ಒಬ್ಬ ವ್ಯಕ್ತಿಗೆ ಕೊರೋನಾ 2 ಬಾರಿ ಬರುವ ಸಾಧ್ಯತೆ ಇದೆಯೆ? ಚೇತರಿಕೆ ಕಂಡ ರೋಗಿಗಳ ಅಧ್ಯಯನಕ್ಕೆ ಐಸಿಎಂಆರ್ ಮುಂದು!

ಓರ್ವ ವ್ಯಕ್ತಿಗೆ ಕೋವಿಡ್-19 ಸೋಂಕು ಎರಡನೇ ಬಾರಿ ತಗುಲಬಹುದೇ? ಹೀಗೊಂದು ಹೊಸ ಸಂಶೋಧನೆಗೆ ಐಸಿಎಂಆರ್ ನ ಸಮಿತಿ ಮುಂದಾಗಿದ್ದು, ಕೋವಿಡ್-19 ನಿಂದ ಚೇತರಿಕೆ ಕಂಡವರನ್ನು ಎಪಿಡೆಮಿಯೋಲಾಜಿಕಲ್ ಚಟುವಟಿಕೆಗಳಿಗೆ ಬಳಕೆ ಮಾಡಿಕೊಳ್ಳುವುದನ್ನು ಗಂಭೀರವಾಗಿ ಪರಿಗಣಿಸಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಓರ್ವ ವ್ಯಕ್ತಿಗೆ ಕೋವಿಡ್-19 ಸೋಂಕು ಎರಡನೇ ಬಾರಿ ತಗುಲಬಹುದೇ? ಹೀಗೊಂದು ಹೊಸ ಸಂಶೋಧನೆಗೆ ಐಸಿಎಂಆರ್ ನ ಸಮಿತಿ ಮುಂದಾಗಿದ್ದು, ಕೋವಿಡ್-19 ನಿಂದ ಚೇತರಿಕೆ ಕಂಡವರನ್ನು ಎಪಿಡೆಮಿಯೋಲಾಜಿಕಲ್ ಚಟುವಟಿಕೆಗಳಿಗೆ ಬಳಕೆ ಮಾಡಿಕೊಳ್ಳುವುದನ್ನು ಗಂಭೀರವಾಗಿ ಪರಿಗಣಿಸಿದೆ. ಇದರ ಮೊದಲ ಭಾಗವಾಗಿ ತಮಿಳುನಾಡು ಹಾಗೂ ಪಶ್ಚಿಮ ಬಂಗಾಳದ ಕ್ವಾರಂಟೈನ್ ಹಾಗೂ ಐಸೊಲೇಷನ್ ಗಳಲ್ಲಿರುವ ಕೊರೋನಾ ವೈರಸ್ ನಿಂದ ಚೇತರಿಕೆ ಕಂಡ ರೋಗಿಗಳ ಅಧ್ಯಯನ ನಡೆಸಲು ಉದ್ದೇಶಿಸಲಾಗಿದೆ.

ಕೊರೋನಾ ವೈರಸ್ ಸೋಂಕಿಗೆ ಗುರಿಯಾಗಿ ಚೇತರಿಕೆ ಕಂಡ ವ್ಯಕ್ತಿಗಳಲ್ಲಿ ಪ್ರತಿಕಾಯಗಳ ಜೀವಿತಾವಧಿಯ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಅದರೆ ವೈರಾಣುಗಳನ್ನು ಎದುರಿಸಲು ಸೋಂಕಿತ ವ್ಯಕ್ತಿಗಳಲ್ಲಿ ಟಿ-ಸೆಲ್ ಮೀಡಿಯೇಟೆಡ್ ರೋಗನಿರೋಧಕ ಉತ್ಪತ್ತಿಯಾಗಿರುವುದು ಕಂಡುಬಂದಿರುವುದು ಒಳ್ಳೆಯ ಬೆಳವಣಿಗೆಯಾಗಿದೆ.

ಮೆಮೊರಿ ಸೆಲ್ ಗಳಾಗಿರುವ ಈ ಟಿ-ಸೆಲ್ ಗಳು ಪ್ರತಿಕಾಯಗಳು ಕುಸಿತ ಕಂಡಾಗಲೂ ಸಹ ಆ ನಿರ್ದಿಷ್ಟ ವ್ಯಕ್ತಿ ಮತ್ತೊಮ್ಮೆ ರೋಗ ಲಕ್ಷಣಗಳಿಗೆ ತೆರೆದುಕೊಂಡರೂ ಸಹ ರೋಗಕ್ಕೆ ತುತ್ತಾಗುವುದರಿಂದ ದೀರ್ಘಾವಧಿಯ ರಕ್ಷಣೆ ಪಡೆಯುತ್ತಾನೆ ಎಂದು ಐಸಿಎಂ ಆರ್ ವ್ಯಾಪ್ತಿಯಲ್ಲಿರುವ ಕೋವಿಡ್ -19 ಕಣ್ಗಾವಲು ಮತ್ತು ಸಾಂಕ್ರಾಮಿಕ ರೋಗಶಾಸ್ತ್ರದ ತಜ್ಞರ ತಂಡದ ಸದಸ್ಯರೊಬ್ಬರು ಹೇಳಿದ್ದಾರೆ.
ಆದರೆ ಟಿ-ಸೆಲ್ ಗಳನ್ನು ನಾವು ಇಮ್ಯುನಿಟಿ ಪಾಸ್ಪೋರ್ಟ್ ಎಂದು ಹೇಳಲು ಸಾಧ್ಯವಿಲ್ಲ. ರೋಗಕ್ಕೆ ತೆರೆದುಕೊಂಡ ಜನರಿಗೆ ಕೊರೋನಾದಿಂದ ದೀರ್ಘಾವಧಿಯ ರಕ್ಷಣೆ ಇರುತ್ತದೆ ಎಂಬುದನ್ನು ಮನಗಂಡಿದ್ದೇವೆ, ಇದನ್ನೇ ಬಳಸಿಕೊಂಡು ಇದರ ಪರಿಣಾಮಗಳನ್ನು ಅಧ್ಯಯನ ನಡೆಸಲು ಉದ್ದೇಶಿಸಿದ್ದೇವೆ ಎಂದು ಅವರು ಹೇಳಿದ್ದಾರೆ.

ಸ್ವೀಡನ್ ನ ಕರೋಲಿನ್ಸ್ಕಾ ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗೆ ಈ ಕುರಿತ ಸಂಶೋಧನೆ ನಡೆದಿದ್ದು, ಕೊರೋನಾದಿಂದ ಚೇತರಿಕೆ ಕಂಡ 200ಕ್ಕೂ ಹೆಚ್ಚು ರೋಗಿಗಳಲ್ಲಿ ಪ್ರತಿಕಾಯಗಳ ಹೊರತಾಗಿಯೂ ಟಿ-ಸೆಲ್ ಮೀಡಿಯೇಟೆಡ್ ಇಮ್ಯುನಿಟಿ ಕಂಡುಬಂದಿದೆ.

ಕೊರೋನಾದಿಂದ ಚೇತರಿಕೆ ಕಂಡವರ ಹೊರತಾಗಿ ಕೊರೋನಾ ರೋಗ ಎದುರಿಸಿರುವ ಕುಟುಂಬ ಸದಸ್ಯರು ಹಾಗೂ ಮೇ ತಿಂಗಳಲ್ಲಿ ರಕ್ತದಾನ ಮಾಡಿರುವ ಆರೋಗ್ಯಕರ ವ್ಯಕ್ತಿಗಳ ಪೈಕಿ ಶೇ.30 ರಷ್ಟು ಜನರಿಗೆ ಟಿ-ಸೆಲ್ ಇಮ್ಯುನಿಟಿ ಇರುವುದು ಕಂಡುಬಂದಿದೆ ಎಂದು ವಿಜ್ಞಾನಿಗಳು ಹೇಳಿದ್ದು, ಸಣ್ಣ ಪ್ರಮಾಣದ ಅಥವಾ ರೋಗಲಕ್ಷಣ ರಹಿತರಿಗಿಂತ ತೀವ್ರವಾದ ರೋಗವಿದ್ದವರಲ್ಲಿ ದೃಢವಾದ ಟಿ-ಸೆಲ್ ಪ್ರತಿಕ್ರಿಯೆ ಕಂಡಬಂದಿದೆ ಎಂದಿದ್ದಾರೆ.

ಐಸಿಎಂಆರ್ ನ ಮತ್ತೋರ್ವ ಸದಸ್ಯರು ಈ ಬಗ್ಗೆ ಮಾತನಾಡಿದ್ದು, ನರ್ಸ್ ಗಳೂ ಸಹ ಸೋಂಕಿತ, ಶಂಕಿತ ರೋಗಿಗಳ ಹತ್ತಿರ ಹೋಗಲು ಭಯಪಡುತ್ತಿದ್ದು ಭಾರತದ ಹಲವು ರಾಜ್ಯಗಳಲ್ಲಿ ಹೆಚ್ಚು ಸಂಖ್ಯೆಯ ಕ್ವಾರಂಟೈನ್ ಕೇಂದ್ರಗಳು ಹಾಗೂ ಐಸೊಲೇಷನ್ ಕೇಂದ್ರಗಳಿಗೆ ಮುನ್ನೆಲೆಯಲ್ಲಿ ಕೆಲಸ ಮಾಡುವವರ ಕೊರತೆ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಕೊರೋನಾದಿಂದ ಚೇತರಿಕೆಯಾದವರನ್ನು ಸ್ವಯಂ ಸೇವಕರನ್ನಾಗಿ ಇದಕ್ಕೆ ಬಳಕೆ ಮಾಡಿಕೊಂಡು ಇಮ್ಯುನೊಲಾಜಿಕಲ್ ಪ್ರತಿಕ್ರಿಯೆಗಳನ್ನು ಅಧ್ಯಯನ ನಡೆಸುವ ಎರಡೂ ಉದ್ದೇಶಗಳು ಈಡೇರುವಂತೆ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಹೇಳಿದ್ದಾರೆ. ಇದರ ಮೊದಲ ಭಾಗವಾಗಿ ತಮಿಳುನಾಡು ಹಾಗೂ ಪಶ್ಚಿಮ ಬಂಗಾಳದಲ್ಲಿ ಕೊರೋನಾದಿಂದ ಚೇತರಿಕೆಯಾದವರನ್ನು ಬಳಕೆ ಮಾಡಿಕೊಳ್ಳಲು ಉದ್ದೇಶಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com