'ದೇಶದಲ್ಲಿ ಶಾಂತಿಗೆ ಭಂಗ ತರುವವರಲ್ಲಿ ಭಯ ಹುಟ್ಟಿಸುವುದು ಎನ್ಎಸ್ ಜಿ ಕೆಲಸ': ಅಮಿತ್ ಶಾ 

ಸರ್ಜಿಕಲ್ ಸ್ಟ್ರೈಕ್ ಮತ್ತು ಬಾಲಕೋಟ್ ವಾಯುದಾಳಿ ನಂತರ ಭಾರತದ ರಕ್ಷಣಾ ಪಡೆ ಅಮೆರಿಕ ಮತ್ತು ಇಸ್ರೇಲ್ ದೇಶಗಳಿಗೆ ಸಮನಾಗಿದ್ದು, ಸೈನಿಕರ ಬಲಿದಾನಕ್ಕೆ ಪ್ರತಿಯಾಗಿ ಶತ್ರುವಿನ ದೇಶದೊಳಗೆ ಹೋಗಿ ಯುದ್ಧ ಮಾಡುವ ಸಾಮರ್ಥ್ಯವಿದೆ ಎಂದು ನಮ್ಮ ದೇಶ ತೋರಿಸಿಕೊಟ್ಟಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
'ದೇಶದಲ್ಲಿ ಶಾಂತಿಗೆ ಭಂಗ ತರುವವರಲ್ಲಿ ಭಯ ಹುಟ್ಟಿಸುವುದು ಎನ್ಎಸ್ ಜಿ ಕೆಲಸ': ಅಮಿತ್ ಶಾ 

ಕೋಲ್ಕತ್ತಾ: ಸರ್ಜಿಕಲ್ ಸ್ಟ್ರೈಕ್ ಮತ್ತು ಬಾಲಕೋಟ್ ವಾಯುದಾಳಿ ನಂತರ ಭಾರತದ ರಕ್ಷಣಾ ಪಡೆ ಅಮೆರಿಕ ಮತ್ತು ಇಸ್ರೇಲ್ ದೇಶಗಳಿಗೆ ಸಮನಾಗಿದ್ದು, ಸೈನಿಕರ ಬಲಿದಾನಕ್ಕೆ ಪ್ರತಿಯಾಗಿ ಶತ್ರುವಿನ ದೇಶದೊಳಗೆ ಹೋಗಿ ಯುದ್ಧ ಮಾಡುವ ಸಾಮರ್ಥ್ಯವಿದೆ ಎಂದು ನಮ್ಮ ದೇಶ ತೋರಿಸಿಕೊಟ್ಟಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಅವರು ಇಂದು ಕೋಲ್ಕತ್ತಾದ ರಾಜರ್ಹತ್ ನಲ್ಲಿ ರಾಷ್ಟ್ರೀಯ ರಕ್ಷಣಾ ಪಡೆ(ಎನ್ ಎಸ್ ಜಿ) ಹೊಸ ಕಟ್ಟಡ ಉದ್ಘಾಟಿಸಿದ ಬಳಿಕ ಮಾತನಾಡಿದರು. ರಾಷ್ಟ್ರೀಯ ರಕ್ಷಣಾ ಪಡೆ, ಸರ್ಕಾರದ ಮುಂದಿಟ್ಟಿರುವ ಬೇಡಿಕೆಗಳನ್ನು ಇನ್ನು 5 ವರ್ಷಗಳಲ್ಲಿ ಈಡೇರಿಸಲಾಗುವುದು. ತರಬೇತಿ, ಆಧುನಿಕ ಶಸ್ತ್ರಾಸ್ತ್ರ, ಕಮಾಂಡೊಗಳ ಕುಟುಂಬಸ್ಥರಿಗೆ ಸೌಲಭ್ಯ ಒದಗಿಸಿಕೊಡುವ ವಿಚಾರ ಇತ್ಯಾದಿಗಳಲ್ಲಿ ರಾಷ್ಟ್ರೀಯ ರಕ್ಷಣಾ ಪಡೆಯನ್ನು ಒಂದು ಪೂರ್ಣ ಪ್ರಮಾಣದ ಕಮಾಂಡೊ ಪಡೆಯನ್ನಾಗಿ ಪರಿವರ್ತಿಸಲಾಗುವುದು. ವಿಶ್ವದ ಬೇರೆ ರಕ್ಷಣಾ ಪಡೆಗಳಿಗಿಂತ ಭಾರತದಲ್ಲಿ ರಾಷ್ಟ್ರೀಯ ರಕ್ಷಣಾ ಪಡೆಯನ್ನು ಎರಡು ಹೆಜ್ಜೆ ಮುಂದೆ ಇಡುವುದು ಸರ್ಕಾರದ ಗುರಿಯಾಗಿದೆ ಎಂದರು.

ದೇಶದಲ್ಲಿ ಶಾಂತಿ, ಸುವ್ಯವಸ್ಥೆಗೆ ಭಂಗ ತರುವವರು, ದೇಶವನ್ನು ವಿಭಜಿಸಲು ನೋಡುವವರಿಗೆ ಭಯ ಹುಟ್ಟಿಸುವುದು ಎನ್ ಎಸ್ ಜಿಯ ಕೆಲಸವಾಗಿದೆ. ಪ್ರಚೋದನಾಕಾರಿ ಮಾತುಗಳು, ಹಿಂಸಾಕೃತ್ಯಗಳನ್ನು ಮಾಡುವವರಿಗೆ ಎನ್ ಎಸ್ ಜಿ ಪ್ರತಿಕಾರ ಕ್ರಮ ಕೈಗೊಳ್ಳಲಿದೆ ಎಂದು ಅಮಿತ್ ಶಾ ಎಚ್ಚರಿಕೆ ನೀಡಿದರು.

ಭಾರತ ದೇಶ ಭಯೋತ್ಪಾದನೆ ವಿರುದ್ಧ ಶೂನ್ಯ ಸಹಿಷ್ಣುತೆಯನ್ನು ಹೊಂದಿದ್ದು ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ಪೂರ್ವಭಾವಿ ರಕ್ಷಣಾ ನೀತಿಯನ್ನು ಕೈಗೊಂಡಿದೆ.ಮೋದಿಯವರು ಪ್ರಧಾನಿಯಾದ ನಂತರ ವಿದೇಶಿ ನೀತಿಯಿಂದ ಪ್ರತ್ಯೇಕಿಸಲ್ಪಟ್ಟ ಪೂರ್ವಭಾವಿ ರಕ್ಷಣಾ ನೀತಿಯನ್ನು ಅನುಸರಿಸುತ್ತಿದೆ ಎಂದರು. 

ಗೃಹ ಸಚಿವ ಅಮಿತ್ ಶಾ ಅವರ ಇಂದಿನ ದಿನವಿಡೀ ಕಾರ್ಯಕ್ರಮ ಕೋಲ್ಕತ್ತಾದಲ್ಲಿ ಇರಲಿದ್ದು ಅವರ ಆಗಮನ ಸಂದರ್ಭದಲ್ಲಿ ವಿರೋಧ ಪಕ್ಷಗಳು ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸಿ ಗೋ ಬ್ಯಾಕ್ ಎಂದು ವಿಮಾನ ನಿಲ್ದಾಣದ ಹೊರಗೆ ಪ್ರತಿಭಟನೆ ನಡೆಸಿದ್ದು ಕಂಡುಬಂತು.


ಇಂದು ಬೆಳಗ್ಗೆ 11 ಗಂಟೆ ವೇಳೆಗೆ ಅಮಿತ್ ಶಾ ಅವರು ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ಗೇಟಿನ ಹೊರಗೆ ಎಡರಂಗ, ಕಾಂಗ್ರೆಸ್ ನ ನೂರಾರು ಪ್ರತಿಭಟನಾಕಾರರು ಕಪ್ಪು ಬಾವುಟ ಪ್ರದರ್ಶಿಸಿ ಗೋ ಬ್ಯಾಕ್ ಘೋಷಣೆ ಕೂಗಿದರು. ವಿಮಾನ ನಿಲ್ದಾಣಕ್ಕೆ ಪ್ರತಿಭಟನಾಕಾರರು ನುಗ್ಗದಂತೆ ಪೊಲೀಸರು ಬ್ಯಾರಿಕೇಡ್ ಗಳನ್ನು ಅಳವಡಿಸಿದ್ದರು.
ಸಂಸತ್ತಿನಲ್ಲಿ ಪೌರತ್ವ ತಿದ್ದುಪಡಿ ಅಂಗೀಕಾರವಾದ ಹಿನ್ನಲೆಯಲ್ಲಿ ಕೋಲ್ಕತ್ತಾ ಬಿಜೆಪಿ ಶಾಹಿದ್ ಮಿನಾರ್ ಮೈದಾನದಲ್ಲಿ ಇಂದು ರ್ಯಾಲಿ ಆಯೋಜಿಸಿದ್ದು ಅಲ್ಲಿ ಅಮಿತ್ ಶಾ ಅವರನ್ನು ಸನ್ಮಾನಿಸಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com