ಕರ್ನಾಟಕ ಸೇರಿ ಹಲವು ರಾಜ್ಯಗಳ ಸಿಎಂ ಜೊತೆ ಇಂದು ಪ್ರಧಾನಿ ವಿಡಿಯೊ ಸಂವಾದ: ಕೊರೋನಾ ಚರ್ಚೆ, ಮಮತಾ ಗೈರು?

ದೇಶದಲ್ಲಿ ಕೊರೋನಾ ವೈರಸ್ ಸ್ಥಿತಿಗತಿ, ರಾಜ್ಯಗಳು ತೆಗೆದುಕೊಂಡಿರುವ ಕ್ರಮಗಳು, ಮುಂದಿನ ದಿನಗಳಲ್ಲಿ ವಹಿಸಬೇಕಾದ ಮುನ್ನೆಚ್ಚರಿಕೆ ಮತ್ತು ನಿರ್ಧಾರಗಳ ಬಗ್ಗೆ ಚರ್ಚಿಸಲು ಪ್ರಧಾನ ಮಂತ್ರಿ ನಡೆಸುತ್ತಿರುವ ಎರಡನೇ ದಿನದ ವಿಡಿಯೊ ಸಂವಾದ ಕಾರ್ಯಕ್ರಮದಲ್ಲಿ ಬುಧವಾರ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಭಾಗವಹಿಸಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ದೇಶದಲ್ಲಿ ಕೊರೋನಾ ವೈರಸ್ ಸ್ಥಿತಿಗತಿ, ರಾಜ್ಯಗಳು ತೆಗೆದುಕೊಂಡಿರುವ ಕ್ರಮಗಳು, ಮುಂದಿನ ದಿನಗಳಲ್ಲಿ ವಹಿಸಬೇಕಾದ ಮುನ್ನೆಚ್ಚರಿಕೆ ಮತ್ತು ನಿರ್ಧಾರಗಳ ಬಗ್ಗೆ ಚರ್ಚಿಸಲು ಪ್ರಧಾನ ಮಂತ್ರಿ ನಡೆಸುತ್ತಿರುವ ಎರಡನೇ ದಿನದ ವಿಡಿಯೊ ಸಂವಾದ ಕಾರ್ಯಕ್ರಮದಲ್ಲಿ ಬುಧವಾರ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಭಾಗವಹಿಸಲಿದ್ದಾರೆ.

ಪ್ರಸ್ತುತ ಕೇಂದ್ರ ಸರ್ಕಾರ ಹೇರಿರುವ ಲಾಕ್ ಡೌನ್ ಹಂತ ಜೂನ್ 30ಕ್ಕೆ ಮುಕ್ತಾಯವಾಗಲಿದೆ. ಈ ನಿಟ್ಟಿನಲ್ಲಿ ಮುಂದೆ ಏನೇನು ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಬಗ್ಗೆ ಇಂದು ಹಲವು ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿಯವರು ವಿಡಿಯೊ ಸಂವಾದ ನಡೆಸಲಿದ್ದಾರೆ.

ಇಂದಿನ ಸಂವಾದ ಕಾರ್ಯಕ್ರಮಕ್ಕೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗೈರಾಗಲಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ. ಆರಂಭದಲ್ಲಿ ಕೇಂದ್ರ ಸರ್ಕಾರ ತಯಾರು ಮಾಡಿದ ಪಟ್ಟಿಯಲ್ಲಿ ನಿನ್ನೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿಗಳಿಗೆ ಸಂವಾದದಲ್ಲಿ ಭಾಗವಹಿಸಲು ನಿಗದಿಯಾಗಿತ್ತು. ಆದರೆ ಕೊನೆ ಗಳಿಗೆಯಲ್ಲಿ ಅದು ಇಂದಿಗೆ ಬದಲಾಯಿತು. ಇದು ಮಮತಾ ಬ್ಯಾನರ್ಜಿಯವರಿಗೆ ಸಿಟ್ಟು ತರಿಸಿದ್ದು ಅವರು ಇಂದಿನ ವಿಡಿಯೊ ಸಂವಾದದಲ್ಲಿ ಭಾಗವಹಿಸದಿರಲು ನಿರ್ಧರಿಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಕೇಂದ್ರ ಸರ್ಕಾರ, ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ವಿರುದ್ಧ ಹಲವು ವಿಚಾರಗಳಿಗೆ ಸಂಬಂಧಪಟ್ಟಂತೆ ಸತತ ವಾಗ್ದಾಳಿ ನಡೆಸುತ್ತಲೇ ಬಂದಿರುವ ಮಮತಾ ಬ್ಯಾನರ್ಜಿ ಕೋವಿಡ್-19 ವಿಚಾರದಲ್ಲಿ ಕೂಡ ಬಿಟ್ಟಿಲ್ಲ. ಕೇಂದ್ರದ ನಾಯಕರೊಂದಿಗಿನ ಭಿನ್ನಾಭಿಪ್ರಾಯದಿಂದಾಗಿ ಅವರು ಇಂದಿನ ಸಂವಾದಕ್ಕೆ ಗೈರಾಗಿ ಅವರ ಬದಲಿಗೆ ಪ್ರತಿನಿಧಿಯೊಬ್ಬರನ್ನು ಕೂರಿಸುವ ನಿರ್ಧಾರಕ್ಕೆ ತೃಣಮೂಲ ಕಾಂಗ್ರೆಸ್ ಬಂದಿದೆ ಎಂದು ಹೇಳಲಾಗುತ್ತಿದೆ.

ನಿನ್ನೆ ಸಂವಾದದಲ್ಲಿ 20 ರಾಜ್ಯಗಳ ಮುಖ್ಯಮಂತ್ರಿಗಳು ಭಾಗಿಯಾಗಿ ಕೊರೋನಾಗೆ ಸಂಬಂಧಿಸಿದಂತೆ ಹಲವು ವಿಷಯಗಳು ಚರ್ಚೆಯಾಗಿದ್ದವು. ಇಂದು ಪ್ರಧಾನಿಯವರು ಮುಖ್ಯಮಂತ್ರಿಗಳೊಂದಿಗೆ ಕೊರೋನಾ ವಿಚಾರದಲ್ಲಿ ನಡೆಸುತ್ತಿರುವ ಏಳನೇ ವಿಡಿಯೊ ಸಂವಾದ ಇದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com