ಚೆನ್ನೈನಲ್ಲಿ ಹಾಡಹಗಲೇ ವ್ಯಕ್ತಿಯ ಕೊಲೆ!

ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ಹಾಡಹಗಲೇ ಗ್ಯಾಂಗ್ ವೊಂದು 25 ವರ್ಷದ ವ್ಯಕ್ತಿಯನ್ನು ಭೀಕರವಾಗಿ ಮಾರಕಾಸ್ತ್ರಗಳಿಂದ ಥಳಿಸಿ ಹತ್ಯೆ ಮಾಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಚೆನ್ನೈ: ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ಹಾಡಹಗಲೇ ಗ್ಯಾಂಗ್ ವೊಂದು 25 ವರ್ಷದ ವ್ಯಕ್ತಿಯನ್ನು ಭೀಕರವಾಗಿ ಮಾರಕಾಸ್ತ್ರಗಳಿಂದ ಥಳಿಸಿ ಹತ್ಯೆ ಮಾಡಿದ್ದಾರೆ.

ಚೆನ್ನೈನ ಸುನಾಮಿ ಕ್ವಾರ್ಟರ್ಸ್ ನ 25 ವರ್ಷದ ವಿಮಲ್ ಎಂಬಾತನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಮೃತ ವಿಮಲ್ ಕಂದಂಚವಾಡಿಯಲ್ಲಿನ ಸಾಫ್ಟ್ ವೇರ್ ಸಂಸ್ಥೆಯಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದ. ಇಂದು ಬೆಳಗ್ಗೆ ಸಂಸ್ಥೆಯ ಖಾಸಗಿ ವಾಹನದಲ್ಲಿ ಕೆಲಸಕ್ಕೆ ತೆರಳಲು ವಿಮಲ್ ನಡೆದು ಹೋಗುತ್ತಿದ್ದಾಗ ಎರಡು ಬೈಕ್ ಗಳಲ್ಲಿ ಬಂದ ಐದು ದುಷ್ಕರ್ಮಿಗಳು ಆತನನ್ನು ಅಟ್ಟಾಡಿಸಿ ಹೊಡೆದು ಹಾಕಿದ್ದಾರೆ. ಬಳಿಕ ದುಷ್ಕರ್ಮಿಗಳು ಪರಾರಿಯಾಗಿದ್ದು, ರಕ್ತದ ಮಡುವಿನಲ್ಲಿ ಬಿದ್ದಿದ್ದ ವಿಮಲ್ ನನ್ನು ಸ್ಥಳೀಯರು ಆಸ್ಪತ್ರೆಗೆ ಸೇರಿಸಿದ್ದಾರೆ. 

ದುರಾದೃಷ್ಟವಶಾತ್ ವಿಮಲ್ ಮಾರ್ಗಮಧ್ಯೆಯೇ ಸಾವನ್ನಪ್ಪಿದ್ದಾನೆ. ಪ್ರಸ್ತುತ ರೋಯಾಪೇಟ್ ಸರ್ಕಾರಿ ಆಸ್ಪತ್ರೆಯಲ್ಲಿ ವಿಮಲ್ ಪಾರ್ಥೀವ ಶರೀರದ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಶವ ಹಸ್ತಾಂತರಿಸಲಾಗಿದೆ. ಅಂತೆಯೇ ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೃತ ವಿಮಲ್ ನ ಸ್ನೇಹಿತರನ್ನು ವಿಚಾರಣೆಗೊಳಪಡಿಸಿದ್ದು ಈ ವೇಳೆ ಸ್ಥಳೀಯ ಪುಂಡರೊಂದಿಗೆ ವಿಮಲ್ ಜಗಳ ಮಾಡಿಕೊಂಡಿದ್ದ ವಿಚಾರ ಬಯಲಾಗಿದೆ. ಪ್ರಸ್ತುತ ಪೊಲೀಸರು ತನಿಖೆ ಮುಂದುವರೆಸಿದ್ದು, ಆರೋಪಿಗಳಿಗಾಗಿ ತೀವ್ರ ಶೋಧ ನಡೆಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com