ಬಲಶಾಲಿ ನಾಯಕನಂತೆ ಕಲ್ಪಿತ ವ್ಯಕ್ತಿತ್ವ ತೋರಿಕೆ ಈಗ ಭಾರತದ ಅತಿದೊಡ್ಡ ದೌರ್ಬಲ್ಯ: ಮೋದಿ ವಿರುದ್ಧ ರಾಹುಲ್ ಗಾಂಧಿ ಟೀಕೆ

ಭಾರತ-ಚೀನಾ ಗಡಿಯ ಸಂಘರ್ಷ ವಿಚಾರದಲ್ಲಿ ಚೀನಾದ ಸೇನೆ ಇನ್ನೂ ಭಾರತದ ಪ್ರಾಂತ್ಯದೊಳಗೆ ಎಂದು ಮತ್ತೆ ಪ್ರತಿಪಾದಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ಮೇಲೆ ವಾಗ್ದಾಳಿ ಮುಂದುವರಿಸಿದ್ದಾರೆ.
ರಾಹುಲ್ ಗಾಂಧಿ(ಸಂಗ್ರಹ ಚಿತ್ರ)
ರಾಹುಲ್ ಗಾಂಧಿ(ಸಂಗ್ರಹ ಚಿತ್ರ)

ನವದೆಹಲಿ: ಭಾರತ-ಚೀನಾ ಗಡಿಯ ಸಂಘರ್ಷ ವಿಚಾರದಲ್ಲಿ ಚೀನಾದ ಸೇನೆ ಇನ್ನೂ ಭಾರತದ ಪ್ರಾಂತ್ಯದೊಳಗೆ ಎಂದು ಮತ್ತೆ ಪ್ರತಿಪಾದಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ಮೇಲೆ ವಾಗ್ದಾಳಿ ಮುಂದುವರಿಸಿದ್ದಾರೆ.

ನರೇಂದ್ರ ಮೋದಿಯವರು ಒಬ್ಬ ಬಲಶಾಲಿ ನಾಯಕ ಎಂದು ನಕಲಿ ವ್ಯಕ್ತಿತ್ವವನ್ನು ಕಲ್ಪಿಸಿ ಅಧಿಕಾರಕ್ಕೆ ಬಂದರು, ತಾವು 56 ಇಂಚು ಎದೆಯ ಪ್ರಧಾನಿ ಎಂಬ ಅವರ ಹೇಳಿಕೆಯನ್ನು ಅವರು ಇಂದು ಉಳಿಸಿಕೊಳ್ಳಲು ಸುಳ್ಳು ಹೇಳುತ್ತಿದ್ದಾರೆ,  ಅವರ ವ್ಯಕ್ತಿತ್ವ, ಮಾತುಗಳು ಈಗ ಭಾರತಕ್ಕೆ ದೊಡ್ಡ ದೌರ್ಬಲ್ಯವಾಗಿದೆ ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ.

ಟ್ವಿಟ್ಟರ್ ನಲ್ಲಿ ವಿಡಿಯೊ ಸಂದೇಶ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, ಒಬ್ಬ ನಕಲಿ ಬಲಶಾಲಿ ನಾಯಕನ ವ್ಯಕ್ತಿತ್ವ ಸೃಷ್ಟಿಸಿ ಮೋದಿ ಅಧಿಕಾರಕ್ಕೆ ಬಂದರು. ಅದು ಅವರ ಬಹುದೊಡ್ಡ ಶಕ್ತಿ, ಆದರೆ ಭಾರತ ದೇಶದ ಬಹುದೊಡ್ಡ ದೌರ್ಬಲ್ಯವೂ ಹೌದು ಎಂದಿದ್ದಾರೆ.

ಚೀನಾ ದೇಶದ ಕುತಂತ್ರ ಆಟ, ಕಾರ್ಯತಂತ್ರದ ಯೋಜನೆ ಬಗ್ಗೆ ಮಾತನಾಡಿರುವ ಅವರು, ಇಲ್ಲಿ ಚೀನಾದ ಕಾರ್ಯತಂತ್ರ ಮತ್ತು ಆಟ ಕೇವಲ ಒಂದು ಗಡಿ ಸಮಸ್ಯೆಯಲ್ಲ, ಚೀನಾ ಇನ್ನೂ ಭಾರತದ ಪ್ರಾಂತ್ಯವನ್ನು ಆಕ್ರಮಿಸಿಕೊಂಡಿರುವುದು ನನಗೆ ಆತಂಕವನ್ನುಂಟುಮಾಡುತ್ತಿದೆ. ತನ್ನ ಕುತಂತ್ರದ ಕಾರ್ಯತಂತ್ರವಿಲ್ಲದೆ ಚೀನಾ ಯಾವುದನ್ನೂ ಮಾಡುವುದಿಲ್ಲ. ಸರಕಾರದ ಆತುರದ ಕ್ರಮಗಳಿಂದ ಭಾರತದ ದೊಡ್ಡ ಬೆಲೆ ತೆರಲಿದೆ. ವಿಶ್ವದ ಭೂಪಟವನ್ನು ಮತ್ತೆ ರಚಿಸಬೇಕು ಎಂಬ ದುರಾಸೆಯನ್ನು ಚೀನಾ ಹೊಂದಿದೆ ಎಂದು ರಾಹುಲ್‌ ಗಾಂಧಿ ವಿಡಿಯೋದಲ್ಲಿ ಪ್ರಸ್ತಾಪಿಸಿ ಮೋದಿ ಸರಕಾರವನ್ನು ಟೀಕಿಸಿದ್ದಾರೆ.

ತಮ್ಮ ಕುತಂತ್ರ, ಕಾರ್ಯತಂತ್ರದ ಮೂಲಕ ಗಲ್ವಾನ್, ಡೆಮ್ಚೊಕ್ ಅಥವಾ ಪಾಂಗೊಂಗ್ ಲೇಕ್ ಯಾವುದೇ ಆಗಿರಲಿ ಅಲ್ಲಿ ತನ್ನ ಸ್ಥಾನವನ್ನು ಹೆಚ್ಚಿಸಿಕೊಳ್ಳಲು ಚೀನಾ ನೋಡುತ್ತಿದೆ. ತನ್ನ ಸ್ಥಾನವನ್ನು ಹೆಚ್ಚಿಸಿಕೊಂಡು ಭದ್ರಪಡಿಸಿಕೊಳ್ಳುವುದು ಚೀನಾದ ತಂತ್ರವಾಗಿದೆ, ಇದು ಕೇವಲ ಗಡಿ ಸಮಸ್ಯೆ ಮಾತ್ರವಲ್ಲ, ಗಡಿಯ ಮೂಲಕ ಭಾರತದ ಪ್ರಧಾನಿ ಮೇಲೆ ಒತ್ತಡ ಹಾಕುವ ತಂತ್ರ ಎಂದು ರಾಹುಲ್ ಗಾಂಧಿ ವಿಡಿಯೊದಲ್ಲಿ ಹೇಳಿದ್ದಾರೆ.

ನಮ್ಮ ಹೆದ್ದಾರಿಯಿಂದ ಚೀನಾಗೆ ಸಮಸ್ಯೆ ಉಂಟಾಗಿದೆ. ಆದ್ದರಿಂದ ಅವರು ನಮ್ಮ ಹೆದ್ದಾರಿಯನ್ನು ಅನಗತ್ಯವಾಗಿಸಲು ಬಯಸುತ್ತಿದೆ. ಜೊತೆಗೆ ಚೀನಾ ಕಾಶ್ಮೀರದಲ್ಲಿ ಪಾಕಿಸ್ತಾನದೊಂದಿಗೆ ಏನಾದರೂ ಮಾಡಲು ಬಯಸುತ್ತಿದೆ ಎಂದು ಹೇಳಿದ್ದಾರೆ.

ಚೀನಾ ದೇಶ ನಮ್ಮ ಪ್ರಾಂತ್ಯದೊಳಗೆ ಬಂದು ಕುಳಿತಿದೆ, ಆದರೆ ಪ್ರಧಾನಿ ಮೋದಿಯವರು ಇಲ್ಲ ಎನ್ನುತ್ತಿದ್ದಾರೆ. ತಮ್ಮ ವ್ಯಕ್ತಿತ್ವವನ್ನು, ಮರ್ಯಾದೆಯನ್ನು ಉಳಿಸಿಕೊಳ್ಳಲು ಪ್ರಧಾನಿ ಮೋದಿ ದೇಶದ ಜನತೆ ಮುಂದೆ ಸುಳ್ಳು ಹೇಳುತ್ತಿರುವುದು, ತಮಗೆ ಬೇಕಾದಂತೆ ವಸ್ತುಸ್ಥಿತಿಯನ್ನು ತಿರುಚುತ್ತಿರುವುದು ನನಗೆ ಆತಂಕವನ್ನುಂಟುಮಾಡುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com