ಅನಿವಾಸಿ ಭಾರತೀಯರ ಕೌಶಲ್ಯದ ಸಮರ್ಥ ಬಳಕೆಗೆ ಕ್ರಮ: 'ಸ್ವದೇಶ್' ಜಾರಿಗೆ ತಂದ ಕೇಂದ್ರ ಸರ್ಕಾರ

ವಂದೇ ಭಾರತ್ ಯೋಜನೆಯಡಿಯಲ್ಲಿ ಭಾರತಕ್ಕೆ ಆಗಮಿಸಿರುವ ಅನಿವಾಸಿ ಭಾರತೀಯರ ಕೌಶಲ್ಯವನ್ನು ಸಮರ್ಥವಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ 'ಸ್ವದೇಶ್' ಎಂಬ ಯೋಜನೆ ಘೋಷಣೆ ಮಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ವಂದೇ ಭಾರತ್ ಯೋಜನೆಯಡಿಯಲ್ಲಿ ಭಾರತಕ್ಕೆ ಆಗಮಿಸಿರುವ ಅನಿವಾಸಿ ಭಾರತೀಯರ ಕೌಶಲ್ಯವನ್ನು ಸಮರ್ಥವಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ 'ಸ್ವದೇಶ್' ಎಂಬ ಯೋಜನೆ ಘೋಷಣೆ ಮಾಡಿದೆ.

ಕೊರೋನಾ ವೈರಸ್ ಲಾಕ್ ಡೌನ್ ನಿಂದಾಗಿ ಪಾತಾಳಕ್ಕೆ ಕುಸಿದಿರುವ ಆರ್ಥಿಕತೆ ಪುನಶ್ಚೇತನ ನೀಡುವ ಉದ್ದೇಶದಿಂದ ಮತ್ತು ದೇಶದಲ್ಲಿರುವ ಸ್ವದೇಶಿ, ವಿದೇಶಿ ಕಂಪನಿಗಳ ಬೇಡಿಕೆ ಈಡೇರಿಸುವ ಸಲುವಾಗಿ ಕೇಂದ್ರ ಸರ್ಕಾರ ಸ್ವದೇಶ್ ಎಂಬ ಯೋಜನೆಯನ್ನು ಘೋಷಣೆ ಮಾಡಿದೆ. ಈ ಕಾರ್ಯಕ್ರಮದ ಅನ್ವಯ ವಿದೇಶಗಳಿಂದ ಭಾರತಕ್ಕೆ ಆಗಮಿಸಿರುವ ಅನಿವಾಸಿ ಭಾರತೀಯರ ದತ್ತಾಂಶಗಳನ್ನು ಸಂಗ್ರಹಿಸಲಾಗುತ್ತದೆ. ವಿದೇಶಗಳಲ್ಲಿ ಏನು ಕೆಲಸ ಮಾಡುತ್ತಿದ್ದರು. ಅವರ ಕೌಶಲ್ಯ ಮತ್ತು ಅನುಭವಗಳನ್ನು ಸಂಗ್ರಹಿಸಿ ಅದರಿಂದ ಕೆಲಸ ತೆಗೆಯುವ ಮಹತ್ತರ ಕಾರ್ಯಕ್ರಮಕ್ಕೆ ಕೇಂದ್ರ ಸರ್ಕಾರ ಕೈ ಹಾಕಿದೆ.

 ಸ್ವದೇಶ್ (SWADES-Skilled Workers Arrival Database for Employment Support) ಔದ್ಯೋಗಿಕ ಬೆಂಬಲಕ್ಕಾಗಿ ವಿದೇಶಗಳಿಂದ ಆಗಮಿಸಿದವರ ದತ್ತಾಂಶ ಸಂಗ್ರಹಣೆ ಕಾರ್ಯಕ್ರಮಕ್ಕೆ ಕೇಂದ್ರ ಸರ್ಕಾರ ಚಾಲನೆ ನೀಡಿದೆ. ಇದು ಕೇಂದ್ರ ಸರ್ಕಾರ ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ, ನಾಗರಿಕ ವಿಮಾನಯಾನ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯಗಳ ಜಂಟಿ ಕಾರ್ಯಕ್ರಮವಾಗಿದೆ.

ಈ ಕಾರ್ಯಕ್ರಮದ ಮೂಲಕ ವಿದೇಶದಿಂದ ಆಗಮಿಸಿರುವ ಅನಿವಾಸಿ ಭಾರತೀಯರ ಕೌಶಲ್ಯ ಮತ್ತು ಅನುಭವವನ್ನು ಸಮರ್ಥವಾಗಿ ಬಳಸಿಕೊಳ್ಳುವ ಚಿಂತನೆ ಕೇಂದ್ರಸರ್ಕಾರದ್ದಾಗಿದೆ. ದೇಶದಲ್ಲಿರುವ ಸ್ವದೇಶಿ ಮತ್ತು ವಿದೇಶಿ ಕಂಪನೆಗಳಲ್ಲಿ ಇವರಿಗೆ ಸೂಕ್ತ ಉದ್ಯೋಗಾವಕಾಶ ನೀಡುವ ಉದ್ದೇಶವೂ ಈ ಯೋಜನೆಯ ಹಿಂದಿದೆ ಎನ್ನಲಾಗಿದೆ.  ಅಲ್ಲದೆ ದೇಶದಲ್ಲಿ ಈ ಯೋಜನೆ ಮೂಲಕ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಗುರಿಕೂಡ ಕೇಂದ್ರ ಸರ್ಕಾರ ಹೊಂದಿದೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಮಾತನಾಡಿರುವ ಕೇಂದ್ರ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಅವರು, ವಂದೇ ಭಾರತ್ ಮಿಷನ್ ಆರಂಭಿಸಿದಾಗ ಲಕ್ಷಾಂತರ ಅನಿವಾಸಿ ಭಾರತೀಯರು ಕೆಲಸ ಕಳೆದುಕೊಂಡು ಭಾರತಕ್ಕೆ ಬರಲು ಸಜ್ಜಾಗಿದ್ದರು. ಅವರ ಅತ್ಯುತ್ತಮ ಅನುಭವ ಮತ್ತು ಕೌಶಲ್ಯದ ಹೊರತಾಗಿಯೂ ಅವರನ್ನು ಕೆಲಸದಿಂದ ಕಿತ್ತೊಗೆಯಲಾಗಿತ್ತು. ಇದೇ ಕಾರಣಕ್ಕೆ ಅವರ ಅನುಭವ ಮತ್ತು ಕೌಶಲ್ಯವನ್ನು ಸಮರ್ಥವಾಗಿ ಬಳಸಿಕೊಳ್ಳುವ ಉದ್ದೇಶದಿಂದಲೇ ಕೇಂದ್ರ ಸರ್ಕಾರ ಈ ಸ್ವದೇಶ್ ಕಾರ್ಯಕ್ರಮವನ್ನು ಆಯೋಜಿಸಿದೆ. ಎಂಎಸ್ ಡಿಇ ಆನ್ ಲೈನ್ ಪೋರ್ಟಲ್ ಮೂಲಕ ದತ್ತಾಂಶ ಸಂಗ್ರಹಣೆ ಮಾಡುತ್ತಿದ್ದೇವೆ ಎಂದು ಹೇಳಿದರು.

ಈ ಸ್ವದೇಶ್ ಕಾರ್ಯಕ್ರಮದಲ್ಲಿ ವಿದೇಶದಿಂದ ಆಗಮಿಸುವ ಅನಿವಾಸಿ ಭಾರತೀಯರು ಭಾರತಕ್ಕೆ ವಾಪಸಾದ ವೇಳೆ ತಮ್ಮ ಸಂಪೂರ್ಣ ಮಾಹಿತಿ ನೀಡಬೇಕು. ತಮ್ಮ ವಿಳಾಸ, ಫೋನ್ ನಂಬರ್, ಕೌಶಲ್ಯ, ವಿದೇಶದಲ್ಲಿ ಅವರು ಮಾಡುತ್ತಿದ್ದ ಕೆಲಸದ ಮಾದರಿ, ಅನುಭವ ಇತ್ಯಾಂದಿ ಅಂಶಗಳನ್ನು ದಾಖಲಿಸಲಾಗುತ್ತದೆ. ಈ ದತ್ತಾಂಶಗಳ ನೆರವಿನಿಂದ ಅವರಿಗೆ ಸೂಕ್ತ ಎನಿಸುವ ಕೆಲಸಗಳನ್ನು  ಅಥವಾ ಅವಕಾಶವನ್ನು ನೀಡಲಾಗುತ್ತದೆ. ಈ ಬಗ್ಗೆ ಎಲ್ಲ ವಿಮಾನಯಾನ ಸಂಸ್ಥೆಗಳಿಗೂ ಮಾಹಿತಿ ನೀಡಲಾಗಿದ್ದು, ಅನಿವಾಸಿ ಭಾರತೀಯರ ಡಿಜಿಟಲ್ ದತ್ತಾಂಶ ಸಂಗ್ರಹಣೆಗೆ ಸೂಚಿಸಲಾಗಿದೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com