ಮಹಾರಾಷ್ಟ್ರ, ಗುಜರಾತ್ ಗೆ ಅಪ್ಪಳಿಸಲಿದೆ ನಿಸರ್ಗ ಚಂಡಮಾರುತ: ತೀವ್ರ ಕಟ್ಟೆಚ್ಚರ, 31 ಎನ್ ಡಿಆರ್ ಎಫ್ ತಂಡ ನಿಯೋಜನೆ

ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಿಗೆ ತೀವ್ರ ಪ್ರಮಾಣದಲ್ಲಿ ನಿಸರ್ಗ ಚಂಡಮಾರುತ ಅಪ್ಪಳಿಸುವ ಸಾಧ್ಯತೆಯಿದ್ದು ಈ ಹಿನ್ನೆಲೆಯಲ್ಲಿ ರಾಜ್ಯಗಳಲ್ಲಿ ಕೈಗೊಂಡಿರುವ ಸಿದ್ಧತೆ, ಮುನ್ನೆಚ್ಚರಿಕೆಗಳ ಕುರಿತು ಕೇಂದ್ರ ಗೃಹ ಸಚಿವ ಅಮಿತಾ ಶಾ ಸಭೆ ನಡೆಸಿದರು.
ಮೀನುಗಾರಿಕೆ ದೋಣಿಗಳನ್ನು ತೀರಕ್ಕೆ ತರುತ್ತಿರುವುದು
ಮೀನುಗಾರಿಕೆ ದೋಣಿಗಳನ್ನು ತೀರಕ್ಕೆ ತರುತ್ತಿರುವುದು

ನವದೆಹಲಿ:ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಿಗೆ ತೀವ್ರ ಪ್ರಮಾಣದಲ್ಲಿ ನಿಸರ್ಗ ಚಂಡಮಾರುತ ಅಪ್ಪಳಿಸುವ ಸಾಧ್ಯತೆಯಿದ್ದು ಈ ಹಿನ್ನೆಲೆಯಲ್ಲಿ ರಾಜ್ಯಗಳಲ್ಲಿ ಕೈಗೊಂಡಿರುವ ಸಿದ್ಧತೆ, ಮುನ್ನೆಚ್ಚರಿಕೆಗಳ ಕುರಿತು ಕೇಂದ್ರ ಗೃಹ ಸಚಿವ ಅಮಿತಾ ಶಾ ಸಭೆ ನಡೆಸಿದರು.

ಚಂಡಮಾರುತದಿಂದ ಎದುರಾಗಬಹುದಾದ ಪರಿಸ್ಥಿತಿಗಳನ್ನು ನಿಭಾಯಿಸಲು ಕೇಂದ್ರ ಸರ್ಕಾರ ಎಲ್ಲಾ ರೀತಿಯಲ್ಲಿಯೂ ನೆರವು ನೀಡಲು ಸಿದ್ಧವಿದೆ ಎಂದು ಸಚಿವ ಅಮಿತ್ ಶಾ ಇದೇ ಸಂದರ್ಭದಲ್ಲಿ ರಾಜ್ಯಗಳಿಗೆ ಭರವಸೆ ನೀಡಿದ್ದಾರೆ. ಗೃಹ ಸಚಿವಾಲಯ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ 31 ತಂಡಗಳನ್ನು ಮಹಾರಾಷ್ಟ್ರ, ಗುಜರಾತ್, ಕೇಂದ್ರಾಡಳಿತ ಪ್ರದೇಶಗಳಾದ ದಮನ್, ಡಿಯೊ, ದಾದ್ರಾ, ನಗರ್ ಹವೇಲಿಗಳಲ್ಲಿ ನಿಯೋಜಿಸಿದೆ.

ನಿನ್ನೆ ದೆಹಲಿಯಿಂದ ವಿಡಿಯೊ ಕಾನ್ಫರೆನ್ಸ್ ಮೂಲಕ ಗುಜರಾತ್, ಮಹಾರಾಷ್ಟ್ರ ಮುಖ್ಯಮಂತ್ರಿಗಳು, ಹಾಗೂ ಉಳಿದ ಕೇಂದ್ರಾಡಳಿತ ಪ್ರದೇಶಗಳ ಆಡಳಿತಾಧಿಕಾರಿಗಳೊಂದಿಗೆ ಅಮಿತ್ ಶಾ ಸಭೆ ನಡೆಸಿದ್ದಾರೆ.

ನಿಸರ್ಗ ಚಂಡಮಾರುತ: ಮಹಾರಾಷ್ಟ್ರ, ಗುಜರಾತ್, ದಮನ್, ಡಿಯೊ ಭಾಗಗಳಲ್ಲಿ ನಿಸರ್ಗ ಚಂಡಮಾರುತ ಅಪ್ಪಳಿಸುವ ಸಾಧ್ಯತೆಯಿದ್ದು, ಆಗ್ನೇಯ ಮತ್ತು ಪಕ್ಕದ ಪೂರ್ವ-ಮಧ್ಯ ಅರೇಬಿಯನ್ ಸಮುದ್ರ ಮತ್ತು ಲಕ್ಷದ್ವೀಪ ಪ್ರದೇಶದ ಮೇಲೆ ಕಡಿಮೆ ಒತ್ತಡದ ಪ್ರದೇಶವು ಕೇಂದ್ರೀಕೃತವಾಗಿ ಇಂದು ಚಂಡಮಾರುತ ತೀವ್ರಗೊಳ್ಳುವ ಸಾಧ್ಯತೆಯಿದೆ. ಪೂರ್ವ-ಮಧ್ಯ ಅರೇಬಿಯನ್ ಸಮುದ್ರದ ಮೇಲೆ ನಾಳೆಯ ಹೊತ್ತಿಗೆ ಚಂಡಮಾರುತ ತೀವ್ರಗೊಳ್ಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ನಾಳೆಯ ಹೊತ್ತಿಗೆ ಚಂಡಮಾರುತ ಉತ್ತರ ಮಹಾರಾಷ್ಟ್ರ ಮತ್ತು ದಕ್ಷಿಣ ಗುಜರಾತ್ ತೀರಗಳನ್ನು ದಾಟಲಿದೆ. ರಾಯ್ಗಡ್ ಮತ್ತು ದಮನ್ ನಡುವೆ ಸುಮಾರು 260 ಕಿ.ಮೀ ವ್ಯಾಪ್ತಿಯಲ್ಲಿ ಇದರ ಪರಿಣಾಮ ತೀವ್ರವಾಗಿರುತ್ತದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮುಂಬೈ ಅಲ್ಲದೆ, ಥಾಣೆ, ನವೀ-ಮುಂಬೈ, ಪನ್ವೆಲ್, ಕಲ್ಯಾಣ್-ಡೊಂಬಿವ್ಲಿ, ಮೀರಾ-ಭಾಯಂದರ್, ವಸೈ-ವಿರಾರ್, ಉಲ್ಹಾಸ್‌ನಗರ, ಬದ್ಲಾಪುರ ಮತ್ತು ಅಂಬರ್ನಾಥ್‌ನಂತಹ ಸ್ಯಾಟಲೈಟ್ ನಗರಗಳ ಮೇಲೆ ಸಹ ಇದರ ಪರಿಣಾಮ ತೀವ್ರವಾಗಿರುತ್ತದೆ.

ಮಹಾರಾಷ್ಟ್ರ ಸರ್ಕಾರ ಎಚ್ಚರ: ರಾಜ್ಯದ ತೀರಭಾಗಕ್ಕೆ ನಾಳೆ ನಿಸರ್ಗ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರ ತೀರದ ಜಿಲ್ಲೆಗಳಿಗೆ ತೀವ್ರ ಮುನ್ನೆಚ್ಚರಿಕೆ ಘೋಷಿಸಿದೆ.

ಮಹಾರಾಷ್ಟ್ರ ರಾಜ್ಯದಲ್ಲಿ ಕೊರೋನವೈರಸ್  ಪೀಡಿತರ ಸಂಖ್ಯೆ ಹೆಚ್ಚಿದ್ದು, ಅಂಥವರಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುತ್ತಿರುವಾಗ ವಿದ್ಯುತ್ ಪೂರೈಕೆ ಮತ್ತು ಇನ್ನಿತರ ಸೌಲಭ್ಯಗಳ ಪೂರೈಕೆಗೆ ವ್ಯತ್ಯಯವುಂಟಾಗಬಾರದು ಎಂದು ಮುಂಜಾಗ್ರತ ಕ್ರಮ ಕೈಗೊಳ್ಳಲಾಗುತ್ತಿದೆ. ಪಲ್ಗಾರ್ ಮತ್ತು ರಾಯ್ ಗಢ್ ಜಿಲ್ಲೆಗಳ ರಾಸಾಯನಿಕ ಮತ್ತು ಪರಮಾಣು ಶಕ್ತಿ ಸ್ಥಾವರಗಳನ್ನು ಕಾಪಾಡಲು ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೀನುಗಾರರಿಗೆ ಸಮುದ್ರ ತೀರಕ್ಕೆ ಇಳಿಯದಂತೆ ಈಗಾಗಲೇ ಮೀನುಗಾರಿಕೆಗೆ ಹೋದವರನ್ನು ವಾಪಾಸ್ ಕರೆಸಿಕೊಳ್ಳಲಾಗಿದೆ.
ನಿಸರ್ಗ ಚಂಡಮಾರುತ ಹಿನ್ನೆಲೆಯಲ್ಲಿ ಮುಂದಿನ ಎರಡು ಗಂಟೆಗಳಲ್ಲಿ 20-40 ಕಿ.ಮೀ ವೇಗದ ಗಾಳಿಯೊಂದಿಗೆ ಕರ್ನಾಲ್, ಸೋನಿಪತ್, ಹರಿಯಾಣದ ಪಾಣಿಪತ್ ಮತ್ತು ಶಾಮ್ಲಿ, ಭಾಗಪತ್, ಘಜಿಯಾಬಾದ್, ಮೋಡಿನಗರ, ಉತ್ತರ ಪ್ರದೇಶದ ಹಲವು ಜಿಲ್ಲೆಗಳು, ಮೀರತ್ ಮತ್ತು ದೆಹಲಿಯ ಅನೇಕ ಸ್ಥಳಗಳಲ್ಲಿ ಗುಡುಗು ಸಹಿತ ಮಳೆಯಾಗಬಹುದು ಎಂದು ಭಾರತ ಹವಾಮಾನ ಇಲಾಖೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com