ಸೈನಿಕರು ನಿರಾಯುಧರಾಗಿರಲಿಲ್ಲ, ಶಸ್ತ್ರಸಜ್ಜಿತರಾಗಿದ್ದರು: ರಾಹುಲ್ ಗಾಂಧಿಗೆ ವಿದೇಶಾಂಗ ಸಚಿವರ ತಿರುಗೇಟು

ಗಾಲ್ವಾನ್ ಸಂಘರ್ಷದ ವೇಳೆ ಸೈನಿಕರು ನಿರಾಯುಧರಾಗಿರಲಿಲ್ಲ, ಶಸ್ತ್ರಸಜ್ಜಿತರಾಗಿ ಹೋಗಿದ್ದರು ಎಂದು ವಿದೇಶಾಂಗ ಸಚಿವ ಎಸ್ ಜೈ ಶಂಕರ್ ಹೇಳಿದ್ದಾರೆ.
ಜೈ ಶಂಕರ್-ರಾಹುಲ್ ಗಾಂಧಿ
ಜೈ ಶಂಕರ್-ರಾಹುಲ್ ಗಾಂಧಿ

ನವದೆಹಲಿ: ಗಾಲ್ವಾನ್ ಸಂಘರ್ಷದ ವೇಳೆ ಸೈನಿಕರು ನಿರಾಯುಧರಾಗಿರಲಿಲ್ಲ, ಶಸ್ತ್ರಸಜ್ಜಿತರಾಗಿ ಹೋಗಿದ್ದರು ಎಂದು ವಿದೇಶಾಂಗ ಸಚಿವ ಎಸ್ ಜೈ ಶಂಕರ್ ಹೇಳಿದ್ದಾರೆ.

ಲಡಾಖ್‌ನ ಗಾಲ್ವಾನ್ ಕಣಿವೆ ಪ್ರದೇಶದಲ್ಲಿ ಚೀನಾ ಸೈನಿಕರನ್ನು ಹಿಂದೆ ಕಳುಹಿಸಲು ಹೋದ ಭಾರತೀಯ ಸೈನಿಕರು ಏಕೆ ನಿರಾಯುಧರಾಗಿದ್ದರು? ಆಯುಧಗಳಿಲ್ಲದೇ ಅವರನ್ನು ಏಕೆ ಕಳುಹಿಸಿದ್ದು? ಇದಕ್ಕೆ ಯಾರು ಹೊಣೆ? ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಶ್ನಿಸಿದ್ದರು. ಲಡಾಖ್‌ ಗಡಿ ಭಾಗದಲ್ಲಿ ಘರ್ಷಣೆಯಾದ ಸ್ಥಳದಲ್ಲಿ ಕಾರ್ಯನಿರ್ವಹಿಸಿದ್ದ ನಿವೃತ್ತಿ ಯೋಧರೊಬ್ಬರ ಸಂದರ್ಶನವನ್ನು ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿರುವ ರಾಹುಲ್ ಗಾಂಧಿ ''ನಿರಾಯುಧರಾಗಿದ್ದ ನಮ್ಮ ಸೈನಿಕರನ್ನು ಕೊಲ್ಲಲು ಚೀನಾಗೆ ಎಷ್ಟು ಧೈರ್ಯ?'' ಎಂದು ಟೀಕಿಸಿದ್ದರು.

ರಾಹುಲ್ ಗಾಂಧಿ ಅವರ ಈ ಪ್ರಶ್ನೆಗೆ ಟ್ವಿಟರ್ ನಲ್ಲಿ ತಿರುಗೇಟು ನೀಡಿರುವ ವಿದೇಶಾಂಗ ಸಚಿವ ಎಸ್ ಜೈ ಶಂಕರ್ ಅವರು, ನೇರವಾಗಿ ಮಾತನಾಡೋಣ.. ಗಡಿಯಲ್ಲಿ ಕಾರ್ಯ ನಿರ್ವಹಿಸುವ ಯಾವುದೇ ಸೈನಿಕ ಕೂಡ ನಿರಾಯುಧನಾಗಿರಲು ಸಾಧ್ಯವೇ ಇಲ್ಲ. ಎಲ್ಲ ರೀತಿಯ ಪರಿಸ್ಥಿತಿ ಎದುರಿಸಲು ಸರ್ವಸನ್ನದ್ಧನಾಗಿ ಶಸ್ತ್ರಸಜ್ಜಿತನಾಗಿಯೇ ತೆರಳಿರುತ್ತಾನೆ. ಚೀನಾ ಭಾರತ ಗಡಿ ಒಪ್ಪಂದದ ಅನ್ವಯ ಎಲ್ಎಸಿ ಯಲ್ಲಿ ಯಾವುದೇ ಸೈನಿಕ ಫೈರ್ ಆರ್ಮ್ (ಮದ್ದುಗುಂಡುಗಳು ಅಥವಾ ಬಂದೂಕುಗಳು)ಗಳನ್ನು ಬಳಕೆ ಮಾಡುವಂತಿಲ್ಲ. ಅಂತೆಯೇ ಜೂನ್ 15ರಂದೂ ಕೂಡ ಸೈನಿಕರು ನಿರಾಯುಧರಾಗಿರಲಿಲ್ಲ, ಶಸ್ತ್ರಸಜ್ಜಿತರಾಗಿದ್ದರು. ಆದರೆ ಅವುಗಳ ಬಳಕೆ ನಿಷಿಧ್ಧವಾಗಿತ್ತು ಎಂದು ಟ್ವೀಟ್ ಮಾಡಿದ್ದಾರೆ.

ಲಡಾಖ್ ನ ಗಾಲ್ವಾನ್ ನಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ನಡೆದ ಸಂಘರ್ಷದಲ್ಲಿ ಭಾರತದ 20 ಸೈನಿಕರು ಹುತಾತ್ಮರಾಗಿದ್ದರೆ, ಅತ್ತ ಚೀನಾದ 35ಕ್ಕೂ ಹೆಚ್ಚು ಸೈನಿಕರು ಸಾವನ್ನಪ್ಪಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com