ಆ್ಯಪ್ ಬ್ಯಾನ್ ಬೆನ್ನಲ್ಲೇ, ಭಾರತೀಯ ಸಿಬ್ಬಂದಿಗಳನ್ನು ಕೆಲಸದಿಂದ ತೆಗೆದು ಹಾಕಿದ ಚೀನಾದ ಯುಸಿ ಬ್ರೌಸರ್!

ಗಲ್ವಾನ್ ಸಂಘರ್ಷದ ಬಳಿಕ 59 ಚೀನಾ ಆ್ಯಪ್ ಗಳನ್ನು ಭಾರತ ನಿಷೇಧಿಸಿದ ಬೆನ್ನಲ್ಲೇ ಕೋಟ್ಯಂತರ ನಷ್ಟ ಅನುಭವಿಸುತ್ತಿರುವ ಚೀನಾ ಸಂಸ್ಥೆಗಳು ಇದೀಗ ಕಾಸ್ಟ್ ಕಟ್ಟಿಂಗ್ (ವೆಚ್ಚ ತಗ್ಗಿಸುವ) ರೂಪದಲ್ಲಿ ಭಾರತೀಯ ಸಿಬ್ಬಂದಿಗಳನ್ನು ಕೆಲಸದಿಂದ ವಜಾ ಮಾಡುವ ಕೃತ್ಯಕ್ಕೆ ಕೈ ಹಾಕಿವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಗಲ್ವಾನ್ ಸಂಘರ್ಷದ ಬಳಿಕ 59 ಚೀನಾ ಆ್ಯಪ್ ಗಳನ್ನು ಭಾರತ ನಿಷೇಧಿಸಿದ ಬೆನ್ನಲ್ಲೇ ಕೋಟ್ಯಂತರ ನಷ್ಟ ಅನುಭವಿಸುತ್ತಿರುವ ಚೀನಾ ಸಂಸ್ಥೆಗಳು ಇದೀಗ ಕಾಸ್ಟ್ ಕಟ್ಟಿಂಗ್ (ವೆಚ್ಚ ತಗ್ಗಿಸುವ) ರೂಪದಲ್ಲಿ ಭಾರತೀಯ ಸಿಬ್ಬಂದಿಗಳನ್ನು ಕೆಲಸದಿಂದ ವಜಾ ಮಾಡುವ ಕೃತ್ಯಕ್ಕೆ ಕೈ ಹಾಕಿವೆ.

ಹೌದು.. ಭಾರತವು 59 ಚೀನಿ ಆ್ಯಪ್ ಗಳನ್ನು ನಿಷೇಧಿಸಿದ ಬಳಿಕ ಚೀನಾ ಮೂಲದ ಆಲಿಬಾಬಾ ಗ್ರೂಪ್ ಮಾಲೀಕತ್ವದ ಯುಸಿ ವೆಬ್ ಬ್ರೌಸರ್ ಭಾರತದಲ್ಲಿರುವ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದೆ. ಈ ಬಗ್ಗೆ ರಾಯಿಟರ್ಸ್ ಸುದ್ದಿಸಂಸ್ಥೆ ವರದಿ ಮಾಡಿದ್ದು, ಲಾಕ್ ಡೌನ್ ಬಳಿಕ ಮತ್ತು ಗಲ್ವಾನ್ ಸಂಘರ್ಷದ  ಬಳಿಕ ಯುಸಿ ಬ್ರೌಸರ್ ಮತ್ತು ವಿಮೇಟ್ ವಿಡಿಯೋ ಆ್ಯಪ್ ಜುಲೈ 15ರಂದು ಉದ್ಯೋಗಗಳಿಗೆ ಕತ್ತರಿ  ಹಾಕುವ ಕುರಿತು ನಿರ್ಧಾರ ಕೈಗೊಂಡಿದೆ. ಅದರಂತೆ ಗುರುಗಾಂವ್ ನಲ್ಲಿರುವ ಕಚೇರಿಯಲ್ಲಿ 100ಕ್ಕೂ ಅಧಿಕ ಸಿಬ್ಬಂದಿಗಳನ್ನು ಸಂಸ್ಥೆ ಕೆಲಸದಿಂದ ವಜಾ ಮಾಡಿದೆ ಎನ್ನಲಾಗಿದೆ. 

ಮತ್ತೊಂದು ಮೂಲಗಳ ಪ್ರಕಾರ ಯುಸಿ ಬ್ರೌಸರ್ ಸಂಸ್ಥೆ ಭಾರತದಲ್ಲಿರುವ ತನ್ನ ಎಲ್ಲ ವ್ಯವಹಾರಗಳನ್ನೂ ರದ್ದು ಮಾಡಲು ಮುಂದಾಗಿದೆ ಎಂದು ಹೇಳಲಾಗಿದೆ. ಆದರೆ ಈ ವರೆಗೂ ಯುಸಿ ಬ್ರೌಸರ್ ಸಂಸ್ಛೆ ಸಿಬ್ಬಂದಿ ಕಡಿತದ ಬಗ್ಗೆಯಾಗಲೀ ಅಥವಾ ಭಾರತದಲ್ಲಿ ತನ್ನ ಕಾರ್ಯಾಚರಣೆ ನಿಲ್ಲಿಸುವ ಕುರಿತು ಅಧಿಕೃತ ಯಾವುದೇ ಹೇಳಿಕೆ ನೀಡಿಲ್ಲ. 

ಸಂಸ್ಥೆಯ ಆಂತರಿಕ ಮೂಲಗಳು ತಿಳಿಸಿರುವಂತೆ ಕೊರೋನಾ ವೈರಸ್ ಲಾಕ್ ಡೌನ್ ಮತ್ತು ಗಲ್ವಾನ್ ಸಂಘರ್ಷದ ಬಳಿಕ ಚೀನಾ ಮೂಲದ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಸರ್ಕಾರಗಳು ಕೈಗೊಳ್ಳುತ್ತಿರುವ ನಿರ್ಣಯಗಳಿಂದಾಗಿ ಯುಸಿ ಬ್ರೌಸರ್ ಸಾಕಷ್ಟು ನಷ್ಟ ಅನುಭವಿಸುತ್ತಿದೆ. ಇದೇ ಕಾರಣಕ್ಕೆ ಸಂಸ್ಛೆ ಭಾರತದಲ್ಲಿ ತನ್ನೆಲ್ಲಾ ಕಾರ್ಯಾಚರಣೆ ಸ್ಥಗಿತ ಮಾಡಲು ನಿರ್ಧರಿಸಿದೆ ಎನ್ನಲಾಗಿದೆ.  ಭಾರತದಲ್ಲಿ ಯುಸಿ ಬ್ರೌಸರ್ ಅನ್ನು 130 ಮಿಲಿಯನ್ ಜನರು ಬಳಸುತ್ತಿದ್ದಾರೆ.  

ಭಾರತೀಯ ಮಾರಾಟಗಾರರಿಗೆ ಬಾಕಿ ಮೊತ್ತ ತಡೆಹಿಡಿದ ಕ್ಲಬ್ ಫ್ಯಾಕ್ಟರಿ
ಮತ್ತೊಂದೆಡೆ ಇ ಕಾಮರ್ಸ್ ಆ್ಯಪ್ ಕ್ಲಬ್ ಫ್ಯಾಕ್ಟರಿ ಭಾರತೀಯ ಮಾರಾಟಗಾರರಿಗೆ ನೀಡಬೇಕಾಗಿರುವ ಬಾಕಿ ಮೊತ್ತವನ್ನು ತಡೆಹಿಡಿದಿದೆ. ಕ್ಲಬ್ ಫ್ಯಾಕ್ಟರಿ ಆ್ಯಪ್ ಮತ್ತು ವೆಬ್ ಸೈಟ್ ಮೇಲಿನ ನಿಷೇಧ ಹಿಂಪಡೆಯುವವರೆಗೂ ಮಾರಾಟಗಾರರೊಂದಿಗಿನ ಎಲ್ಲಾ ಬಾಕಿ ಮೊತ್ತವನ್ನು ತಡೆಹಿಡಿಯಲಾಗಿದೆ” ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಭಾರತದಲ್ಲಿ ಕ್ಲಬ್ ಫ್ಯಾಕ್ಟರಿಯ ಸುಮಾರು 30 ಸಾವಿರ ಮಾರಾಟಗಾರರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com