ಐಐಟಿ ಪ್ರವೇಶಕ್ಕೆ ಈ ವರ್ಷ 12ನೇ ತರಗತಿ ಪರೀಕ್ಷೆ ಅಂಕಗಳು ಮಾನದಂಡವಲ್ಲ: ಕೇಂದ್ರ ಸರ್ಕಾರ

ದೇಶದ ಪ್ರಮುಖ ಎಂಜಿನಿಯರಿಂಗ್ ಶಿಕ್ಷಣ ಸಂಸ್ಥೆ ಭಾರತೀಯ ತಾಂತ್ರಿಕ ಸಂಸ್ಥೆ(ಐಐಟಿ)ಯಲ್ಲಿ ಈ ವರ್ಷ ಪ್ರವೇಶಕ್ಕೆ 12ನೇ ತರಗತಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಗಳಿಸಿದ ಅಂಕಗಳು ಪರಿಗಣನೆಯಾಗುವುದಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ:ದೇಶದ ಪ್ರಮುಖ ಎಂಜಿನಿಯರಿಂಗ್ ಶಿಕ್ಷಣ ಸಂಸ್ಥೆ ಭಾರತೀಯ ತಾಂತ್ರಿಕ ಸಂಸ್ಥೆ(ಐಐಟಿ)ಯಲ್ಲಿ ಈ ವರ್ಷ ಪ್ರವೇಶಕ್ಕೆ 12ನೇ ತರಗತಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಗಳಿಸಿದ ಅಂಕಗಳು ಪರಿಗಣನೆಯಾಗುವುದಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ದೇಶದ ಪ್ರತಿಷ್ಠಿತ ಐಐಟಿ ಶಿಕ್ಷಣ ಸಂಸ್ಥೆಯಲ್ಲಿ ಪ್ರವೇಶ ಪಡೆಯಬೇಕಾದರೆ ವಿದ್ಯಾರ್ಥಿಗಳು ಜಂಟಿ ಪ್ರವೇಶ ಪರೀಕ್ಷೆ(ಸುಧಾರಿತ)ದಲ್ಲಿ (JEE Advanced) ತೇರ್ಗಡೆ ಹೊಂದುವುದರ ಜೊತೆಗೆ 12ನೇ ತರಗತಿ ಬೋರ್ಡ್ ಪರೀಕ್ಷೆಯಲ್ಲಿ ಶೇಕಡಾ 75ರಷ್ಟು ಅಂಕ ಗಳಿಸಿರಬೇಕು ಅಥವಾ ಅರ್ಹತೆ ಪರೀಕ್ಷೆಗಳಲ್ಲಿ ಟಾಪ್ 20 ರ್ಯಾಂಕ್ ಪಡೆದಿರಬೇಕು.

ಆದರೆ ಈ ವರ್ಷ 12ನೇ ತರಗತಿಯಲ್ಲಿ ಶೇಕಡಾ 75ರಷ್ಟು ಅಂಕ ಗಳಿಸಿರಬೇಕು ಎಂಬ ಮಾನದಂಡವನ್ನು ತೆಗೆದುಹಾಕಲಾಗಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ರಮೇಶ್ ಪೊಕ್ರಿಯಾಲ್ ನಿಶಾಂಕ್ ತಿಳಿಸಿದ್ದಾರೆ.

ಸಿಬಿಎಸ್ಇ, ಐಸಿಎಸ್ಇ ಮತ್ತು ಸ್ಟೇಟ್ ಬೋರ್ಡ್ ಗಳು ಈ ವರ್ಷ 12ನೇ ತರಗತಿಯ ಕೆಲವು ಪರೀಕ್ಷೆಗಳನ್ನು ಕೋವಿಡ್-19 ಹಿನ್ನೆಲೆಯಲ್ಲಿ ರದ್ದುಗೊಳಿಸಿದ್ದರಿಂದ ಈ ವರ್ಷ ಜೆಇಇ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಅಭ್ಯರ್ಥಿಗಳು 12ನೇ ತರಗತಿಯಲ್ಲಿ ಎಷ್ಟು ಅಂಕ ಗಳಿಸಿದ್ದರೂ ಕೂಡ ಐಐಟಿ ಪ್ರವೇಶಕ್ಕೆ ಅರ್ಹರು ಎಂದು ಪರಿಗಣಿಸಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.

ಈ ವರ್ಷ ಸೆಪ್ಟೆಂಬರ್1ರಿಂದ 6ರ ಮಧ್ಯದಲ್ಲಿ ಜೆಇಇ ಮುಖ್ಯ ಪರೀಕ್ಷೆ ನಡೆಸಿ ಎಂಜಿನಿಯರಿಂಗ್ ಕಾಲೇಜುಗಳ ಪ್ರವೇಶಕ್ಕೆ ದಿನಾಂಕವನ್ನು ಕೇಂದ್ರ ಸರ್ಕಾರ ಘೋಷಿಸಿದೆ. ಐಐಟಿಗಳ ಪ್ರವೇಶಕ್ಕೆ ಜೆಇಇ(ಸುಧಾರಿತ) ಪರೀಕ್ಷೆ ಸೆಪ್ಟೆಂಬರ್ 27ರಂದು ನಡೆಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com