ಮೀಸಲಾತಿ ಮೂಲಭೂತ ಹಕ್ಕಲ್ಲ; ಸುಪ್ರೀಂ ಕೋರ್ಟ್

ಮೀಸಲಾತಿ ಹಕ್ಕು ಎಂಬುದು ವ್ಯಕ್ತಿಯ ಮೂಲಭೂತ ಹಕ್ಕಲ್ಲ ಎಂದು ಸುಪ್ರೀಂ ಕೋರ್ಟ್ ಗುರುವಾರ ಅಭಿಪ್ರಾಯಪಟ್ಟಿದೆ.
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್

ನವದೆಹಲಿ: ಮೀಸಲಾತಿ ಹಕ್ಕು ಎಂಬುದು ವ್ಯಕ್ತಿಯ ಮೂಲಭೂತ ಹಕ್ಕಲ್ಲ ಎಂದು ಸುಪ್ರೀಂ ಕೋರ್ಟ್ ಗುರುವಾರ ಅಭಿಪ್ರಾಯಪಟ್ಟಿದೆ.

ತಮಿಳುನಾಡು ವೈದ್ಯಕೀಯ ಕಾಲೇಜುಗಳಲ್ಲಿ ಇತರ ಹಿಂದುಳಿದ ವರ್ಗಗಳು(ಓಬಿಸಿ) ಅಭ್ಯರ್ಥಿಗಳಿಗೆ ಶೇ.5೦ರಷ್ಟು ಮೀಸಲಾತಿ ಕಲ್ಪಿಸಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆಯ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

2020-21ರಲ್ಲಿ ವೈದ್ಯಕೀಯ, ದಂತ ವೈದ್ಯಕೀಯ ಪದವಿ ಹಾಗೂ ಸ್ನಾತಕೋತ್ತರ ಪದವಿ ಕೋರ್ಸ್ ಗಳಿಗಾಗಿ ಅಖಿಲ ಭಾರತ ಕೋಟಾದಲ್ಲಿ ರಾಜ್ಯ ಸರ್ಕಾರ   ಬಿಟ್ಟುಕೊಟ್ಟಿರುವ ವೈದ್ಯಕೀಯ ಸೀಟುಗಳಲ್ಲಿ ತಮಿಳುನಾಡು ಕಾಯ್ದೆಯಂತೆ ಶೇ.5೦ರಷ್ಟು ಒಬಿಸಿಗಳಿಗೆ ಮೀಸಲಾತಿ ಕಲ್ಪಿಸದ ಕೇಂದ್ರ ಸರ್ಕಾರದ ನಿರ್ಧಾರ  ಪ್ರಶ್ನಿಸಿ, ದ್ರಾವಿಡ ಮುನ್ನೇತ್ರ ಕಳಗಂ, ವೈಕೋ, ಅನ್ಬುಮಣಿ ರಾಮದಾಸ್, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ, ತಮಿಳುನಾಡು ಕಾಂಗ್ರಸ್ ಸಮಿತಿ, ಸಿಪಿಐ   ಸಲ್ಲಿಸಿದ್ದ ಅರ್ಜಿಗಳನ್ನು, ನ್ಯಾಯಮೂರ್ತಿ ಎಲ್. ನಾಗೇಶ್ವರ ರಾವ್, ನ್ಯಾಯಮೂರ್ತಿ ಕೃಷ್ಣ ಮುರಾರಿ ಹಾಗೂ ನ್ಯಾಯಮೂರ್ತಿ ಎಸ್. ರವೀಂದ್ರ ಭಟ್  ಅವರನ್ನೋಳಗೊಂಡ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡಸಿತು.

ಎಲ್ಲಾ ಪ್ರತಿಸ್ಪರ್ಧಿ ರಾಜಕೀಯ ಪಕ್ಷಗಳು ಒಂದೇ ನಿಲುವು ಹೊಂದಿರುವುದನ್ನು ನಾವು ನೋಡುತ್ತಿದ್ದೇವೆ. ಆದರೆ, ಮೀಸಲಾತಿ ಹಕ್ಕು ಮೂಲಭೂತ ಹಕ್ಕಲ್ಲ  ಹಾಗೂ  ಸಂವಿಧಾನದ 32ನೇ ಪರಿಚ್ಛೇದದ ಅಡಿಯಲ್ಲಿ ಅದನ್ನು ಪ್ರಶ್ನಿಸಲಾಗದು ಎಂದು ನ್ಯಾಯಪೀಠ ಹೇಳಿದೆ. ಆರೋಗ್ಯ ಸಚಿವಾಲಯ, ಭಾರತೀಯ ವೈದ್ಯಕೀಯ ಮಂಡಳಿ ಹಾಗೂ ರಾಷ್ಟ್ರೀಯ ಪರೀಕ್ಷಾ ಮಂಡಳಿ ಸೇರಿದಂತೆ ಹಲವು ಸಚಿವಾಲಯಗಳನ್ನು ಅರ್ಜಿದಾರರು ಪ್ರತಿವಾದಿಗಳೆಂದು ತಮ್ಮ ಆರ್ಜಿಯಲ್ಲಿ   ಹೆಸರಿಸಿದ್ದಾರೆ. ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಲು ನಿರಾಕರಿಸಿದ ನ್ಯಾಯಪೀಠ, ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಬೇಕೆಂದು ನಿಮ್ಮ ಬಯಕಯೇ  ಎಂದು ನ್ಯಾಯಪೀಠ ಪ್ರಶ್ನಿಸಿದ ನಂತರ ಅರ್ಜಿದಾರರು ತಮ್ಮ ಅರ್ಜಿಗಳನ್ನು ಹಿಂಪಡೆದುಕೊಂಡರು.

ಆದರೆ, ಮೂವರು ನ್ಯಾಯಮೂರ್ತಿಗಳ ನ್ಯಾಯಪೀಠ, ಈ ಸಂಬಂಧ ಅರ್ಜಿದಾರರು ಮದ್ರಾಸ್ ಹೈಕೋರ್ಟ್ ಮನವಿ ಸಲ್ಲಿಸುವ ಅವಕಾಶವನ್ನು ಮಂಜೂರು ಮಾಡಿತು. ಇದಕ್ಕೂ ಮುನ್ನ ಈ ತಿಂಗಳ ಆರಂಭದಲ್ಲಿ, 2020-21ನೇ ಸಾಲಿಗೆ ಅಖಿಲ ಭಾರತ ಕೋಟಾದಡಿ ರಾಜ್ಯಗಳು ಬಿಟ್ಟು ಕೊಡುವ ವೈದ್ಯಕೀಯ, ದಂತ ವೈದ್ಯಕೀಯ ಹಾಗೂ ಸ್ನಾತ್ತಕೋತ್ತರ ಸೀಟುಗಳಲ್ಲಿ ಓಬಿಸಿಗಳಿಗೆ ಶೇ.50 ರಷ್ಟು, ಪರಿಶಿಷ್ಟ ಜಾತಿಗಳಿಗೆ ಶೇ.18ರಷ್ಟು, ಪರಿಶಿಷ್ಟ ವರ್ಗಗಳಿಗೆ ಶೇ.1 ರಷ್ಟು   ಸೀಟುಗಳನ್ನು ಮೀಸಲಿಡಬೇಕೆಂದು ತಮಿಳುನಾಡು ಸಿಪಿಐಎಂ ಘಟಕ ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಿತ್ತು.

ಡಿಎಂಕೆ ಪಕ್ಷವೂ ವೈದ್ಯಕೀಯ ಕೋರ್ಸ್ ಗಳ ಪ್ರವೇಶ ವಿಷಯದಲ್ಲಿ ವಿದ್ಯಾರ್ಥಿಗಳಿಗೆ ಇದೇ ರೀತಿಯ ಪರಿಹಾರ ಕಲ್ಪಿಸಬೇಕೆಂದು ಅರ್ಜಿಯನ್ನು ಸಲ್ಲಿಸಿತ್ತು. ಸೀಟುಗಳನ್ನು ಭರ್ತಿ ಮಾಡುವಾಗ ಭಾರತೀಯ ವೈದ್ಯಕೀಯ ಮಂಡಳಿ (ಎಂಸಿಐ) ರಾಜ್ಯ ಸರ್ಕಾರಗಳ ಮೀಸಲಾತಿ ನಿಯಮಗಳನ್ನು ಅನುಸರಿಸಬೇಕು ಎಂದು ತನ್ನ ಅರ್ಜಿಯಲ್ಲಿ ವಾದಿಸಿತ್ತು. ತಮಿಳುನಾಡು ಕಾನೂನಿನ ಪ್ರಕಾರ ಒಬಿಸಿ ವಿದ್ಯಾರ್ಥಿಗಳಿಗೆ ಶೇ.50ರಷ್ಟು ಮೀಸಲಾತಿ ಸೌಲಭ್ಯವನ್ನು ನೀಡದಿರುವುದು ತರ್ಕಬದ್ಧವಲ್ಲ ಎಂದು ಎಐಡಿಎಂಕೆ ತನ್ನ ಅರ್ಜಿಯಲ್ಲಿ ವಾದಿಸಿತ್ತು. ಕೋಟಾ ವ್ಯವಸ್ಥೆಯನ್ನು ಅಖಿಲ ಭಾರತ ಮಟ್ಟದಲ್ಲಿ ಜಾರಿಗೆ ತಂದಾಗಿನಿಂದ, ವೈದ್ಯಕೀಯ ಕಾಲೇಜುಗಳಲ್ಲಿ ಒಬಿಸಿ ಪ್ರಾತಿನಿಧ್ಯ ಅನೇಕ ಶೈಕ್ಷಣಿಕ ಅವಧಿಗಳಲ್ಲಿ ಕಡಿಮೆಯಾಗಿದೆ ಎಂದು ತನ್ನ ಅರ್ಜಿಯಲ್ಲಿ ಅಸಮಧಾನ ವ್ಯಕ್ತಪಡಿಸಿತ್ತು.

ವಿಚಾರಣೆಯ ವೇಳೆ ಗುರುವಾರ ನ್ಯಾಯಪೀಠ ಬದ್ದ ಪ್ರತಿಸ್ಪರ್ಧಿಗಳಾಗಿರುವ ಡಿಎಂಕೆ, ಎಐಎಡಿಎಂಕೆ ಹಾಗೂ ಎಡಪಕ್ಷಗಳು ಒಬಿಸಿಗಳ ಮೀಸಲಾತಿ ವಿಷಯದಲ್ಲಿ  ಒಂದೇ ವೇದಿಕೆಗೆ ಬಂದಿರುವುದಕ್ಕೆ ಅಚ್ಚರಿವ್ಯಕ್ತಪಡಿಸಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com