ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಚರಂಡಿ ನೀರಿನಲ್ಲೂ ಕೊರೋನಾ ವೈರಸ್?: ಬೆಚ್ಚಿ ಬೀಳಿಸಿದ ಸಂಶೋಧನಾ ವರದಿ

ನೀರಿನ ಮೂಲಕವೂ ಕೊರೋನಾ ವೈರಸ್ ಹರಡುತ್ತಿದೆಯೇ...? ಇಂತಹುದೊಂದು ಪ್ರಶ್ನೆಗೆ ಸಂಶೋಧನಾ ವರದಿಯೊಂದು ಇಂಬು ನೀಡಿದ್ದು, ಮೋರಿ ನೀರಿನಲ್ಲಿ ಕೊರೋನಾ ವೈರಸ್ ಕಂಡುಬಂದಿದೆ ಎಂದು ಹೇಳಲಾಗಿದೆ.

ನವದೆಹಲಿ: ನೀರಿನ ಮೂಲಕವೂ ಕೊರೋನಾ ವೈರಸ್ ಹರಡುತ್ತಿದೆಯೇ...? ಇಂತಹುದೊಂದು ಪ್ರಶ್ನೆಗೆ ಸಂಶೋಧನಾ ವರದಿಯೊಂದು ಇಂಬು ನೀಡಿದ್ದು, ಮೋರಿ ನೀರಿನಲ್ಲಿ ಕೊರೋನಾ ವೈರಸ್ ಕಂಡುಬಂದಿದೆ ಎಂದು ಹೇಳಲಾಗಿದೆ.

ಮಾರಕ ಕೊರೋನಾ ವೈರಸ್ ಗೆ ಈಗಾಗಲೇ ದೇಶದಲ್ಲಿ 3 ಲಕ್ಷಕ್ಕೂ ಅಧಿಕ ಮಂದಿ ತುತ್ತಾಗಿದ್ದು ದಿನೇ ದಿನೇ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಇದೇ ಹೊತ್ತಿನಲ್ಲಿ ಮೋರಿ ನೀರಿನಲ್ಲೂ ಕೊರೋನಾ ವೈರಸ್ ಸೋಂಕು ಕಂಡುಬಂದಿದೆ ಎಂದು ಸಂಶೋಧನಾ ವರದಿಯೊಂದು  ಹೇಳಿದೆ.

ಐಐಟಿ ಗಾಂಧಿನಗರ, ಗುಜರಾತ್ ಜೈವಿಕ ತಂತ್ರಜ್ಞಾನ ಸಂಶೋಧನಾ ಕೇಂದ್ರ (ಜಿಬಿಆರ್‌ಸಿ) ಮತ್ತು ಗುಜರಾತ್ ಮಾಲಿನ್ಯ ನಿಯಂತ್ರಣ ಮಂಡಳಿ (ಜಿಪಿಸಿಬಿ) ನಡೆಸಿದ ಜಂಟಿ ಸಂಶೋಧನೆಯಲ್ಲಿ ಇಂತಹುದೊಂದು ಬೆಚ್ಚಿ ಬೀಳಿಸುವ ಮಾಹಿತಿ ತಿಳಿದುಬಂದಿದೆ. 

ಇದೇ ಮೇ 8 ಮತ್ತು 27ರಂದು ಅಹಮದಾಬಾದ್‌ನಲ್ಲಿರುವ ಹಳೆಯ ಪಿರಾನಾ ತ್ಯಾಜ್ಯನೀರಿನ ಸಂಸ್ಕರಣಾ ಘಟಕ (ಡಬ್ಲ್ಯುಡಬ್ಲ್ಯುಟಿಪಿ)ದಲ್ಲಿನ ನೀರನ್ನು ವಿಜ್ಞಾನಿಗಳು ಪರೀಕ್ಷೆಗೊಳಪಡಿಸಿದಾಗ ಅದರಲ್ಲಿ ಕೊರೋನಾ ವೈರಾಣುವಿನಲ್ಲಿನ viral RNA ಪತ್ತೆಯಾಗಿದೆ. ಇಲ್ಲಿನ ಕಲುಷಿತ ನೀರು ಮತ್ತು ವೈರಲ್ ಆರ್ಎನ್ಎಯ ಆರ್ಟಿ-ಪಿಸಿಆರ್ ವಿಶ್ಲೇಷಣೆ ಮಾಡಲಾಗಿದ್ದು, ಇದರಲ್ಲಿ SARS-CoV-2 ವೈರಸ್ ಅಂಶಗಳು ಕಂಡುಬಂದಿದೆ. ಇದರಲ್ಲಿ ORF1ab, N ಪ್ರೋಟೀನ್ ಜೀನ್‌ಗಳು ಮತ್ತು S ಪ್ರೋಟೀನ್ ಜೀನ್‌ಗಳು SARS-CoV-2 ವೈರಸ್ ಜೀನ್‌ಗಳಾಗಿವೆ ಎಂದು ವಿಜ್ಞಾನಿಗಳು ಅನ್ವೇಷಿಸಿದ್ದಾರೆ.

ಈ ಬಗ್ಗೆ ವರದಿ ನೀಡಿರುವ ವಿಜ್ಞಾನಿಗಳು ಭಾರತದಲ್ಲಿನ ಮೋರಿ ನೀರು ಅಥವಾ ಒಳಚರಂಡಿ ನೀರಿನಲ್ಲಿ SARS-CoV-2 ಜೀನ್ ಗಳು ಕಂಡುಬಂದಿವೆ. ಬಹುಶಃ ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಗಳಿಂದ ಬಿಡಲಾಗುತ್ತಿದುವ ತ್ಯಾಜ್ಯದ ನೀರು ಮೋರಿಗೆ ಸೇರುತ್ತಿರುವುದರಿಂದ ಮೋರಿ ನೀರಿನಲ್ಲಿ ಈ SARS-CoV-2 ಜೀನ್ ಗಳು ಕಂಡುಬಂದಿರುವ ಸಾಧ್ಯತೆ ಇದೆ ಎಂದು ಗಾಂಧಿನಗರದ ಭಾರತೀಯ ತಂತ್ರಜ್ಞಾನ ಸಂಸ್ಥೆ ಭೂ ವಿಜ್ಞಾನ ವಿಭಾಗದ ಮುಖ್ಯಸ್ಥ ಮನೀಶ್ ಕುಮಾರ್ ಹೇಳಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com