ಕೋವಿಡ್-19 ವಿರುದ್ಧ ಭಾರತ ಹೇಗೆ ಯಶಸ್ವಿಯಾಗಿ ಹೋರಾಡುತ್ತಿದೆ ಎಂದು ಇಡೀ ವಿಶ್ವವೇ ನೋಡುತ್ತಿದೆ: ಅಮಿತ್ ಶಾ

ಕೋವಿಡ್-19 ಸಾಂಕ್ರಾಮಿಕ ರೋಗ ವಿರುದ್ಧ ಭಾರತ ದೇಶದ ಹೋರಾಟವನ್ನು ಇಡೀ ವಿಶ್ವ ಪ್ರಶಂಸಿಸುತ್ತಿದೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಗಿಡ ನೆಡುವ ಅಭಿಯಾನಕ್ಕೆ ಗೃಹ ಸಚಿವ ಅಮಿತ್ ಶಾ ಚಾಲನೆ ನೀಡಿದರು.
ಗಿಡ ನೆಡುವ ಅಭಿಯಾನಕ್ಕೆ ಗೃಹ ಸಚಿವ ಅಮಿತ್ ಶಾ ಚಾಲನೆ ನೀಡಿದರು.

ಗುರುಗ್ರಾಮ್(ಹರ್ಯಾಣ):ಕೋವಿಡ್-19 ಸಾಂಕ್ರಾಮಿಕ ರೋಗ ವಿರುದ್ಧ ಭಾರತ ದೇಶದ ಹೋರಾಟವನ್ನು ಇಡೀ ವಿಶ್ವ ಪ್ರಶಂಸಿಸುತ್ತಿದೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಕೇಂದ್ರ ಸೇನಾ ಪೊಲೀಸ್ ಪಡೆ(ಸಿಎಪಿಎಫ್)ನ ಗಿಡ ನೆಡುವ ಅಭಿಯಾನವನ್ನು ಹರ್ಯಾಣದ ಗುರುಗ್ರಾಮ್ ನಲ್ಲಿರುವ ಖಾದರ್ಪುರ್ ನಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆ(ಸಿಆರ್ ಪಿಎಫ್) ಕಚೇರಿ ಆವರಣದಲ್ಲಿ ಗಿಡ ನೆಟ್ಟು ನೀರುಣಿಸುವ ಮೂಲಕ ಆರಂಭಿಸಿ ಮಾತನಾಡಿದ ಅವರು, ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಭದ್ರತಾ ಪಡೆಗಳ ಕಾರ್ಯ ಮತ್ತು ಕೊಡುಗೆಗಳನ್ನು ಶ್ಲಾಘಿಸಿದರು.

ಭಾರತ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರ. ಇಷ್ಟು ಜನಸಂಖ್ಯೆ ಹೊಂದಿರುವ ದೇಶ ಹೇಗೆ ಕೊರೋನಾ ವಿರುದ್ಧ ಹೋರಾಡಬಹುದು ಎಂದು ಎಲ್ಲರೂ ಭಾವಿಸಿದ್ದರು. ಆದರೆ ಇಂದು ಭಾರತ ಕೊರೋನಾ ವಿರುದ್ಧ ಯಶಸ್ವಿಯಾಗಿ ಯಾವ ರೀತಿ ಹೋರಾಡುತ್ತಿದೆ ಎಂದು ಇಡೀ ವಿಶ್ವವೇ ನೋಡುತ್ತಿದೆ ಎಂದರು.

ಇದರಲ್ಲಿ ನಮ್ಮ ಭದ್ರತಾ ಪಡೆಗಳ ಪಾತ್ರ ಬಹುಮುಖ್ಯವಾಗಿದೆ. ಈ ಕೊರೋನಾ ವಾರಿಯರ್ಸ್ ಗೆ ನಾನು ವಂದನೆ ಹೇಳುತ್ತೇನೆ, ಇವರಿಗೆ ಭಯೋತ್ಪಾದಕರ ವಿರುದ್ಧ ಹೇಗೆ ಹೋರಾಡಬೇಕೆಂದು ಗೊತ್ತಿರುವುದು ಮಾತ್ರವಲ್ಲದೆ ಜನರಿಗೆ ಸಹಾಯ ಮಾಡುತ್ತಾ ಕೊರೋನಾ ವಿರುದ್ಧ ಹೇಗೆ ಹೋರಾಡಬೇಕೆಂಬುದು ಸಹ ತಿಳಿದಿದೆ ಎಂದರು.

ಈ ಸಂಕಷ್ಟದ ಸಮಯದಲ್ಲಿ ಹಲವು ಜವಾನರು ತಮ್ಮ ಪ್ರಾಣತ್ಯಾಗ ಮಾಡಿದ್ದು ಹುತಾತ್ಮ ಯೋಧರಿಗೆ ನಮನಗಳು. ಅವರ ಕುಟುಂಬದವರಲ್ಲಿ ನಾನು ಮಾತನಾಡಿದ್ದು ಹುತಾತ್ಮ ಯೋಧರ ತ್ಯಾಗ ನಿಷ್ಟ್ರಯೋಜಕವಾಗಲು ಬಿಡುವುದಿಲ್ಲ. ಭಾರತದ ಇತಿಹಾಸದಲ್ಲಿ ಕೊರೋನಾ ವಿರುದ್ಧದ ಹೋರಾಟ ವಿಷಯ ಬಂದಾಗ ಭದ್ರತಾ ಪಡೆ ಯೋಧರ ಕೊಡುಗೆಗಳನ್ನು ಸುವರ್ಣಾಕ್ಷರಗಳಲ್ಲಿ ಬರೆದಿಡಲಾಗುತ್ತದೆ ಎಂದು ಅಮಿತಾ ಶಾ ಕೊಂಡಾಡಿದರು.

ದೇಶಾದ್ಯಂತ 10 ಲಕ್ಷಕ್ಕೂ ಹೆಚ್ಚು ಗಿಡ ನೆಡುವ ಅಭಿಯಾನವನ್ನು ಕೇಂದ್ರ ಸೇನಾ ಪೊಲೀಸ್ ಪಡೆ ಹಮ್ಮಿಕೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com