಿದ್ದೇನೆ. ದುರ್ಬಲರು ಶಾಂತಿ ಪ್ರಕ್ರಿಯೆ ಆರಂಭಿಸಲು ಸಾಧ್ಯವಿಲ್ಲ. ಶಾಂತಿ ಸ್ಥಾಪಿಸಲು ಧೈರ್ಯವೂ ಅಗತ್ಯ. ವಿಶ್ವ ಯುದ್ಧಗಳಿರಲಿ ಅಥವಾ ಶಾಂತಿ ಇರಲಿ; ಅಗತ್ಯ ಎದುರಾದಾಗ ನಮ್ಮ ಧೈರ್ಯವು ಶಾಂತಿ ಸ್ಥಾಪನೆಯಲ್ಲಿ ಜಯ ಸಾಧಿಸಿದ್ದನ್ನು ಜಗತ್ತು ನೋಡಿದೆ. ಮಾನವೀಯತೆಯ ಸುಧಾರಣೆಗಾಗಿ ನಾವು ಕೆಲಸ ಮಾಡಿದ್ದೇವೆ. ವಿಸ್ತರಣೆಯ ಕಾಲ ಮುಗಿದಿದೆ. ಇದು ಅಭಿವೃದ್ಧಿಯ ಯುಗ. ಭೂಪ್ರದೇಶ ವಿಸ್ತರಣೆಗೆ ಹೊರಟವರು ಸೋಲನುಭವಿಸಿದ್ದು ಅಥವಾ ವಿರೋಧ ಎದುರಿಸಿ ಓದಿಹೋದುದಕ್ಕೆ ಇತಿಹಾಸ ಸಾಕ್ಷಿಯಾಗಿದೆ. ಮಹಿಳಾ ಯೋಧರನ್ನೂ ನಾನು ನೋಡುತ್ತಿದ್ದೇನೆ. ಯುದ್ಧಭೂಮಿಯಲ್ಲಿ ಇದು ಸ್ಫೂರ್ತಿದಾಯಕ. ಇಂದು ನಾನು ನಿಮ್ಮ ಮಹಿಮೆಯ ಬಗ್ಗೆ ಮಾತನಾಡುತ್ತಿದ್ದೇನೆ ಎಂದು ಪ್ರಧಾನಿ ಮೋದಿ ಹೇಳಿದರು.

ಗಲ್ವಾನ್ ಕಣಿವೆ ಪ್ರದೇಶದಲ್ಲಿ ಚೀನಾ ಹಾಗೂ ಭಾರತೀಯ ಸೇನೆ ನಡುವೆ ನಡೆದ ಘರ್ಷಣೆ ನಡೆದ ಬಳಿಕ ಇದೇ ಮೊದಲ ಬಾರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಲಡಾಖ್'ಗೆ ಭೇಟಿ ನೀಡಿದರು. ಲಾಡಾಖ್ ನ ನಿಮ್ಮೂ ಸೆಕ್ಟರ್ ಗೆ ಬಂದಿಳಿದ ಪ್ರಧಾನಿ ಮೋದಿ ಅವರೊಂದಿಗೆ ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್, ಭಾರತೀಯ ಸೇನಾ ಮುಖ್ಯಸ್ಥ ಮನೋಜ್ ಮುಕುಂದ್ ನರಾವಾಣೆಯವರು ಕೂಡ ಇದ್ದರು.  

ಭೇಟಿ ವೇಳೆ ಪ್ರಧಾನಿ ಮೋದಿ ಸೇನಾಧಿಕಾರಿಗಳಿಂದ ಗಡಿಯಲ್ಲಿನ ಪರಿಸ್ಥಿತಿ ಕುರಿತು ಮಾಹಿತಿ ಪಡೆದರು. ಬಳಿಕ ಭದ್ರತೆಗೆ ನಿಯೋಜನೆಗೊಂಡಿದ್ದ ಯೋಧರ ಜೊತೆಗೆ ಮಾತುಕತೆ ನಡೆಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com