ಇಡೀ ದೇಶದಲ್ಲಿ ಪಶ್ಚಿಮ ಬಂಗಾಳದಲ್ಲಿ ಮಾತ್ರ ಹಿಂಸಾತ್ಮಕ ರಾಜಕೀಯಕ್ಕೆ ಪ್ರಚೋದನೆ: ಅಮಿತ್ ಶಾ

ಪಶ್ಚಿಮ ಬಂಗಾಳದಲ್ಲಿ ಹಿಂಸಾತ್ಮಕ ರಾಜಕೀಯದ ಸಂಸ್ಕೃತಿ ಇದೆ ಎಂಬ ಆರೋಪದೊಂದಿಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ ವಾಗ್ದಾಳಿ ನಡೆಸಿದ್ದಾರೆ. ಆದಾಗ್ಯೂ, ಉಗ್ರರ ವಾತವಾರಣವಿರುವ ಟಿಎಂಸಿ ಆಡಳಿತದ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ತನ್ನ ಪ್ರಾಬಲ್ಯ ವಿಸ್ತರಿಸಲು ಬಯಸುವುದಾಗಿ ಅವರು ಹೇಳಿದ್ದಾರೆ.
ಅಮಿತ್ ಶಾ
ಅಮಿತ್ ಶಾ

ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಹಿಂಸಾತ್ಮಕ ರಾಜಕೀಯದ ಸಂಸ್ಕೃತಿ ಇದೆ ಎಂಬ ಆರೋಪದೊಂದಿಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ ವಾಗ್ದಾಳಿ ನಡೆಸಿದ್ದಾರೆ. ಆದಾಗ್ಯೂ, ಉಗ್ರರ ವಾತವಾರಣವಿರುವ ಟಿಎಂಸಿ ಆಡಳಿತದ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ತನ್ನ ಪ್ರಾಬಲ್ಯ ವಿಸ್ತರಿಸಲು ಬಯಸುವುದಾಗಿ ಅವರು ಹೇಳಿದ್ದಾರೆ.

ಪಶ್ಚಿಮ ಬಂಗಾಳ ವರ್ಚುವಲ್ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅಮಿತ್ ಶಾ, ಇಡೀ ದೇಶದಲ್ಲಿ ಪಶ್ಚಿಮ ಬಂಗಾಳದಲ್ಲಿ ಮಾತ್ರ ಹಿಂಸಾತ್ಮಕ ರಾಜಕೀಯಕ್ಕೆ ಪ್ರಚೋದನೆ ನೀಡುವ ಸಂಸ್ಕೃತಿ ಇದೆ ಎಂದು ಆರೋಪಿಸಿದರು. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 303 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೂ 18 ಸ್ಥಾನಗಳನ್ನು ಗೆದ್ದಿರುವ ಪಶ್ಚಿಮ ಬಂಗಾಳದ ಮೇಲೆ ಹೆಚ್ಚಿನ ಪ್ರೀತಿ ಇರುವುದಾಗಿ ಅಮಿತ್ ಶಾ ನುಡಿದರು.

ಬಡ ಜನರ ಅನುಕೂಲಕ್ಕಾಗಿ ಜಾರಿಗೆ ತಂದಿರುವ ಆಯುಷ್ಮನ್ ಭಾರತ ಆರೋಗ್ಯ ಯೋಜನೆ ವ್ಯಾಪ್ತಿಗೆ ಪಶ್ಚಿಮ ಬಂಗಾಳವನ್ನು ಸೇರ್ಪಡೆಗೊಳಪಡಿಸಿಲ್ಲ ಎಂದು ಹೇಳಿದ ಅಮಿತ್ ಶಾ,  ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರದಲ್ಲಿ ಮಮತಾ ಬ್ಯಾನರ್ಜಿ ಅವರ ನಿಲುವನ್ನು ಟೀಕಿಸಿದರು. 

ಉರಿ ಮತ್ತು ಪುಲ್ವಾಮಾ ದಾಳಿಯ ನಂತರ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕೈಗೊಂಡ ಕ್ರಮಗಳನ್ನು ಶ್ಲಾಘಿಸಿದ ಅಮಿತ್ ಶಾ, ಪಶ್ಚಿಮ ಬಂಗಾಳದಲ್ಲಿ ಎಲ್ಲಾ ಕಡೆಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಪಶ್ಚಿಮ ಬಂಗಾಳ ಜನತೆ ಅಂಫಾನ್ ಚಂಡಮಾರುತದ ಚಕ್ರಕ್ಕೆ ಸಿಲುಕಿ ನರಳುತ್ತಿದ್ದರೂ ಭ್ರಷ್ಟಾಚಾರ ಅವ್ಯಾಹತವಾಗಿ ನಡೆಯುತ್ತಿದೆ ಎಂದು ಆರೋಪಿಸಿದರು. 

ಲಾಕ್ ಡೌನ್ ಸಂದರ್ಭದಲ್ಲಿ ಬಂಗಾಳಕ್ಕೆ ವಲಸೆ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಶ್ರಮಿಕ್ ವಿಶೇಷ ರೈಲುಗಳನ್ನು ಕೊರೋನಾ ಎಕ್ಸ್ ಪ್ರೆಸ್ ಎಂದು ಕರೆಯುವ ಮೂಲಕ  ವಲಸೆ ಕಾರ್ಮಿಕರನ್ನು ಮಮತಾ ಬ್ಯಾನರ್ಜಿ ಅಪಮಾನ ಮಾಡಿದ್ದಾರೆ.  ನಿಮ್ಮನ್ನು ಅಧಿಕಾರದಿಂದ ಓಡಿಸಲು ವಲಸೆ ಕಾರ್ಮಿಕರು ಇದೀಗ ಶಕ್ತರಾಗಿದ್ದಾರೆ ಎಂದು ಅಮಿತ್ ಶಾ ಎಚ್ಚರಿಕೆ ನೀಡಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com