ವೈದ್ಯಕೀಯ ಸಿಬ್ಬಂದಿ ಮೇಲೆ ದಾಳಿ: ಕೋವಿಡ್ ಕರ್ತವ್ಯ ನಿಲ್ಲಿಸಿ ಹೈದರಾಬಾದ್ ಗಾಂಧಿ ಆಸ್ಪತ್ರೆಯ 300 ವೈದ್ಯರಿಂದ ಪ್ರತಿಭಟನೆ!

ತೆಲಂಗಾಣ ರಾಜ್ಯದ ಗಾಂಧಿ ಆಸ್ಪತ್ರೆಯಲ್ಲಿ ಕೊರೋನಾಗೆ ಚಿಕಿತ್ಸೆ ಪಡೆಯುತ್ತಿದ್ದ 55 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ ಮೃತನ ಸಂಬಂಧಿಕರು ವೈದ್ಯರ ಮೇಲೆ ದಾಳಿ ನಡೆಸಿರುವ ಘಟನೆ ನಡೆದಿದೆ. 
ಪ್ರತಿಭಟನೆ ನಡೆಸುತ್ತಿರುವ ವೈದ್ಯರು
ಪ್ರತಿಭಟನೆ ನಡೆಸುತ್ತಿರುವ ವೈದ್ಯರು

ಹೈದರಾಬಾದ್: ತೆಲಂಗಾಣ ರಾಜ್ಯದ ಗಾಂಧಿ ಆಸ್ಪತ್ರೆಯಲ್ಲಿ ಕೊರೋನಾಗೆ ಚಿಕಿತ್ಸೆ ಪಡೆಯುತ್ತಿದ್ದ 55 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ ಮೃತನ ಸಂಬಂಧಿಕರು ವೈದ್ಯರ ಮೇಲೆ ದಾಳಿ ನಡೆಸಿರುವ ಘಟನೆ ನಡೆದಿದೆ. 

ವ್ಯಕ್ತಿ ಮೃತಪಟ್ಟ ವಿಚಾರ ತಿಳಿಯುತ್ತಿದ್ದಂತೆಯೇ ಮೃತ ಸಂಬಂಧಿಕರು ಆಸ್ಪತ್ರೆಯ ಮೇಲೆ ದಾಳಿ ನಡೆಸಿ ಸ್ಥಳದಲ್ಲಿದ್ದ ಕುರ್ಚಿ ಹಾಗೂ ಇತರೆ ಪೀಟೋಪಕರಣಗಳನ್ನು ಧ್ವಂಸಗೊಳಿಸಿದ್ದಾರೆ. ಅಲ್ಲದೆ, ಚಿಕಿತ್ಸೆ ನೀಡಿದ್ದ ವೈದ್ಯರು ಹಾಗೂ ಶುಶ್ರೂಷಕರ ಮೇಲೂ ದಾಳಿ ನಡೆಸಿದ್ದಾರೆ. 

ಈ ದಾಳಿಗೆ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದು, ದಾಳಿ ಖಂಡಿಸಿ ಇದೀಗ ಕೋವಿಡ್ ಕರ್ತವ್ಯ ನಲ್ಲಿಸಿರುವ ಆಸ್ಪತ್ರೆಯ 300ಕ್ಕೂ ಹೆಚ್ಚು ವೈದ್ಯರು ಪ್ರತಿಭಟನೆ ನಡೆಸಲು ಆರಂಭಿಸಿದ್ದಾರೆ. 

ರಾಜ್ಯ ಆರೋಗ್ಯ ಸಚಿವರು ಕೂಡಲೇ ಈ ಕುರಿತು ಪ್ರತಿಕ್ರಿಯೆ ನೀಡಬೇಕು ಹಾಗೂ ನಮ್ಮೊಂದಿಗೆ ಮಾತುಕತೆ ನಡೆಸಿ, ಭದ್ರತೆಯ ಭರವಸೆ ನೀಡದ ಹೊರತು ಪ್ರತಿಭಟನೆಯಿಂದ ಹಿಂದಕ್ಕೆ ಸರಿಯುವುದಿಲ್ಲ ಎಂದು ವೈದ್ಯರು ಆಗ್ರಹಿಸುತ್ತಿದ್ದಾರೆ. 

55 ವರ್ಷದ ವ್ಯಕ್ತಿಯೊಬ್ಬರು ಗಾಂಧಿ ಆಸ್ಪತ್ರೆಗೆ ದಾಖಲಾಗಿತ್ತು. ವ್ಯಕ್ತಿಯು ಶ್ವಾಸಕೋಶ ವೈಫಲ್ಯದಿಂದ ಬಳಲುತ್ತಿದ್ದು, ಆತನ ಪರಿಸ್ಥಿತಿ ಬಗ್ಗೆ ವೈದ್ಯರು ಅವರ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿದ್ದರು. ಪರಿಸ್ಥಿತಿ ಕಠಿಣವಾಗಿದ್ದರು. ವ್ಯಕ್ತಿ ಸಿಪಿಎಪಿ ಮಾಸ್ಕ್ ತೆಗೆದು ಶೌಚಾಲಯಕ್ಕೆ ತೆರಳಿದ್ದರು. ಈ ವೇಳೆ ಹೃದಯಾಘಾತದಿಂದ ಮಂಗಳವಾರ ರಾತ್ರಿ 7.30ರ ಸುಮಾರಿಗೆ ಮೃತಪಟ್ಟಿದ್ದರು. ಘಟನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಕುಟುಂಬ ಸದಸ್ಯರು ಕರ್ತವ್ಯದಲ್ಲಿದ್ದ ವೈದ್ಯರ ಮೇಲೆ ದೌರ್ಜನ್ಯವೆಸಗಿದ್ದಾರೆಂದು ಹೇಳಲಾಗುತ್ತಿದೆ. 

ಗಾಂಧಿ ಆಸ್ಪತ್ರೆಯ ವೈದ್ಯರ ಮೇಲೆ ಇದು ಎರಡನೇ ಬಾರಿ ದಾಳಿ ನಡೆಯುತ್ತಿದೆ. ಕೊರೋನಾ ಸಾಂಕ್ರಾಮಿಕ ರೋಗ ಪರಿಸ್ಥಿತಿಯಲ್ಲಿ ಪ್ರತಿಭಟನೆ ನಡೆಸುವುದು ಸರಿಯಲ್ಲ ಎಂದು ನಾವು ಕರ್ತವ್ಯ ಮುಂದುವರೆಸಿದ್ದೆವು. ಆದರೀಗ ಮತ್ತೆ ದಾಳಿ ನಡೆದಿದೆ. ಇದೀಗ ನಾವು ಮೌನವಾಗಿರಲು ಸಾಧ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com