ಬಿಜೆಪಿ ಸೇರುವುದಿಲ್ಲ, ರಾಜಸ್ತಾನದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಾಕಷ್ಟು ಶ್ರಮಪಟ್ಟಿದ್ದೆ: ಸಚಿನ್ ಪೈಲಟ್

ನಾನು ಬಿಜೆಪಿಗೆ ಹೋಗುವುದಿಲ್ಲ, ರಾಜಸ್ತಾನದಲ್ಲಿ ಕೆಲವು ನಾಯಕರು ನಾನು ಬಿಜೆಪಿಗೆ ಹೋಗುತ್ತೇನೆ ಎಂದು ಊಹಾಪೋಹ ಹಬ್ಬಿಸುತ್ತಿದ್ದಾರೆ, ಆದರೆ ನಾನು ಬಿಜೆಪಿ ಸೇರುವುದಿಲ್ಲ ಎಂದು ಕಾಂಗ್ರೆಸ್ ನಿಂದ ಉಚ್ಛಾಟಿತಗೊಂಡಿರುವ ಸಚಿನ್ ಪೈಲಟ್ ಹೇಳಿದ್ದಾರೆ.
ಸಚಿನ್ ಪೈಲಟ್
ಸಚಿನ್ ಪೈಲಟ್

ಜೈಪುರ:ನಾನು ಬಿಜೆಪಿಗೆ ಹೋಗುವುದಿಲ್ಲ, ರಾಜಸ್ತಾನದಲ್ಲಿ ಕೆಲವು ನಾಯಕರು ನಾನು ಬಿಜೆಪಿಗೆ ಹೋಗುತ್ತೇನೆ ಎಂದು ಊಹಾಪೋಹ ಹಬ್ಬಿಸುತ್ತಿದ್ದಾರೆ, ಆದರೆ ನಾನು ಬಿಜೆಪಿ ಸೇರುವುದಿಲ್ಲ ಎಂದು ಕಾಂಗ್ರೆಸ್ ನಿಂದ ಉಚ್ಛಾಟಿತಗೊಂಡಿರುವ ಸಚಿನ್ ಪೈಲಟ್ ಹೇಳಿದ್ದಾರೆ.

ಈ ಕುರಿತು ಪಿಟಿಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು ರಾಜಸ್ತಾನದಲ್ಲಿ ಕಳೆದ ನಾಲ್ಕೈದು ದಿನಗಳಿಂದ ನಡೆದ ರಾಜಕೀಯ ಬೆಳವಣಿಗೆಗಳ ನಂತರ ನಾನು ಬಿಜೆಪಿಗೆ ಹೋಗುತ್ತೇನೆ ಎಂಬ ವದಂತಿ ದಟ್ಟವಾಗಿ ಹಬ್ಬಿದೆ, ಆದರೆ ನಾನು ಬಿಜೆಪಿ ಸೇರುವುದಿಲ್ಲ ಎಂದು ಮತ್ತೊಮ್ಮೆ  ಸ್ಪಷ್ಟಪಡಿಸುತ್ತೇನೆ ಎಂದರು.

ರಾಜಸ್ತಾನದಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರಲು ನಾನು ಸಾಕಷ್ಟು ಕಷ್ಟಪಟ್ಟಿದ್ದೆ. ಅದಕ್ಕೆ ತಕ್ಕ ಪ್ರತಿಫಲ ನನಗೆ ಸಿಕ್ಕಿಲ್ಲ, ಮುಖ್ಯಮಂತ್ರಿ ಅಶೋಕ್ ಗೆಹ್ಲೊಟ್ ಅವರ ಕಾರ್ಯವೈಖರಿ ನನಗೆ ಹೊಂದಿಕೆಯಾಗುತ್ತಿರಲಿಲ್ಲ. ನನ್ನ ವಿರುದ್ಧ ತನಿಖೆಗೆ ಪೊಲೀಸ್ ಆದೇಶ ಹೊರಡಿಸಿದ್ದು ನನ್ನ ಆತ್ಮಗೌರವಕ್ಕೆ ಧಕ್ಕೆಯಾಗಿದೆ ಎಂದು ಸಚಿನ್ ಪೈಲಟ್ ಹೇಳಿದ್ದಾರೆ.

ನಿನ್ನೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗದ ಸಚಿನ್ ಪೈಲಟ್ ಅವರನ್ನು ಕಾಂಗ್ರೆಸ್ ರಾಜ್ಯಾಧ್ಯಕ್ಷ ಮತ್ತು ಉಪ ಮುಖ್ಯಮಂತ್ರಿ ಹುದ್ದೆಯಿಂದ ವಜಾಗೊಳಿಸಲಾಯಿತು. ಇದಕ್ಕೆ ನಂತರ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿದ್ದ ಸಚಿನ್ ಪೈಲಟ್, ಸತ್ಯವನ್ನು ಗದರಿಸಬಹುದು, ಆದರೆ ಸೋಲಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

सत्य को परेशान किया जा सकता है पराजित नहीं।

ಸಚಿನ್ ಪೈಲಟ್ ಅವರ ನಿಷ್ಠಾವಂತ ಇಬ್ಬರು ಸಚಿವರುಗಳನ್ನು ಕೂಡ ಸಂಪುಟದಿಂದ ವಜಾ ಮಾಡಲಾಗಿದೆ. 2018ರಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕ ಸ್ಥಾನಗಳನ್ನು ಪಡೆದು ಗೆದ್ದುಕೊಂಡ ಬಳಿಕ ಅಶೋಕ್ ಗೆಹ್ಲೊಟ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಿಕೊಂಡಾಗಲೇ ಸಚಿನ್ ಪೈಲಟ್ ಮತ್ತು ಅವರ ನಿಷ್ಠಾವಂತರಿಗೆ ಅಸಮಾಧಾನವಾಗಿತ್ತು. ಸಚಿನ್ ಪೈಲಟ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ಅರ್ಹರು ಎಂದು ಹೇಳುತ್ತಿದ್ದರು.

ಭಿನ್ನಮತ ಭುಗಿಲೆದ್ದಿದ್ದು ಹೇಗೆ: ಸಚಿನ್ ಪೈಲಟ್ ಅವರು ತಮ್ಮ ನಿಷ್ಠಾವಂತ ಶಾಸಕರೊಡಗೂಡಿ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದ್ದಾರೆ, ಹಣದ ಆಮಿಷವೊಡ್ಡಿ ಶಾಸಕರನ್ನು ಸೆಳೆಯುತ್ತಿದ್ದಾರೆ ಎಂಬ ಆರೋಪದ ಮೇಲೆ ರಾಜ್ಯ ಪೊಲೀಸ್ ವಿಶೇಷ ಕಾರ್ಯಪಡೆ(ಎಸ್ಒಜಿ)ಕಳೆದ ವಾರ ಸಚಿನ್ ಪೈಲಟ್ ಅವರಿಗೆ ಸಮ್ಮನ್ಸ್ ಜಾರಿ ಮಾಡಿತ್ತು. ಇದಕ್ಕೂ ಮುನ್ನ ಎಸ್ ಒಜಿ ಕೇಸು ದಾಖಲಿಸಿತ್ತು. ಇದು ತಮ್ಮ ಆತ್ಮಗೌರವಕ್ಕೆ ತೀವ್ರ ಧಕ್ಕೆ ತಂದಿದೆ ಎಂದು ಸಚಿನ್ ಪೈಲಟ್ ಆರೋಪಿಸಿದ್ದರು.

ಅನರ್ಹತೆ ನೊಟೀಸ್: ನಿನ್ನೆಯ ಸಿಎಲ್ ಪಿ ಸಭೆಗೆ ಹಾಜರಾಗದ ಸಚಿನ್ ಪೈಲಟ್ ಮತ್ತು ಇತರ ಶಾಸಕರಿಗೆ ಅನರ್ಹತೆ ನೊಟೀಸ್ ಕಳುಹಿಸಲಾಗಿದೆ. ಇನ್ನು ಎರಡು ದಿನಗಳೊಳಗೆ ಉತ್ತರಿಸದಿದ್ದರೆ ಕಾಂಗ್ರೆಸ್ ಶಾಸಕಾಂಗ ಪಕ್ಷದಿಂದ ಸದಸ್ಯತ್ವವನ್ನು ಹಿಂತೆಗೆದುಕೊಂಡಿದ್ದಾರೆ ಎಂದು ಪರಿಗಣಿಸಲಾಗುವುದು ಎಂದು ರಾಜಸ್ತಾನ ಕಾಂಗ್ರೆಸ್ ಉಸ್ತುವಾರಿ ಅವಿನಾಶ್ ಪಾಂಡೆ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com