ಕೊರೋನಾ ಮುಕ್ತ ನರ್ಸ್ ನ್ನು ಕರೆದೊಯ್ದು ಪ್ರಶಂಸೆ ಬಹುಮಾನ ಗಿಟ್ಟಿಸಿಕೊಂಡ ಮಣಿಪುರದ ಗಟ್ಟಿಗಿತ್ತಿ ಆಟೋ ಚಾಲಕಿ!

ಕೋವಿಡ್-19ನಿಂದ ಗುಣಮುಖರಾದ ನರ್ಸ್ ಒಬ್ಬರನ್ನು ಇಂಫಾಲ್ ನಿಂದ ಕಮ್ಜೊಂಗ್ ಜಿಲ್ಲೆಯ ಅವರ ಮನೆಗೆ ಪರ್ವತ ಪ್ರದೇಶದಲ್ಲಿ ಆಟೋದಲ್ಲಿ ಬಿಟ್ಟು ಮಣಿಪುರದ ಏಕೈಕ ಆಟೋ ಚಾಲಕಿ ಪ್ರಶಂಸೆ ಗಿಟ್ಟಿಸಿಕೊಂಡಿದ್ದಾರೆ.
ಆಟೋ ಚಾಲಕಿಗೆ ನಗದು ಬಹುಮಾನ ನೀಡಿದ ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್
ಆಟೋ ಚಾಲಕಿಗೆ ನಗದು ಬಹುಮಾನ ನೀಡಿದ ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್

ಗುವಾಹಟಿ: ಕೋವಿಡ್-19ನಿಂದ ಗುಣಮುಖರಾದ ನರ್ಸ್ ಒಬ್ಬರನ್ನು ಇಂಫಾಲ್ ನಿಂದ ಕಮ್ಜೊಂಗ್ ಜಿಲ್ಲೆಯ ಅವರ ಮನೆಗೆ ಪರ್ವತ ಪ್ರದೇಶದಲ್ಲಿ ಆಟೋದಲ್ಲಿ ಬಿಟ್ಟು ಮಣಿಪುರದ ಏಕೈಕ ಆಟೋ ಚಾಲಕಿ ಪ್ರಶಂಸೆ ಗಿಟ್ಟಿಸಿಕೊಂಡಿದ್ದಾರೆ.

ಆಟೋ ಚಾಲಕಿಯ ಹೆಸರು ಲೈಬಿ ಒನಮ್, ಪರ್ವತ ಪ್ರದೇಶದಲ್ಲಿ ಸತತ 8 ಗಂಟೆಗಳ ಕಾಲ ಆಟೋ ಓಡಿಸಿದ ಮಹಿಳೆ ಹಣದ ಉದ್ದೇಶಕ್ಕೆ ಕೆಲಸವನ್ನು ಮಾಡಿರಲಿಲ್ಲ. ಬದಲಾಗಿ ಕೊರೋನಾದಿಂದ ಗುಣಮುಖರಾದ ನರ್ಸ್ ಒಬ್ಬರನ್ನು ಅವರ ಮನೆಗೆ ಸುರಕ್ಷಿತವಾಗಿ ತಲುಪಿಸುವ ಉದ್ದೇಶ ಅವರದ್ದಾಗಿತ್ತು.

ಅದಕ್ಕೂ ಮುಂಚೆ ನರ್ಸ್ ಅವರನ್ನು ಮನೆಗೆ ಕರೆದುಕೊಂಡು ಹೋಗಲು ಯಾವ ಕ್ಯಾಬ್ ಚಾಲಕರೂ ಒಪ್ಪಿರಲಿಲ್ಲವಂತೆ ಎನ್ನುತ್ತಾರೆ ಸ್ಥಳೀಯ ಚಂದ್ರಕುಮಾರ್ ಸಿಂಗ್.

ಕೋಲ್ಕತ್ತಾದಿಂದ ಬಂದಿದ್ದ ನರ್ಸ್ ಸೊಮಿಚೊನ್ ಗೆ ಕೊರೋನಾ ಸೋಂಕು ಕಾಣಿಸಿಕೊಂಡಿತ್ತು. ಇಂಫಾಲ್ ನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದು ಕಳೆದ ಮೇ 31ರಂದು ಬಿಡುಗಡೆಗೊಂಡಿದ್ದರು. ನಂತರ ಮನೆಗೆ ಹೋಗಲು ಟ್ಯಾಕ್ಸಿ ಚಾಲಕರಲ್ಲಿ ಕೇಳಿದಾಗ ಯಾರೂ ಬರಲು ಒಪ್ಪಿರಲಿಲ್ಲ. ಆಂಬ್ಯುಲೆನ್ಸ್ ನಲ್ಲಿ ನರ್ಸ್ ನ್ನು  ಇಂಫಾಲ್ ನ ನಗರಾಮ್ ಗೆ ತಂದುಬಿಟ್ಟರು.

ಆಗ ಸಿಕ್ಕಿದವರೇ ಲೈಬಿ ಒನಮ್ ಆಟೋ ಚಾಲಕಿ. ನರ್ಸ್ ಅವರ ದಯನೀಯ ಸ್ಥಿತಿಯನ್ನು ನೋಡಿ ತಾವೇ ಆಟೋದಲ್ಲಿ ಕೂರಿಸಿಕೊಂಡು ಅವರ ಊರಿಗೆ ಹೊರಟರು. ನರ್ಸ್ ಅವರ ಪತಿ ಓನಮ್ ರಾಜೇಂದ್ರೊ ಸಿಂಗ್ ಸಕ್ಕರೆ ಕಾಯಿಲೆ ರೋಗಿಯಾಗಿದ್ದು ಬರುವ ಸ್ಥಿತಿಯಲ್ಲಿರಲಿಲ್ಲ.

''ನಾನು ಮತ್ತು ನನ್ನ ಜೊತೆಗಿದ್ದ ಮಾವ ಹಲವರನ್ನು ಕೇಳಿಕೊಂಡೆವು. ಆದರೆ ರಾತ್ರಿ ಹೊತ್ತು, ಪರ್ವತ ಪ್ರದೇಶ, ನಾನು ಆಗಷ್ಟೇ ಕೊರೋನಾದಿಂದ ಗುಣಮುಖನಾದ ಭಯದಿಂದ ಯಾರೂ ಬರಲು ಒಪ್ಪಲಿಲ್ಲ. ಆಗ ಈ ಆಟೋ ಚಾಲಕಿ ಮಹಿಳೆ ಮುಂದೆ ಬಂದರು. ಸಾಯಂಕಾಲ 6 ಗಂಟೆಗೆ ಹೊರಟು ಕಮ್ಜೊಂಗ್ ಪಟ್ಟಣವನ್ನು ಮರುದಿನ ಮಧ್ಯರಾತ್ರಿ 2.30ರ ಹೊತ್ತಿಗೆ ತಲುಪಿದೆವು. ಅಲ್ಲಿ ನಮ್ಮ ಅಂಕಲ್ ಒಬ್ಬರು ಬಂದು ಅವರ ಕಾರಿನಲ್ಲಿ ಕರೆದುಕೊಂಡು ಹೋದರು ಎಂದು ನರ್ಸ್ ಸೊಮಿಚೊನ್ ವಿವರಿಸುತ್ತಾರೆ. ಇದೀಗ ಅವರು ಗ್ರಾಮದ ಕ್ವಾರಂಟೈನ್ ಕೇಂದ್ರದಲ್ಲಿ ಇದ್ದಾರೆ.

ನರ್ಸ್ ಈ ವಿಷಯವನ್ನು ಸರ್ಕಾರೇತರ ಸಂಘಟನೆಯೊಂದಕ್ಕೆ ತಿಳಿಸಿದರು. ಅದರ ಕಾರ್ಯಕರ್ತರು 5 ಸಾವಿರ ರೂಪಾಯಿ ಗಿಫ್ಟ್ ನೀಡಿದರು. ಮಾಧ್ಯಮಗಳಲ್ಲಿ ಸುದ್ದಿ ಬಂದು ವಿಷಯ ಮಣಿಪುರ ಮುಖ್ಯಮಂತ್ರಿ ಎನ್ ಬಿರೆನ್ ಸಿಂಗ್ ಅವರಿಗೂ ತಲುಪಿ 1.1 ಲಕ್ಷ ರೂಪಾಯಿ ನಗದು ಬಹುಮಾನ ನೀಡಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದು ಸುದ್ದಿಯಾಗಿ ಅಮೆರಿಕ, ಇಂಗ್ಲೆಂಡ್, ಕೆನಡಾ, ಸಿಂಗಾಪುರಗಳಲ್ಲಿರುವ ಮಣಿಪುರ ನಿವಾಸಿಗಳು ಆಕೆಗೆ ನಗದು ಬಹುಮಾನದ ಕೊಡುಗೆ ನೀಡಿದ್ದಾರೆ.

ಲೈಬಿ ಒನಮ್ ಅವರಿಗೆ ಇಬ್ಬರು ಗಂಡು ಮಕ್ಕಳು. ಇಬ್ಬರೂ ಕಾಲೇಜಿನಲ್ಲಿ ಓದುತ್ತಿದ್ದಾರೆ. ಇವರ ಆದಾಯದಿಂದ ಕುಟುಂಬ ಸಾಗುತ್ತದೆ. 2015ರಲ್ಲಿ ಆಟೋ ಚಾಲಕರು ಎಂಬ ಶೀರ್ಷಿಕೆಯಡಿ ತಯಾರಿಸಲಾಗಿದ್ದ ಸಾಕ್ಷ್ಯಚಿತ್ರಕ್ಕೆ ಹಲವು ಪ್ರಶಸ್ತಿಗಳು ಸಿಕ್ಕಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com