ಮಹಾರಾಷ್ಟ್ರ ಸರ್ಕಾರದ ಸ್ಟೀರಿಂಗ್ ನನ್ನ ಕೈಯಲ್ಲಿದೆ:ಉದ್ಧವ್ ಠಾಕ್ರೆ

ಸರ್ಕಾರವನ್ನು ಕೆಡವಲು ವಿರೋಧ ಪಕ್ಷ ಪ್ರಯತ್ನಿಸುತ್ತಿದ್ದರೆ ಅದು ಸಫಲವಾಗುವುದಿಲ್ಲ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮೂರು ಚಕ್ರದ ಸರ್ಕಾರದಲ್ಲಿ ಸ್ಟೀರಿಂಗ್ ವೀಲ್ ತಮ್ಮ ಕೈಯಲ್ಲಿದ್ದು ಅದು ಗಟ್ಟಿಯಾಗಿದೆ ಎಂದಿದ್ದಾರೆ.
ಉದ್ಧವ್ ಠಾಕ್ರೆ
ಉದ್ಧವ್ ಠಾಕ್ರೆ

ಮುಂಬೈ: ಸರ್ಕಾರವನ್ನು ಕೆಡವಲು ವಿರೋಧ ಪಕ್ಷ ಪ್ರಯತ್ನಿಸುತ್ತಿದ್ದರೆ ಅದು ಸಫಲವಾಗುವುದಿಲ್ಲ ಎಂದಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮೂರು ಚಕ್ರದ ಸರ್ಕಾರದಲ್ಲಿ ಸ್ಟೀರಿಂಗ್ ವೀಲ್ ತಮ್ಮ ಕೈಯಲ್ಲಿದ್ದು ಅದು ಗಟ್ಟಿಯಾಗಿದೆ ಎಂದಿದ್ದಾರೆ.

ಮೈತ್ರಿಪಕ್ಷವಾಗಿರುವ ಎನ್ ಸಿಪಿ ಮತ್ತು ಕಾಂಗ್ರೆಸ್ ತಮ್ಮ ಮೇಲೆ ವಿಶ್ವಾಸ ಹೊಂದಿದ್ದು ಮಹಾ ವಿಕಾಸ ಅಘಡಿ(ಎಂವಿಎ) ಅನುಭವದಿಂದ ಆಡಳಿತ ನಡೆಸುತ್ತದೆ, ಮೈತ್ರಿ ಮುರಿದು ಬೀಳುವ ಪ್ರಮೇಯವೇ ಇಲ್ಲ, ವಿರೋಧ ಪಕ್ಷ ಕನಸು ಕಾಣಬೇಕಾಗಿಲ್ಲ ಎಂದು ಹೇಳಿದ್ದಾರೆ.

ನಮ್ಮ ಸರ್ಕಾರದ ಭವಿಷ್ಯ ವಿರೋಧ ಪಕ್ಷದ ಕೈಯಲ್ಲಿಲ್ಲ.ಸ್ಟೀರಿಂಗ್ ನನ್ನ ಕೈಯಲ್ಲಿದೆ. ಮೂರು ಚಕ್ರದ ಆಟೋ ರಿಕ್ಷಾ ಬಡ ಜನರ ವಾಹನ. ಇಬ್ಬರು ಹಿಂದೆ ಕುಳಿತಿರುತ್ತಾರೆ, ಒಬ್ಬ ಮುಂದೆ ಸೀಟಿನಲ್ಲಿ ಕುಳಿತು ಚಲಾಯಿಸುತ್ತಿರುತ್ತಾನೆ, ನಮ್ಮ ಸರ್ಕಾರ ಕೂಡ ಅದೇ ರೀತಿ ಎಂದು ಶಿವಸೇನೆಯ ಮುಖವಾಣಿ ಸಾಮ್ನಾಕ್ಕೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.ಅವರು ನಾಳೆ ತಮ್ಮ 60ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.

ಸರ್ಕಾರವನ್ನು ಕೆಡವಬೇಕೆಂದರೆ ಸೆಪ್ಟೆಂಬರ್-ಅಕ್ಟೋಬರ್ ವರೆಗೆ ಏಕೆ ಕಾಯಬೇಕು, ನಿಮಗೆ ಖುಷಿ ಸಿಗುವುದಾದರೆ ಈಗಲೇ ಮುರಿಯಿರಿ. ಕೆಲವರು ರಚನಾತ್ಮಕ ಕೆಲಸಗಳಿಂದ ಖುಷಿ ಕಂಡರೆ ಇನ್ನು ಕೆಲವರು ಕೆಡವುದರಿಂದ, ನಾಶ ಮಾಡುವುದರಿಂದ ಸಂತೋಷ ಅನುಭವಿಸುತ್ತಾರೆ. ನಿಮಗೆ ಹಾಳು ಮಾಡುವುದರಲ್ಲಿ ಸಂತೋಷ ಸಿಗುವುದಾದರೆ ಅದನ್ನು ಮಾಡಿ ಎಂದು ವಿರೋಧ ಪಕ್ಷವನ್ನುದ್ದೇಶಿಸಿ ಹೇಳಿದರು.

ಪ್ರಜಾಸತ್ತಾತ್ಮಕ ತತ್ವಗಳಿಗೆ ವಿರುದ್ಧವಾಗಿ ರಚಿಸಿದ ಸರ್ಕಾರವನ್ನು ಕೆಡವುದಾದರೆ ಅದು ಪ್ರಜಾಪ್ರಭುತ್ವವಾಗುತ್ತದೆಯೇ ಎಂದು ಬಿಜೆಪಿಯನ್ನು ಕೇಳಿದರು.

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಮುಂಬೈ-ಅಹಮದಾಬಾದ್ ಮಧ್ಯೆ ಬುಲೆಟ್ ರೈಲಿಗೆ ಬದಲಾಗಿ ಮುಂಬೈಯಿಂಗ ನಾಗ್ಪುರಕ್ಕೆ ಬುಲೆಟ್ ರೈಲನ್ನು ತಾವು ಬಯಸುವುದಾಗಿ ಹೇಳಿದರು.

ಕೋವಿಡ್-19 ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಮುಂದಿನ ತಿಂಗಳು ಆರಂಭದಲ್ಲಿ ನೆರವೇರಲಿರುವ ರಾಮ ಮಂದಿರ ನಿರ್ಮಾಣದ ಶಂಕುಸ್ಥಾಪನೆಯನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ನಡೆಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು.

ತಾವು ಅಯೋಧ್ಯೆಗೆ ಹೋಗಬಹುದು, ಆದರೆ ಅಲ್ಲಿ ಲಕ್ಷಾಂತರ ರಾಮ ಭಕ್ತರು ತಮ್ಮನ್ನು ತಡೆದರೆ ಏನು ಮಾಡುವುದು ಎಂದು ಪ್ರಶ್ನಿಸಿದರು. ಕಳೆದ ಮಾರ್ಚ್ ತಿಂಗಳಲ್ಲಿ ಆಗಿನ್ನೂ ಕೊರೋನಾ ದೇಶದಲ್ಲಿ ಕಾಣಿಸಿಕೊಂಡಿತ್ತು. ತಾವು ಮುಖ್ಯಮಂತ್ರಿಯಾಗಿ 100 ದಿನಗಳಾಗಿದ್ದಕ್ಕೆ ವಿಶೇಷ ಪೂಜೆ ಸಲ್ಲಿಸಲು ಅಯೋಧ್ಯೆಗೆ ಹೋಗಿದ್ದರು. ಆಗ ಸರಯೂ ನದಿಯಲ್ಲಿ ಆರತಿ ಮಾಡುವುದಕ್ಕೆ ತಮ್ಮನ್ನು ತಡೆದರು ಎಂದು ಉದ್ಧವ್ ಠಾಕ್ರೆ ನೆನಪಿಸಿಕೊಂಡರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com