ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ: ಹೇಗಿರಲಿದೆ ದೇವಾಲಯ, ಏನಿದರ ವಿಶೇಷ?

ದೇಶದಲ್ಲಿ ಬಹು ಚರ್ಚಿತವಾಗುವ ಮತ್ತೊಂದು ವಿಷಯ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ. ಇದಕ್ಕೆ ಆಗಸ್ಟ್ 5ರಂದು ಶಂಕುಸ್ಥಾಪನೆ ನೆರವೇರಲಿದ್ದು ಪ್ರಧಾನಿ ನರೇಂದ್ರ ಮೋದಿ ಸೇರಿ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ಅಯೋಧ್ಯೆಗೆ ಪ್ರವೇಶಿಸುವ ದ್ವಾರ
ಅಯೋಧ್ಯೆಗೆ ಪ್ರವೇಶಿಸುವ ದ್ವಾರ

ಅಯೋಧ್ಯೆ/ನವದೆಹಲಿ:ದೇಶದಲ್ಲಿ ಬಹು ಚರ್ಚಿತವಾಗುವ ಮತ್ತೊಂದು ವಿಷಯ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ. ಇದಕ್ಕೆ ಆಗಸ್ಟ್ 5ರಂದು ಶಂಕುಸ್ಥಾಪನೆ ನೆರವೇರಲಿದ್ದು ಪ್ರಧಾನಿ ನರೇಂದ್ರ ಮೋದಿ ಸೇರಿ ಹಲವು ಗಣ್ಯರು ಭಾಗವಹಿಸಲಿದ್ದಾರೆ.

ಹಾಗಾದರೆ ಇದರ ವಿಶೇಷತೆಯೇನು, ಹೇಗೆ ನಿರ್ಮಿಸಲಾಗುತ್ತದೆ, ಎಷ್ಟು ವರ್ಷದಲ್ಲಿ ನಿರ್ಮಾಣವಾಗಲಿದೆ ಎಂಬುದಕ್ಕೆ ಇಲ್ಲಿದೆ ಉತ್ತರ:
ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳಲಿರುವ ರಾಮ ಮಂದಿರದ ಎತ್ತರ 161 ಅಡಿಗಳು. ಇದರ ಮೂಲ ವಿನ್ಯಾಸವನ್ನು 1988ರಲ್ಲಿಯೇ ತಯಾರಿಸಲಾಗಿತ್ತಂತೆ. ಆಗ ಇದರ ಎತ್ತರವನ್ನು 141 ಅಡಿ ಎಂದು ನಮೂದಿಸಲಾಗಿತ್ತು. 30 ವರ್ಷಗಳು ಕಳೆದ ನಂತರ ಇದೀಗ ಅದರ ಎತ್ತರವನ್ನು ಸ್ವಲ್ಪ ಹೆಚ್ಚಿಸಲಾಗಿದೆ.

ಹಿಂದೂ ಜನರ ಧಾರ್ಮಿಕ ಭಾವನೆ, ಭಕ್ತಿಯ ಪ್ರತೀಕವಾಗಿರುವ ಅಯೋಧ್ಯೆ ರಾಮ ಮಂದಿರ ನಿರ್ಮಾಣವನ್ನು ಕಣ್ತುಂಬಿಕೊಳ್ಳಲು ದೇಶದ ಅದೆಷ್ಟೋ ಜನರು ಕಾತರದಿಂದ ಕಾಯುತ್ತಿದ್ದಾರೆ. ಹೀಗಾಗಿ 141 ಅಡಿ ಎತ್ತರದ ಬದಲು 161 ಅಡಿ ಎತ್ತರಕ್ಕೆ ಹೆಚ್ಚಿಸಲು ನಿರ್ಧರಿಸಿದೆವು ಎಂದು ದೇವಾಲಯದ ಮುಖ್ಯ ವಾಸ್ತುಶಿಲ್ಪಿ ಸಿ ಸೊಂಪುರ ಅವರ ಪುತ್ರ ನಿಖಿಲ್ ಸೊಂಪುರ ತಿಳಿಸಿದ್ದಾರೆ.

ಹೊಸ ವಿನ್ಯಾಸದಲ್ಲಿ ಎರಡು ಮಂಟಪಗಳನ್ನು ಸೇರಿಸಲಾಗಿದೆ. ಹಿಂದಿನ ವಿನ್ಯಾಸದಂತೆ ದೇವಸ್ಥಾನಗಳ ಸ್ಥಂಭಗಳು ಮತ್ತು ಕಲ್ಲುಗಳನ್ನು ಬಳಸಲಾಗುತ್ತದೆ. ಕೇವಲ ಎರಡು ಮಂಟಪಗಳನ್ನು ಹೊಸದಾಗಿ ವಿನ್ಯಾಸದಲ್ಲಿ ಸೇರಿಸಲಾಗುತ್ತದೆ. ದೇವಸ್ಥಾನ ಕಟ್ಟಲು ಸುಮಾರು ಮೂರೂವರೆ ವರ್ಷಗಳು ಹಿಡಿಯಬಹುದು ಎಂದು ಸೊಂಪುರಾ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಪ್ರಧಾನಿಗಳ ಸಮ್ಮುಖದಲ್ಲಿ ಭೂಮಿಪೂಜೆ ನೆರವೇರಿದ ನಂತರ ನಿರ್ಮಾಣ ಕಾರ್ಯ ಆರಂಭವಾಗಲಿದೆ. ಎಲ್ ಅಂಡ್ ಟಿ ಕಂಪೆನಿಯ ತಂಡ ಯಂತ್ರೋಪಕರಣ ಮತ್ತು ಇತರ ಸಾಮಗ್ರಿಗಳೊಂದಿಗೆ ಸ್ಥಳಕ್ಕೆ ಆಗಮಿಸಿದ್ದು ಶಂಕುಸ್ಥಾಪನೆ ಕಾರ್ಯಕ್ಕೆ ಸಿದ್ಧತೆ ನಡೆಯುತ್ತಿದೆ. ಭೂಮಿ ಪೂಜೆಗೆ ಮೂರು ದಿನಗಳ ಮೊದಲೇ ಆಗಸ್ಟ್ 3ರಿಂದ ವೈದಿಕ ಕಾರ್ಯ, ಸಂಪ್ರದಾಯ ಆರಂಭವಾಗಲಿದೆ. ಶಂಕುಸ್ಥಾಪನೆಯಾಗಿ 40 ಕೆಜಿಯ ಬೆಳ್ಳಿಯ ಇಟ್ಟಿಗೆ ಇಡಲಾಗುತ್ತದೆ ಎಂದು ನಿಖಿಲ್ ಸೊಂಪುರಾ ತಿಳಿಸಿದ್ದಾರೆ.

ಶಂಕು ಸ್ಥಾಪನೆ ಕಾರ್ಯಕ್ರಮವನ್ನು ವೀಕ್ಷಿಸಲು ಅಯೋಧ್ಯೆ ಸುತ್ತ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ ಎಂದು ರಾಮ ಜನ್ಮಭೂಮಿ ತೀರ್ಥ ಕ್ಷೇತ್ ಟ್ರಸ್ಟ್  ತಿಳಿಸಿದೆ. ಇದುವೇ ದೇವಸ್ಥಾನದ ನಿರ್ಮಾಣ ಕಾರ್ಯದ ಉಸ್ತುವಾರಿ ವಹಿಸಿಕೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com