ಕೊರೋನಾ ವೈರಸ್: 2,550 ವಿದೇಶಿ ತಬ್ಲೀಘಿ ಜಮಾತ್ ಸದಸ್ಯರಿಗೆ 10 ವರ್ಷ ನಿಷೇಧ ಹೇರಿದ ಕೇಂದ್ರ ಸರ್ಕಾರ

ದೆಹಲಿಯ ತಬ್ಲಿಘಿ ಜಮಾತ್ ಕಾರ್ಯಕ್ರಮದಲ್ಲಿ ಭಾಗಿಯಾಗಿ ವೀಸಾ ನಿಯಮ ಉಲ್ಲಂಘನೆ ಮಾಡಿದ್ದ ಸುಮಾರು 2200ಕ್ಕೂ ಅಧಿಕ ಮಂದಿ ವಿದೇಶಿಯರಿಗೆ ಕೇಂದ್ರ ಸರ್ಕಾರ 10 ವರ್ಷಗಳ ನಿಷೇಧ  ಹೇರಿದೆ.
ತಬ್ಲೀಘಿ ಜಮಾತ್
ತಬ್ಲೀಘಿ ಜಮಾತ್

ನವದೆಹಲಿ: ದೆಹಲಿಯ ತಬ್ಲಿಘಿ ಜಮಾತ್ ಕಾರ್ಯಕ್ರಮದಲ್ಲಿ ಭಾಗಿಯಾಗಿ ವೀಸಾ ನಿಯಮ ಉಲ್ಲಂಘನೆ ಮಾಡಿದ್ದ ಸುಮಾರು 2200ಕ್ಕೂ ಅಧಿಕ ಮಂದಿ ವಿದೇಶಿಯರಿಗೆ ಕೇಂದ್ರ ಸರ್ಕಾರ 10 ವರ್ಷಗಳ ನಿಷೇಧ  ಹೇರಿದೆ.

ಭಾರತದಲ್ಲಿ ಕೊರೋನಾ ಪ್ರಕರಣ ಆರಂಭದಲ್ಲಿ ತಬ್ಲಿಘಿ ಜಮಾತ್ ಧಾರ್ಮಿಕ ಸಭೆ ಇಡೀ ದೇಶಕ್ಕೆ ಶಾಕ್ ನೀಡಿತ್ತು. ದೇಶದ ಹಲವರು ರಾಜ್ಯಗಳಿಂದ ಆಗಮಿಸಿದ್ದ ಜಮಾತ್ ಸದಸ್ಯರಿಂದ ಸೋಂಕು ಹೆಚ್ಚಾಗಿ ಹರಡಿತ್ತು. ಭಾರತ ಮಾತ್ರವಲ್ಲದೇ ವಿದೇಶದಿಂದ ಆಗಮಿಸಿದ್ದ ಸಾವಿರಾರು ಪ್ರವಾಸಿಗರು ಕೂಡ ಸಭೆಯಲ್ಲಿ ಭಾಗಿಯಾಗಿದ್ದ ಮಾಹಿತಿ ಆ ಬಳಿಕ ಬಹಿರಂಗವಾಗಿತ್ತು. ಪ್ರವಾಸಿ ವೀಸಾ ಪಡೆದು ಭಾರತಕ್ಕೆ ಆಗಮಿಸಿದ್ದ ಹಲವರು ನಿಯಮಗಳನ್ನು ಮೀರಿ ಧಾರ್ಮಿಕ ಸಭೆಯಲ್ಲಿ ಭಾಗಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಕೇಂದ್ರ ಈ ಸರ್ಕಾರ ಮಹತ್ವದ ನಿರ್ಧಾರವನ್ನು ಪ್ರಕಟಿಸಿದೆ.

ನಿಯಮ ಉಲ್ಲಂಘಿಸಿದ 2200ಕ್ಕೂ ಹೆಚ್ಚು ವಿದೇಶಿ ಪ್ರಜೆಗಳನ್ನು ಕೇಂದ್ರ ಗೃಹ ಇಲಾಖೆ ಬ್ಲಾಕ್ ಲಿಸ್ಟ್ ಗೆ ಸೇರಿಸಿದ್ದು, ಇವರ ಮೇಲೆ 10 ವರ್ಷ ಭಾರತಕ್ಕೆ ಆಗಮಿಸದಂತೆ ನಿಷೇಧ ವಿಧಿಸಿದೆ. ಜಮಾತ್ ಸಭೆಯಲ್ಲಿ ಭಾಗಿಯಾಗಿದ್ದ ಇವರು ನಿಯಮಗಳನ್ನು ಉಲ್ಲಂಘಿಸಿ ದೆಹಲಿಯ ಮರ್ಕಜ್ ಭವನದಲ್ಲಿ ಜರುಗಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು ಎಂದು ಸರ್ಕಾರ ಗುರುತಿಸಿದೆ. ನಿಷೇಧ ಪಟ್ಟಿಯಲ್ಲಿ ಹೆಚ್ಚಿನ ಮಂದಿ ಇಂಡೋನೇಷ್ಯಾಗೆ ಸೇರಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಇನ್ನು ದೆಹಲಿಯ ನಿಜಾಮುದ್ದೀನ್ ಧಾರ್ಮಿಕ ಸಭೆ ಆಯೋಜನೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಡಾ. ಜಿಶನ್, ಮುಫ್ತಿ ಶೆಹಜಾದ್, ಮಹಮದ್ ಅಶ್ರಫ್, ಮುಸರ್ಲಿಮ್ ಸೈಫ್, ಯೂನಸ್, ಮೊಹಮ್ಮದ್ ಸಲ್ಮಾನ್ ಮತ್ತು ಸಾದ್ ಸೇರಿದಂತೆ ಒಟ್ಟು 06 ಜನರ ಮೇಲೆ ಎಫ್ಐಆರ್ ದಾಖಲಿಸಿದ್ದರು. ಈ ಪೈಕಿ ಒಬ್ಬರಾದ ಸಾದ್​ ವಿರುದ್ಧ ಇಡಿ ಅಕ್ರಮ ಹಣ ವರ್ಗಾವಣೆ ಕೇಸ್​​​​ ದಾಖಲಿಸಿದೆ.

ದೆಹಲಿಯ ಮರ್ಕಜ್ ನಲ್ಲಿ ಆಯೋಜನೆಯಾಗಿದ್ದ ಜಮಾತ್ ಸಭೆ ಪರಿಣಾಮ ದೇಶದಲ್ಲಿ ಕೊರೋನಾ ಪ್ರಕರಣ ಸಂಖ್ಯೆ ದಿಢೀರ್ ಎಂದು ಹೆಚ್ಚಾಗಿತ್ತು. ಮೇ 13 ರಿಂದ 17ರ ವರೆಗೂ ದೆಹಲಿಯ ನಿಜಾಮುದ್ದೀನ್‍ ಮರ್ಕಜ್ ನಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆದಿತ್ತು. ಆದರೆ ಇದಕ್ಕೂ ಮೊದಲೇ ಅಂದರೆ ಮಾರ್ಚ್ 24ರಂದೇ ಕರೆಸಿ ನೊಟೀಸ್ ನೀಡಲಾಗಿತ್ತು. ಕಾರ್ಯಕ್ರಮ ಆಯೋಜಿಸದಂತೆ ತಿಳಿಸಲಾಗಿತ್ತು. ಆದರೂ ಕಾರ್ಯಕ್ರಮ ಆಯೋಜಿಸಲಾಗಿತ್ತು. ಜನ ಸೇರುವ ಮೂಲಕ ನಿಯಮಾವಳಿ ಉಲ್ಲಂಘಿಸಿದ್ದರು. ಈ ಕಾರ್ಯಕ್ರಮದ ಮೂಲಕ ಕೊರೋನಾ ಹರಡಲು ಇವರೇ ಹೊಣೆಗಾರರು ಎಂದು ಉಲ್ಲೇಖಿಸಿರುವ ದೆಹಲಿ ಪೊಲೀಸರು ಎಲ್ಲರ ಮೇಲೂ ಪ್ರಕರಣ ದಾಖಲಿಸಿದ್ದರು.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com