ಭಾರತದಲ್ಲಿ ಇದೇ ಮೊದಲು: ಆ್ಯಂಟಿಜೆನ್ ಆಧಾರಿತ COVID-19 ಪರೀಕ್ಷಾ ಕಿಟ್'ಗೆ ಐಸಿಎಂಆರ್ ಅನುಮೋದನೆ

ಮಹಾಮಾರಿ ಕೊರೋನಾ ವೈರಸ್ ನಡುಕ ಹುಟ್ಟಿಸಿದ್ದು, ವೈರಸ್ ಮಟ್ಟಹಾಕಲು ಅತ್ಯಂತ ಶೀಘ್ರಗತಿಯಲ್ಲಿ ಸೋಂಕನ್ನು ಪತ್ತೆ ಹಚ್ಚುವುದು ಮುಖ್ಯವಾಗಿದೆ. ಈಗಾಗಲೇ ದೇಶದಲ್ಲಿ ವೈರಸ್ ಅತ್ಯಂತ ಶೀಘ್ರಗತಿಯಲ್ಲಿ ಹರಡುತ್ತಿದ್ದು, ಈ ಸಮಯದಲ್ಲಿ ಕಡಿಮೆ ಅವಧಿಯಲ್ಲಿ ಹೆಚ್ಚಿನ ವೈದ್ಯಕೀಯ ಅಗತ್ಯತೆ ಹಾಗೂ ಪರೀಕ್ಷೆಗಳ ಸಂಖ್ಯೆ ಹೆಚ್ಚಿಸುವ ಅನಿವಾರ್ಯತೆ ಎದುರಾಗಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ದೇಶ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳಿಗೆ ಮಹಾಮಾರಿ ಕೊರೋನಾ ವೈರಸ್ ನಡುಕ ಹುಟ್ಟಿಸಿದ್ದು, ವೈರಸ್ ಮಟ್ಟಹಾಕಲು ಅತ್ಯಂತ ಶೀಘ್ರಗತಿಯಲ್ಲಿ ಸೋಂಕನ್ನು ಪತ್ತೆ ಹಚ್ಚುವುದು ಮುಖ್ಯವಾಗಿದೆ. ಈಗಾಗಲೇ ದೇಶದಲ್ಲಿ ವೈರಸ್ ಅತ್ಯಂತ ಶೀಘ್ರಗತಿಯಲ್ಲಿ ಹರಡುತ್ತಿದ್ದು, ಈ ಸಮಯದಲ್ಲಿ ಕಡಿಮೆ ಅವಧಿಯಲ್ಲಿ ಹೆಚ್ಚಿನ ವೈದ್ಯಕೀಯ ಅಗತ್ಯತೆ ಹಾಗೂ ಪರೀಕ್ಷೆಗಳ ಸಂಖ್ಯೆ ಹೆಚ್ಚಿಸುವ ಅನಿವಾರ್ಯತೆ ಎದುರಾಗಿದೆ. 

ಈ ನಿಟ್ಚಿನಲ್ಲಿ ಸಾಂಕ್ರಾಮಿಕ ರೋಗದ ಮೇಲೆ ಹಿಡಿತ ಸಾಧಿಸಲು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್)ಯು ದೇಶದಲ್ಲಿ ಇದೇ ಮೊದಲ ಬಾರಿದೆ ಆ್ಯಂಟಿಜೆನ್ ಆಧಾರಿತ ಕೊರೋನಾ ಪರೀಕ್ಷಾ ಕಿಟ್ ವೊಂದಕ್ಕೆ ಅನುಮೋದನೆ ನೀಡಿದೆ.

ಐಸಿಎಂಆರ್ ಅನುಮೋದನೆ ನೀಡಿರುವ ಈ ಪರೀಕ್ಷಾ ಕಿಟ್ ಕಡಿಮೆ ದರದಲ್ಲಿ ಸಿಗುವುದಷ್ಟೇ ಅಲ್ಲದೆ, ಸೋಂಕಿತರು ಅತ್ಯಂತ ಶೀಘ್ರಗತಿಯಲ್ಲಿ ಗುಣಮುಖರಾಗಲೂ ಸಹಾಯ ಮಾಡುತ್ತದೆ. 

ದೇಶದಲ್ಲಿ ಈಗಾಗಲೇ ಪರೀಕ್ಷಾ ಸಂಖ್ಯೆ ಕಡಿಮೆಯಿರುವ ಕುರಿತು ಕಳವಳ ವ್ಯಕ್ತವಾಗುತ್ತಿರುವ ನಡುವಲ್ಲೇ ಪರೀಕ್ಷಾ ಕಿಟ್'ಗೆ ಐಸಿಎಂಆರ್ ಅನುಮೋದನೆ ನೀಡಿರುವುದು ಮಹತ್ವ ಪಡೆದುಕೊಂಡಿದೆ. ಪ್ರಸ್ತುತ ದೇಶದಲ್ಲಿ ಪ್ರತೀದಿನ ಸುಮಾರು 1.5 ಲಕ್ಷ ಆರ್‌ಟಿಪಿಸಿಆರ್ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಆದರೆ, ಆದರೆ, ಪ್ರಸ್ತುತ ಅನುಮೋದನೆ ಪಡೆದುಕೊಂಡಿರುವ ಟೆಸ್ಟ್ ಕಿಟ್ ಈ ಸಂಖ್ಯೆಯನ್ನು ಗಮನಾರ್ಹವಾಗಿ ಏರಿಕೆಯಾಗುವಂತೆ ಮಾಡಲು ಸಹಾಯ ಮಾಡಲಿದೆ. 

ಪ್ರಸ್ತುತ ಇರುವ ಆರ್‌ಟಿಪಿಸಿಆರ್ ಪರೀಕ್ಷೆ ಅತ್ಯಂತ ದುಬಾರಿಯಾಗಿದ್ದು, ಪ್ರತೀ ಪರೀಕ್ಷಾ ಕಿಟ್'ಗೆ ರೂ.2,500 ವೆಚ್ಚವಾಗುತ್ತಿದೆ. ಇದಕ್ಕಾಗಿ ತರಬೇತಿ ಪಡೆದ ತಂತ್ರಜ್ಞರಿರುವ ಸೀಮಿತ ಪ್ರಯೋಗಾಲಯಗಳಿಗೆ ಪರೀಕ್ಷೆಗಳಿಗೆ ಕಳುಹಿಸಬೇಕಿತ್ತು. ಆದರೆ, ಈ ಆ್ಯಂಟಿಜೆನ್ ಪರೀಕ್ಷಾ ಕಿಟ್ ಆ ಸಮಸ್ಯೆಗಳನ್ನು ದೂರಾಗಿಸಲಿದೆ. 

ಖಾಸಗಿ ಜೈವಿಕ ತಂತ್ರಜ್ಞಾನ ಸಂಸ್ಥೆಯಾದ ಎಸ್'ಡಿ ಬಯೋಸೆನ್ಸರ್ ಈ ಟೆಸ್ಟ್ ಕಿಟ್'ನ್ನು ಅಭಿವೃದ್ಧಿಪಡಿಸಿದ್ದು, ಐಸಿಎಂಆರ್ ಅಷ್ಟೇ ಅಲ್ಲದೆ, ದೆಹಲಿಯ ಏಮ್ಸ್ ಕೂಡ ಇದನ್ನು ಪರಿಶೀಲನೆ ನಡೆಸಿ, ಅನುಮೋದನೆ ನೀಡಿದೆ. ಈ ಪರೀಕ್ಷಾ ಕಿಟ್ ನಿಂದ ಮೂಗಿನಿಂದ ಸ್ವ್ಯಾಬ್ ಸಂಗ್ರಹಿಸಿ ಕೊರೋನಾ ಪರೀಕ್ಷೆ ನಡೆಸಲಾಗುತ್ತದೆ. ಈ ಪರೀಕ್ಷಾ ಕಿಟ್ ಸೋಂಕಿತ ವ್ಯಕ್ತಿಯಲ್ಲಿನ ರೋಗ ನಿರೋಧಕ ಶಕ್ತಿಯನ್ನು ಪ್ರಚೋದಿಸುವ ರೋಗಕಾರಕದ ಅಣುಗಳ ಉಪಸ್ಥಿತಿಯನ್ನು ಪತ್ತೆ ಹಚ್ಚುತ್ತದೆ. 

ಸ್ಟಾಂಡರ್ಡ್ ಕ್ಯೂ ಕೋವಿಡ್-19 ಎಜಿ ರ್ಯಾಪಿಡ್ ಆ್ಯಂಟಿಜೆನ್ ಡೆಟೆಕ್ಷನ್ ಎಂದು ಕರೆಯಲ್ಪಡುವ ಈ ಟೆಸ್ಟ್ ಕಿಟ್ ಬೆಲೆ ರೂ.500 ಇದ್ದು, ಆರ್‌ಟಿಪಿಸಿಆರ್ ಗಿಂತಲೂ ಹೆಚ್ಚು ವೇಗಗತಿಯಲ್ಲಿ ಫಲಿತಾಂಶವನ್ನು ನೀಡಲಿದೆ. ಸಾಮಾನ್ಯವಾಗಿ ಆರ್‌ಟಿಪಿಸಿಆರ್ ಟೆಸ್ಟ್ ಕಿಟ್ ಗಳಲ್ಲಿ ಫಲಿತಾಂಶ ಪಡೆಯಲು 3-4 ಗಂಟೆಗಳ ಕಾಲ ಕಾಯಬೇಕು. ಆದರೆ, ಆ್ಯಂಟಿಜೆನ್ ಟೆಸ್ಟ್ ಕಿಟ್ 30 ನಿಮಿಷಗಳಲ್ಲಿಯೇ ಫಲಿತಾಂಶ ನೀಡಲಿದೆ.

ಕಂಟೈನ್ಮೆಂಟ್ ಝೋನ್ ಹಾಗೂ ಹಾಟ್'ಸ್ಪಾಟ್ ಗಳಲ್ಲಿರುವ ಸಾರಿ, ಐಎಲ್ಐ ರೋಗಿಗಳು, ಯಾವುದೇ ವ್ಯಕ್ತಿಗಳಲ್ಲಿ ಲಕ್ಷಣ ಕಂಡು ಬಂದರೂ ಆ ವ್ಯಕ್ತಿಗೆ ಈ ಟೆಸ್ಟ್ ಕಿಟ್ ಮೂಲಕ ಪರೀಕ್ಷೆಗೊಳಪಡಿಸಬಹುದು. ಈ ಆ್ಯಂಟಿಜೆನ್ ಪರೀಕ್ಷಾ ಕಿಟ್ ತಯಾರಿಸುವ ಗುಣಮಟ್ಟದ ಸಾಮರ್ಥ್ಯವುಳ್ಳ ಕಂಪನಿಗಳು ಮೌಲ್ಯಮಾಪನಕ್ಕಾಗಿ ಮುಂದಕ್ಕೆ ಬರಬೇಕೆಂದು ಇದೇ ವೇಳೆ ಐಸಿಎಂಆರ್ ತಿಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com