ರಾಷ್ಟ್ರೀಯ ಶಿಕ್ಷಣ ನೀತಿ-2020: ಪರಿಣಾಮವೇನು, ಗಣ್ಯರು ಏನಂತಾರೆ? 

ಕೇಂದ್ರ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿ-2020ಕ್ಕೆ ಅನುಮೋದನೆ ನೀಡಿದೆ. ತ್ರಿಭಾಷಾ ಸೂತ್ರಕ್ಕೆ ಕೆಲವು ರಾಜ್ಯಗಳು ವಿರೋಧ ವ್ಯಕ್ತಪಡಿಸಿದ್ದು ತಮಿಳು ನಾಡು ಅವುಗಳಲ್ಲಿ ಒಂದು. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಚೆನ್ನೈ: ಕೇಂದ್ರ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿ-2020ಕ್ಕೆ ಅನುಮೋದನೆ ನೀಡಿದೆ. ತ್ರಿಭಾಷಾ ಸೂತ್ರಕ್ಕೆ ಕೆಲವು ರಾಜ್ಯಗಳು ವಿರೋಧ ವ್ಯಕ್ತಪಡಿಸಿದ್ದು ತಮಿಳು ನಾಡು ಅವುಗಳಲ್ಲಿ ಒಂದು. 

ರಾಷ್ಟ್ರೀಯ ಶಿಕ್ಷಣ ನೀತಿ-2020ರಲ್ಲಿ ಆರ್ಥಿಕ ಮತ್ತು ಸಾಮಾಜಿಕ ಹಿಂದುಳಿಯುವಿಕೆಯನ್ನು ಸಮಾನವಾಗಿ ಪರಿಗಣಿಸಲಾಗಿದೆ. ವಾಸ್ತವವಾಗಿ ಸಾಮಾಜಿಕ ಮತ್ತು ಆರ್ಥಿಕ ಹಿಂದುಳಿಯುವಿಕೆಯನ್ನು ಸಮಾನವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂಬುದು ವಿರೋಧ ಮಾಡುವವರ ವಾದವಾಗಿದೆ. ಇನ್ನು ಭಾಷಾ ನೀತಿಯನ್ನು ತೆಗೆದುಕೊಂಡರೆ ಹಿಂದಿ ಭಾಷೆ ಕಲಿಕೆ ಕಡ್ಡಾಯವಲ್ಲ ಎಂದು ಕೇಂದ್ರ ಸರ್ಕಾರ ಹೇಳಿದ್ದು, ಆಯಾ ರಾಜ್ಯ ಸರ್ಕಾರಗಳು ತಮ್ಮಿಚ್ಚೆಯ ಮೂರು ಭಾಷೆಗಳನ್ನು ಪಠ್ಯದಲ್ಲಿ ಸೇರಿಸಬಹುದು ಎಂದು ಹೇಳಿದೆ.

ಹೊಸ ಶಿಕ್ಷಣ ನೀತಿಯಲ್ಲಿ ಹೇಳಿರುವ ಶಾಲಾ ಶಿಕ್ಷಣ: ನಿನ್ನೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಶಾಲಾ ಶಿಕ್ಷಣದಲ್ಲಿ 5ನೇ ತರಗತಿಯವರೆಗೆ ಮಕ್ಕಳ ಶಿಕ್ಷಣದ ಮಾಧ್ಯಮ ಇನ್ನೂ ಮುಂದುವರಿದು 8ನೇ ತರಗತಿಯವರೆಗೆ ಸ್ಥಳೀಯ ಭಾಷೆಯಲ್ಲಿದ್ದರೆ ಒಳ್ಳೆಯದು ಎಂದು ಹೇಳಿದೆ. ಆದರೆ ಇದು ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳಿಗೆ ಕೂಡ ಅನ್ವಯವಾಗುತ್ತದೆಯೇ ಎಂಬುದು ರಾಷ್ಟ್ರೀಯ ಶಿಕ್ಷಣ ನೀತಿ-2020ರಲ್ಲಿ ಸ್ಪಷ್ಟವಾಗಿಲ್ಲ. 

ಈಗಿರುವ 10+2 ಶಿಕ್ಷಣ ವ್ಯವಸ್ಥೆಯನ್ನು 5+3+3+4 ಸೂತ್ರದಲ್ಲಿ ವಿಂಗಡಿಸಲಾಗುತ್ತದೆ. ಅದರರ್ಥ ಮೊದಲ 5 ವರ್ಷಗಳು ಮಕ್ಕಳ ಕಲಿಕೆಗೆ ಭದ್ರ ಬುನಾದಿ ಹಾಕಿಕೊಡುವ ಹಂತವಾಗಿದ್ದು ಅದು 3 ವರ್ಷ ಪ್ರಾಥಮಿಕ ಪೂರ್ವ 1 ಮತ್ತು 2ನೇ ತರಗತಿಯಾಗಿರುತ್ತದೆ.

ಮುಂದಿನ ಮೂರು ವರ್ಷ ಅಂದರೆ 3ರಿಂದ 5ನೇ ತರಗತಿಯವರೆಗೆ ಪೂರ್ವ ಸಿದ್ದತಾ ಹಂತವೆಂದು ವಿಂಗಡಿಸಲಾಗಿದೆ. ನಂತರದ ಮೂರು ಮಾಧ್ಯಮಿಕ ಹಂತದ ವರ್ಷ 6ರಿಂದ 8ನೇ ತರಗತಿ ಮತ್ತು ಮತ್ತೆ ನಾಲ್ಕು ವರ್ಷ ದ್ವಿತೀಯ ಹಂತ ಅಂದರೆ 9ರಿಂದ 12ನೇ ತರಗತಿಯಾಗಿರುತ್ತದೆ. 

ಶಾಲೆಗಳಲ್ಲಿ ಕಲಾ,ವಾಣಿಜ್ಯ, ವಿಜ್ಞಾನ ಎಂಬ ಕಲಿಕೆಗೆ ಪ್ರತ್ಯೇಕ ಕಟ್ಟುನಿಟ್ಟಿನ ವಿಭಾಗವಿರುವುದಿಲ್ಲ. ವಿದ್ಯಾರ್ಥಿಗಳು ತಮ್ಮಿಚ್ಚೆಯ ವಿಭಾಗವನ್ನು ಆರಿಸಿಕೊಂಡು ಕಲಿಯಬಹುದು. ವಿದ್ಯಾರ್ಥಿಗಳ ಕೌಶಲ್ಯ ಮತ್ತು ಸಾಮರ್ಥ್ಯಗಳಿಗೆ ಅನುಗುಣವಾಗಿ ಸವಿಸ್ತಾರ ವರದಿಯನ್ನು ವರ್ಷದ ಕೊನೆಗೆ ರಿಪೋರ್ಟ್ ಕಾರ್ಡ್ ನಲ್ಲಿ ನೀಡಲಾಗುತ್ತದೆ. 6ನೇ ತರಗತಿ ನಂತರ ವೃತ್ತಿಪರ ಶಿಕ್ಷಣ ನೀಡಲಾಗುತ್ತದೆ. 

ಈ ಬಗ್ಗೆ ತಮಿಳು ನಾಡಿನ ಶಿಕ್ಷಣ ವಿಶ್ಲೇಷಕರಾದ ಪ್ರಿನ್ಸ್ ಗಜೇಂದ್ರಬಾಬು ಹೇಳುವುದು ಹೀಗೆ: ನಗರ ಪ್ರದೇಶಗಳ ಮಕ್ಕಳಿಗೆ ವಿಭಿನ್ನ ಕೌಶಲ್ಯಗಳನ್ನು, ಹೊಸ ವಿದ್ಯೆಗಳನ್ನು ಕಲಿತುಕೊಳ್ಳಲು ಇದು ಸಹಾಯವಾಗಬಹುದೇ ಹೊರತು ಗ್ರಾಮೀಣ ಭಾಗಗಳ ಮಕ್ಕಳಿಗೆ ಹೆಚ್ಚು ಪ್ರಯೋಜನವಾಗಬಹುದು ಎಂದು ನನಗೆ ಅನಿಸುವುದಿಲ್ಲ. ರೈತರು ತಮ್ಮ ಮಕ್ಕಳನ್ನು ಶಾಲೆಗೆ ಹೋಗಿ ಹೊಸ ವಿದ್ಯೆ ಕಲಿಯಲಿ, ಕೌಶಲ್ಯ ಕಲಿಯಲಿ, ಹೊಸದನ್ನು ಕಲಿತು ನಾಳೆ ಭವಿಷ್ಯದಲ್ಲಿ ಉತ್ತಮ ಜೀವನ ಸಾಗಿಸಲಿ ಎಂದು ಬಯಸುತ್ತಾರೆ. ಸರ್ಕಾರದ ಈ ನೀತಿಯಿಂದ ಸಾಮಾಜಿಕವಾಗಿ, ಆರ್ಥಿಕವಾಗಿ ಜನರನ್ನು ಸುಧಾರಿಸುವ ಮನಸ್ಥಿತಿ ಕಾಣುತ್ತಿಲ್ಲ ಎನ್ನುತ್ತಾರೆ.

ಉನ್ನತ ಶಿಕ್ಷಣ: ಉನ್ನತ ಶಿಕ್ಷಣದಲ್ಲಿ 2035ರ ವೇಳೆಗೆ ಒಟ್ಟು ದಾಖಲಾತಿ ಅನುಪಾತದಲ್ಲಿ ಶೇ.50ರಷ್ಟಾಗಬೇಕೆಂದು ಮತ್ತು ಬಹು ಪ್ರವೇಶ ಮತ್ತು ನಿರ್ಗಮನಕ್ಕೆ ಅವಕಾಶ ನೀಡಬೇಕೆಂದು ಶಿಕ್ಷಣ ನೀತಿಯಲ್ಲಿ ಹೇಳಲಾಗಿದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(ಎನ್ ಟಿಎ) ಮೂಲಕ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಿ ವಿಶ್ವವಿದ್ಯಾಲಯಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಕಲ್ಪಿಸಲಾಗುತ್ತದೆ. 

ಕಾನೂನು ಮತ್ತು ವೈದ್ಯಕೀಯ ಪದವಿ ಹೊರತುಪಡಿಸಿ ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಒಂದು ಪ್ರಾಧಿಕಾರ ಆಡಳಿತ ನಡೆಸುತ್ತದೆ. ಇದರಿಂದ ಶಿಕ್ಷಣದಲ್ಲಿ ರಾಜ್ಯ ಸರ್ಕಾರಗಳ ಪಾಲ್ಗೊಳ್ಳುವಿಕೆ ಕಡಿಮೆಯಾಗಿ ಕೇಂದ್ರ ಸರ್ಕಾರ ಹೆಚ್ಚು ಅಧಿಕಾರವನ್ನು ಹೊಂದುತ್ತದೆ.

ಸ್ಥಳೀಯ ಭಾಷೆಗಳಲ್ಲಿ ಇ-ಕೋರ್ಸ್ ಗಳನ್ನು, ವರ್ಚುವಲ್ ಲ್ಯಾಬ್ ಗಳನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ರಾಷ್ಟ್ರೀಯ ಶೈಕ್ಷಣಿಕ ತಂತ್ರಜ್ಞಾನ ವೇದಿಕೆ(ಎನ್ಇಟಿಎಫ್)ಗಳನ್ನು ರಚಿಸಲಾಗುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ಸಾರ್ವಜನಿಕ ಹೂಡಿಕೆಯನ್ನು ಬಳಸಿ ಜಿಡಿಪಿಯನ್ನು ಶೇಕಡಾ 6ಕ್ಕೆ ತಲುಪುವುದು ಸರ್ಕಾರದ ಗುರಿಯಾಗಿದೆ. 

ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಸ್ವಾಗತಿಸಿದ್ದಾರೆ. ಶಿಕ್ಷಣ ವಲಯಕ್ಕೆ ಉತ್ತೇಜನ ನೀಡುವುದಲ್ಲದೆ ದೇಶದ ಯುವಜನತೆ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪೈಪೋಟಿ ಎದುರಿಸಲು ಸಾಧ್ಯ ಎಂದು ಹೇಳಿದ್ದಾರೆ.

5ನೇ ತರಗತಿಯವರೆಗೆ ಮಕ್ಕಳಿಗೆ ಸ್ಥಳೀಯ ಭಾಷೆ ಅಥವಾ ಮಾತೃಭಾಷೆಯಲ್ಲಿ ಶಿಕ್ಷಣಕ್ಕೆ ಆದ್ಯತೆ ನೀಡಲಾಗಿದ್ದು ಇದು ಮಕ್ಕಳಲ್ಲಿ ಆಲೋಚನೆ ಮಾಡುವ ಶಕ್ತಿ ಬೆಳೆಯಲು, ಕೌಶಲ್ಯ ಬೆಳೆಯಲು ಸಹಕಾರಿಯಾಗಲಿದೆ ಎಂದಿದ್ದಾರೆ. 

ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ಹೊಸ ಅವಕಾಶಗಳು ರಾಷ್ಟ್ರೀಯ ಶಿಕ್ಷಣ ನೀತಿ-2020ರಿಂದ ದೊರಕಲಿದೆ. ಮುಕ್ತ ವಾತಾವರಣದಲ್ಲಿ ತಮ್ಮ ಇಚ್ಛೆಯ ವಿಷಯಗಳನ್ನು ವಿದ್ಯಾರ್ಥಿಗಳು ಉನ್ನತ ಶಿಕ್ಷಣದಲ್ಲಿ ಆಯ್ಕೆ ಮಾಡಿಕೊಳ್ಳಬಹುದು ಎಂದು ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿ.ವಿಯ ಕುಲಪತಿ ನಜ್ಮಾ ಅಖ್ತರ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com