'ಜಲ ಜೀವನ ಅಭಿಯಾನ' ಮೂಲಕ ದೇಶದಲ್ಲಿ ಪ್ರತಿದಿನ 1 ಲಕ್ಷ ಜನರಿಗೆ ನೀರಿನ ಸಂಪರ್ಕ: ಪ್ರಧಾನಿ ನರೇಂದ್ರ ಮೋದಿ

ದೇಶದಲ್ಲಿ ಪ್ರತಿದಿನ ಒಂದು ಲಕ್ಷ ಜನರಿಗೆ ನೀರಿನ ಸಂಪರ್ಕ ಒದಗಿಸಲಾಗುತ್ತಿದ್ದು ಜಲಜೀವನ ಅಭಿಯಾನದಿಂದ ಇದು ಸಾಧ್ಯವಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ದೇಶದಲ್ಲಿ ಪ್ರತಿದಿನ ಒಂದು ಲಕ್ಷ ಜನರಿಗೆ ನೀರಿನ ಸಂಪರ್ಕ ಒದಗಿಸಲಾಗುತ್ತಿದ್ದು ಜಲಜೀವನ ಅಭಿಯಾನದಿಂದ ಇದು ಸಾಧ್ಯವಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಅವರು ಇಂದು ದೆಹಲಿಯಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ಮಣಿಪುರ ಜಲ ಪೂರೈಕೆ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು. ಇಂದು ಪ್ರತಿದಿನ ಸುಮಾರು 1 ಲಕ್ಷ ಜನರಿಗೆ ನೀರಿನ ಸಂಪರ್ಕವನ್ನು ದೇಶಾದ್ಯಂತ ನೀಡಲಾಗುತ್ತಿದೆ.ಇದರಿಂದ ಅನೇಕ ತಾಯಂದಿರಿಗೆ, ಸಹೋದರಿಯರಿಗೆ ನೀರಿಗೆ ಏನು ಮಾಡುವುದು, ಎಲ್ಲಿಗೆ ಹೋಗುವುದು ಎಂಬ ಚಿಂತೆ ದೂರಾಗಿದೆ ಎಂದರು.

ಜಲ ಜೀವನ ಅಭಿಯಾನವನ್ನು ಒಂದು ಸಾಮೂಹಿಕ ಚಳವಳಿಯನ್ನಾಗಿ ಮಾಡಿಕೊಂಡಿದ್ದಕ್ಕೆ ಇದು ಸಾಧ್ಯವಾಗಿದೆ. ಗ್ರಾಮಗಳಲ್ಲಿ ಜನರು ಮತ್ತು ಜನಪ್ರತಿನಿಧಿಗಳು ಎಲ್ಲಿ ಪೈಪ್ ಹಾಕಬೇಕು, ಎಲ್ಲಿ ನೀರು ಸಿಗಬಹುದು, ಟ್ಯಾಂಕ್ ಎಲ್ಲಿ ಕಟ್ಟಬಹುದು, ಎಷ್ಟು ಬಜೆಟ್ ಬೇಕಾಗಬಹುದು ಎಂದು ನಿರ್ಧರಿಸುತ್ತಾರೆ. ಇದರಿಂದ ನೀರಿನ ಪೂರೈಕೆ ಚೆನ್ನಾಗಿ ಒದಗಿಸಲು ಸಾಧ್ಯವಾಗಿದೆ ಎಂದರು.

ಮಣಿಪುರ ನೀರಿನ ಸಂಪರ್ಕ ಬಗ್ಗೆ ಮಾತನಾಡಿದ ಮೋದಿ, ಮಣಿಪುರದ ಜನರಿಗೆ ಇಂದು ಮರೆಯಲಾಗದ ದಿನ. ಸುಮಾರು 3 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುವ ಈ ಜಲ ಪೂರೈಕೆ ಯೋಜನೆಯಿಂದ ಮಣಿಪುರ ಜನತೆಗೆ ತುಂಬಾ ಸಹಕಾರಿಯಾಗಲಿದೆ ಎಂದರು.

ಜಲಧಾರಾ ಎಂದು ಕರೆಯಲ್ಪಡುವ ಈ ಯೋಜನೆಯಿಂದ 25 ನಗರಗಳು ಮತ್ತು 1700 ಗ್ರಾಮಗಳಿಗೆ ನೀರು ಒದಗಿಸಲಾಗುತ್ತದೆ. ಮುಂದಿನ 22 ವರ್ಷಗಳವರೆಗೆ ಜನರ ನೀರಿನ ಅವಶ್ಯಕತೆಯನ್ನು ಮನಸ್ಸಿನಲ್ಲಿಟ್ಟುಕೊಂಡು ಈ ಯೋಜನೆ ನಿರ್ಮಿಸಲಾಗುತ್ತಿದೆ. ಇದರಿಂದ ಲಕ್ಷಾಂತರ ಜನರಿಗೆ ಶುದ್ಧ ಕುಡಿಯುವ ನೀರು ಸಿಗುವುದಲ್ಲದೆ ಸಾವಿರಾರು ಮಂದಿಗೆ ಉದ್ಯೋಗ ಕೂಡ ದೊರಕುತ್ತದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com