ಸಂಕಷ್ಟದಲ್ಲಿರುವ ವಲಸೆ ಕಾರ್ಮಿಕರನ್ನು 15 ದಿನಗಳೊಳಗಾಗಿ ತವರು ರಾಜ್ಯಗಳಿಗೆ ಕಳುಹಿಸಿ: ರಾಜ್ಯ ಸರ್ಕಾರಗಳಿಗೆ 'ಸುಪ್ರೀಂ' ಸೂಚನೆ

ಸಂಕಷ್ಟಕ್ಕೆ ಸಿಲುಕಿಕೊಂಡಿರುವ ಎಲ್ಲಾ ವಲಸೆ ಕಾರ್ಮಿಕರನ್ನು 15 ದಿನಗಳೊಳಗಾಗಿ ಅವರವರ ತವರು ರಾಜ್ಯಗಳಿಗೆ ಕಳುಹಿಸಿ ಎಂದು ಎಲ್ಲಾ ರಾಜ್ಯ ಸರ್ಕಾರಗಳಿಗೆ ಸುಪ್ರೀಂಕೋರ್ಟ್ ಮಂಗಳವಾರ ಸೂಚನೆ ನೀಡಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಸಂಕಷ್ಟಕ್ಕೆ ಸಿಲುಕಿಕೊಂಡಿರುವ ಎಲ್ಲಾ ವಲಸೆ ಕಾರ್ಮಿಕರನ್ನು 15 ದಿನಗಳೊಳಗಾಗಿ ಅವರವರ ತವರು ರಾಜ್ಯಗಳಿಗೆ ಕಳುಹಿಸಿ ಎಂದು ಎಲ್ಲಾ ರಾಜ್ಯ ಸರ್ಕಾರಗಳಿಗೆ ಸುಪ್ರೀಂಕೋರ್ಟ್ ಮಂಗಳವಾರ ಸೂಚನೆ ನೀಡಿದೆ. 

ವಲಸೆ ಕಾರ್ಮಿಕರ ಸಂಕಷ್ಟ ಕುರಿತಂತೆ ಸ್ವಯಂಪ್ರೇರಿತವಾಗಿ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಅಶೋಕ್ ಭೂಷಣ್, ಸಂಜಯ್ ಕಿಶಾನ್ ಕೌಲ್ ಹಾಗೂ ಎಂಆರ್. ಶಾರನ್ನೊಳಗೊಂಡ ಸುಪ್ರೀಂಕೋರ್ಟ್'ನ ತ್ರಿಸದಸ್ಯತ್ವ ಪೀಠ, 15 ದಿನಗಳೊಳಗಾಗಿ ಸಂಕಷ್ಟದಲ್ಲಿರುವ ವಲಸೆ ಕಾರ್ಮಿಕರನ್ನು ಅವರ ತವರು ರಾಜ್ಯಗಳಿಗೆ ಕಳುಹಿಸಿಕೊಡುವಂತೆ ಹಾಗೂ ಕೊರೋನಾ ಲಾಕ್'ಡೌನ್ ಸಂದರ್ಭದಲ್ಲಿ ನಿಯಮ ಉಲ್ಲಂಘಿಸಿದ್ದಾರೆಂದು ವಲಸೆ ಕಾರ್ಮಿಕರ ಮೇಲೆ ದಾಖಲು ಮಾಡಿರುವ ಎಲ್ಲಾ ಪ್ರಕರಣಗಳೂ ಕೈಬಿಡುವಂತೆ ಸೂಚಿಸಿದೆ. 

ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳು ವಲಸೆ ಕಾರ್ಮಿಕರು ಅವರ ರಾಜ್ಯಗಳಿಗೆ ತಲುಪಿದ ಕೂಡಲೇ ಕಾರ್ಮಿಕರ ಸಂಪೂರ್ಣ ಮಾಹಿತಿಯುಳ್ಳ ಪಟ್ಟಿಯನ್ನು ಸಿದ್ಧಪಡಿಸಬೇಕು. ಮತ್ತು ಲಾಕ್'ಡೌನ್'ಗೂ ಮೊದಲು ಅವರು ತೊಡಗಿಕೊಂಡಿದ್ದ ಕೆಲಸಗಳ ಕುರಿತು ಮಾಹಿತಿ ಸಂಗ್ರಹಿಸಿರಬೇಕು. ಲಾಕ್'ಡೌನ್ ಬಳಿಕ ರಾಜ್ಯ ಹಾಗೂ ಕೇಂದ್ರ ಸರ್ಕಾರ ವಲಸೆ ಕಾರ್ಮಿಕರ ಉದ್ಯೋಗಕ್ಕಾಗಿ ಯೋಜನೆಗಳನ್ನು ಘೋಷಣೆ ಮಾಡಬೇಕು. ಅವರ ಕೌಶಲ್ಯಕ್ಕನುಗುಣವಾಗಿ ಉದ್ಯೋಗ ನೀಡುವ ಕೆಲಸಗಳಾಗಬೇಕು. 

ತವರಿಗೆ ಹೋಗಲು ಇಚ್ಛಿಸುವ ವಲಸೆ ಕಾರ್ಮಿಕರಿಗೆ ಕೌನ್ಸಿಲಿಂಗ್ ಅತ್ಯಗತ್ಯವಾಗಿ ನೀಡಬೇಕು. ಅಲ್ಲದೆ, ಕಾರ್ಮಿಕರು ತವರು ರಾಜ್ಯಗಳಿಗೆ ಹೋಗುವ ಕುರಿತು ಬೇಡಿಕೆ ಹೆಚ್ಚಾದಂತೆ ಆಯಾ ರಾಜ್ಯ ರೈಲ್ವೇ ಇಲಾಖೆಗಳು 24 ಗಂಟೆಗಳೊಳಗೆ ಹೆಚ್ಚುವರಿ ವಿಶೇಷ ರೈಲುಗಳನ್ನು ಒದಗಿಸಬೇಕು ಎಂದು ಸೂಚಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com