ರಾಜಸ್ಥಾನ ಸಚಿವ ಸಂಪುಟ ಸಭೆ: ರಾಜ್ಯಪಾಲರ ಪ್ರಶ್ನೆಗಳಿಗೆ ಉತ್ತರಿಸಲು ಸಿದ್ಧ, ಜುಲೈ 31ರಂದೇ ಅಧಿವೇಶನ ಎಂದ ಸಿಎಂ ಗೆಹ್ಲೂಟ್ ಬಣ

ರಾಜಸ್ಥಾನ ರಾಜಕೀಯ ಬಿಕ್ಕಟ್ಟು ಮುಂದುವರೆದಿರುವಂತೆಯೇ ಇತ್ತ ಸಿಎಂ ಆಶೋಕ್ ಗೆಹ್ಲೂಟ್ ಅವರು ಇಂದು ಸಚಿವ ಸಂಪುಟ ಸಭೆ ನಡೆಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಜೈಪುರ: ರಾಜಸ್ಥಾನ ರಾಜಕೀಯ ಬಿಕ್ಕಟ್ಟು ಮುಂದುವರೆದಿರುವಂತೆಯೇ ಇತ್ತ ಸಿಎಂ ಆಶೋಕ್ ಗೆಹ್ಲೂಟ್ ಅವರು ಇಂದು ಸಚಿವ ಸಂಪುಟ ಸಭೆ ನಡೆಸಿದ್ದಾರೆ.

ಈ ಹಿಂದೆ ರಾಜಸ್ಛಾನ ರಾಜ್ಯಪಾಲ ಕಲ್ರಾಜ್ ಮಿಶ್ರಾ ಅವರು ವಿಧಾನಸಭೆ ಅಧಿವೇಶನ ನಡೆಸುವ ಕುರಿತು ಕೆಲ ಪ್ರಶ್ನೆಗಳನ್ನು ಕೇಳಿದ್ದರು. ಇದೇ ಪ್ರಶ್ನೆಗಳ ವಿಚಾರವಾಗಿ ಗೆಹ್ಲೂಟ್ ಅವರು, ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಅಲ್ಲದೆ ರಾಜ್ಯಪಾಲರು ಇಟ್ಟಿರುವ ಬೇಡಿಕೆಯಲ್ಲಿನ ಅಂಶಗಳಿಗೆ ಅನುಗುಣವಾಗಿ ಜುಲೈ 31ರಂದು ವಿಧಾನಸಭೆ ಅಧಿವೇಶನ ನಡೆಸುವ ಕುರಿತು ಗಂಭೀರ ಚಿಂತನೆ ನಡೆಸಿದೆ.

ಈ ಬಗ್ಗೆ ಮಾಹಿತಿ ನೀಡಿರುವ ರಾಜಸ್ಥಾನ ಸಾರಿಗೆ ಸಚಿವ ಪ್ರತಾಪ್ ಸಿಂಗ್ ಅವರು, ಸಂಪುಟ ಸಭೆಯಲ್ಲಿ ರಾಜ್ಯಪಾಲರು ಕೇಳಿದ ಹಲವು ಅಂಶಗಳ ಕುರಿತು ಚರ್ಚೆ ನಡೆಸಲಾಗಿದೆ ಎಂದು ಹೇಳಿದರು.

ಕ್ಯಾಬಿನೆಟ್ ಸಭೆಯಲ್ಲಿ ಜುಲೈ 31ರಿಂದ ಸರ್ಕಾರ ಅಧಿವೇಶನ ನಡೆಸಲು ತೀರ್ಮಾನಿಸಿದೆ. ಅಂತೆಯೇ ಸರ್ಕಾರ ಸುಭದ್ರವಾಗಿದ್ದು, ಹೀಗಾಗಿ ನಾವು ಪ್ರತಿಕ್ರಿಯೆ ನೀಡುವವರೆಗೂ  ಅವರು ಮತ್ತೆ ಪ್ರಶ್ನೆಗಳನ್ನು ಕೇಳಬಾರದು. ಸರ್ಕಾರ ಯಾವುದೇ ಕಾರಣಕ್ಕೂ ರಾಜ್ಯಪಾಲರೊಂದಿಗಿನ ತಿಕ್ಕಾಟವನ್ನು ಬಯಸುವುದಿಲ್ಲ. ಸಚಿವ ಸಂಪುಟ ಸಭೆಯ ನಿರ್ಣಯವನ್ನು ರಾಜ್ಯಪಾಲರು ಒಪ್ಪಿಕೊಳ್ಳಲ್ಲಿದ್ದಾರೆ ಎಂದು ಭಾವಿಸುತ್ತೇವೆ. ಜುಲೈ 31ರ ಅಧಿವೇಶನಕ್ಕೆ ರಾಜ್ಯಪಾಲರು ಅನುಮತಿ ನೀಡುವ ವಿಶ್ವಾಸವಿದೆ ಎಂದು ಹೇಳಿದರು.

ಅಧಿವೇಶನ ನಡೆಸುವುದು ಸರ್ಕಾರದ ಹಕ್ಕು. ಇದಕ್ಕಾಗಿ ರಾಜ್ಯಪಾಲರ ಅನುಮತಿ ಬೇಕು. ಒಂದು ವೇಳೆ ಅವರು ಅನುಮತಿ ನಿರಾಕರಿಸಿದರೆ ಆಗ ರಾಜ್ಯಪಾಲರೂ ಕೂಡ ಬಿಜೆಪಿ ವಕ್ತಾರರು ಎಂಬುದು ಸ್ಪಷ್ಟವಾಗುತ್ತದೆ. ಈ ದೇಶದಲ್ಲಿ ಸಂವಿಧಾನಕ್ಕೆ ಯಾವುದೇ ರೀತಿಯ ಮನ್ನಣೆ ಇಲ್ಲ ಎಂಬುದು ಸಾಬೀತಾಗುತ್ತದೆ. ಆಗ ನಾವು ಮುಂದಿನ ಮಾರ್ಗದ ಕುರಿತು ಚರ್ಚೆ ನಡೆಸುತ್ತೇವೆ. ನಾವು ಈಗಲೂ ಹೇಳುತ್ತೇವೆ ರಾಜ್ಯಪಾಲರೇ ಸರ್ಕಾರದ ಪ್ರಮುಖರು. ಒಂದು ಕುಟುಂಬದಲ್ಲಿ ಹೇಗೆ ಹಿರಿಯರಿಗೆ ಬೆಲೆ ನೀಡುತ್ತೇವೆಯೋ ಹಾಗೆ ನಾವು ರಾಜ್ಯಪಾಲರಿಗೆ ಗೌರವ ನೀಡುತ್ತೇವೆ ಎಂದು ಸಿಂಗ್ ಹೇಳಿದ್ದಾರೆ.

ಇನ್ನು ಅಧಿವೇಶನದ ಅಜೆಂಡಾ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಂಗ್, ಈ ಬಗ್ಗೆ ವಿಧಾನಸಭೆಯ ವ್ಯವಹಾರ ಸಲಹಾ ಸಮಿತಿ ನಿರ್ಧರಿಸುತ್ತದೆ ಎಂದು ಹೇಳಿದರು. ಇದೇ ವೇಳೆ ಬಿಜೆಪಿ ವಿರುದ್ಧ ಕಿಡಿಕಾರಿದ ಸಿಂಗ್ ಅವರು ಸರ್ಕಾರವನ್ನು ಉರುಳಿಸಲು ಯತ್ನಿಸುತ್ತಿದ್ದಾರೆ. ಸರ್ಕಾರವನ್ನು ಉರುಳಿಸುವುದನ್ನೇ ಪ್ರತಿಷ್ಠೆಯನ್ನಾಗಿಸಿ ಕೊಂಡಿದೆ. ಆದರೆ ಬಿಜೆಪಿಯ ಅಸಂವಿಧಾನಿಕ ನಿಲುವು ಈಗ ಜಗಜ್ಜಾಹಿರಾಗಿದೆ ಎಂದು ಹೇಳಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com