ಲೋಕಸಭೆಯಲ್ಲಿ ಗದ್ದಲ: 'ಅಧಿವೇಶನದಿಂದಲೇ ಅಮಾನತು'; ಸಂಸದರಿಗೆ ಸ್ಪೀಕರ್ ಓಂ ಬಿರ್ಲಾ ಖಡಕ್ ಎಚ್ಚರಿಕೆ

ದೆಹಲಿ ಹಿಂಸಾಚಾರ ವಿಚಾರವಾಗಿ ಸೋಮವಾರ ನಡೆದ ಗದ್ದಲಕ್ಕೆ ಸಂಬಂಧಿಸಿದಂತೆ ಲೋಕಸಭಾ ಸ್ಪೀಕರ್ ಸಂಸದರಿಗೆ ಖಡಕ್ ಎಚ್ಚರಿಕೆ ರವಾನೆ ಮಾಡಿದ್ದು, ವರ್ತನೆ ಮಿತಿ ಮೀರಿದರೆ ಅಧಿವೇಶನದಿಂದಲೇ ಅಮಾನತು ಮಾಡುವುದಾಗಿ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ದೆಹಲಿ ಹಿಂಸಾಚಾರ ವಿಚಾರವಾಗಿ ಸೋಮವಾರ ನಡೆದ ಗದ್ದಲಕ್ಕೆ ಸಂಬಂಧಿಸಿದಂತೆ ಲೋಕಸಭಾ ಸ್ಪೀಕರ್ ಸಂಸದರಿಗೆ ಖಡಕ್ ಎಚ್ಚರಿಕೆ ರವಾನೆ ಮಾಡಿದ್ದು, ವರ್ತನೆ ಮಿತಿ ಮೀರಿದರೆ ಅಧಿವೇಶನದಿಂದಲೇ ಅಮಾನತು ಮಾಡುವುದಾಗಿ ಹೇಳಿದ್ದಾರೆ.

ನಿನ್ನೆ ಲೋಕಸಭೆಯಲ್ಲಿ ನಡೆದ ಗದ್ದಲಕ್ಕೆ ಸಂಬಂಧಿಸಿದಂತೆ ಇಂದು ಸರ್ವಪಕ್ಷಗಳ ಸಭೆಯಲ್ಲಿ ಪಾಲ್ಗೊಂಡಿದ್ದ ಸ್ಪೀಕರ್ ಓಂ ಬಿರ್ಲಾ ಅವರು, ಕಲಾಪದ ವೇಳೆ ಯಾವುದೇ ಸದಸ್ಯರು ತಮಗೆ ನಿಗದಿಪಡಿಸಿದ ಸ್ಥಳ ಬಿಟ್ಟು ಬೇರೆಡೆ ಬಂದು ಕಲಾಪಕ್ಕೆ ಅಡ್ಡಿಪಡಿಸಿದರೆ ಅಂತಹ ಸದಸ್ಯರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತದೆ. ಸದಸ್ಯರಿಂದ ಅಶಿಸ್ತಿನ ವರ್ತನೆ ಕಂಡುಬಂದರೆ ಬಾಕಿ ಉಳಿದಿರುವ ಕಲಾಪದಿಂದ ಅವರನ್ನು ಅಮಾನತು ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಅಂತೆಯೇ ಸದಸ್ಯರು ದೆಹಲಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್, ಡಿಎಂಕೆ, ಟಿಎಂಸಿ ಅಥವಾ ಇನ್ನಾವುದೇ ಪಕ್ಷದ ಸದಸ್ಯರು ಗಂಭೀರ ಪ್ರಶ್ನೆ ಕೇಳಬೇಕಿದ್ದರೆ ಅವರಿಗೆ ಶೂನ್ಯವೇಳೆಯಲ್ಲಿ ಅವಕಾಶ ನೀಡಲಾಗುತ್ತದೆ.  ಹೀಗಾಗಿ ಸುಗಮ ಕಲಾಪಕ್ಕೆ ಅನುವು ಮಾಡಿಕೊಡಬೇಕು ಎಂದು ಸ್ಪೀಕರ್ ಓಂ ಬಿರ್ಲಾ ಸದಸ್ಯರಲ್ಲಿ ಮನವಿ ಮಾಡಿಕೊಂಡರು.

ಅಗಿದ್ದೇನು?
ಸಂಸತ್‌ನ ಬಜೆಟ್‌ ಅಧಿವೇಶನ ಸೋಮವಾರ ಪುನರಾರಂಭಗೊಂಡಿತ್ತು. ಎರಡು ಸದನಗಳಲ್ಲಿ ಪ್ರತಿಧ್ವನಿಸಿದ ಸಿಎಎ ಗಲಭೆ ವಿಪಕ್ಷಗಳು ಹಾಗೂ ಆಡಳಿತ ಪಕ್ಷದ ಜಂಗಿ ಕುಸ್ತಿಗೆ ಕಾರಣವಾಯಿತು. ಮಧ್ಯಾಹ್ನ ಕಲಾಪ ಆರಂಭವಾಗುತ್ತಿದ್ದಂತೆಯೇ ಕಾಂಗ್ರೆಸ್‌ ಸದಸ್ಯರು ಸದನದ ಬಾವಿಗೆ ತೆರಳಿ, ದಿಲ್ಲಿ ಗಲಭೆ ವಿಚಾರ ಮುಂದಿಟ್ಟುಕೊಂಡು ಸರಕಾರದ ವಿರುದ್ಧ ಘೋಷಣೆ ಕೂಗಲಾರಂಭಿಸಿದರು. ಅದಕ್ಕೆ ಮಣಿಯದೆ ಸ್ಪೀಕರ್‌ ಓಂ ಬಿರ್ಲಾ ಅವರು ಕಲಾಪ ಆರಂಭಿಸಿದಾಗ ಕೆಲವರು ಕಪ್ಪು ಭಿತ್ತಿಪತ್ರಗಳನ್ನು ಹಿಡಿದು ಆಡಳಿತ ಪಕ್ಷದ ಸಾಲಿನತ್ತ ತೆರಳಿದ್ದಲ್ಲದೇ ಗೃಹ ಸಚಿವ ಅಮಿತ್‌ ಶಾ ರಾಜೀನಾಮೆಗೆ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಷಿ ಅವರು, ‘‘ಗಲಭೆಗೆ ಪ್ರಚೋದನೆ ನೀಡಿದ ಜನ ಇವರು. 1984ರ ಸಿಖ್‌ ವಿರೋಧಿ ದಂಗೆಯಲ್ಲಿ 3,000 ಜನರನ್ನು ಕೊಂದರು ಮತ್ತು ಆ ಕುರಿತು ಯಾವುದೇ ತನಿಖೆ ನಡೆಸಲಿಲ್ಲ. ನಮ್ಮ ಆದ್ಯತೆ ಈಗ ದಿಲ್ಲಿಯಲ್ಲಿ ಶಾಂತಿ ನೆಲೆಸುವಂತೆ ಮಾಡುವುದಾಗಿದೆ. ಆದರೆ, ಇವರಿಗೆ ಉದ್ವಿಗ್ನ ಸ್ಥಿತಿಯೇ ಮುಂದುವರಿಯಬೇಕೆಂಬ ಬಯಕೆ ಇದೆ,’’ ಎಂದು ಕಾಂಗ್ರೆಸ್‌ಗೆ ಟಾಂಗ್‌ ನೀಡಿದರು. ಆಸನಗಳಿಗೆ ತೆರಳಿ ಕಲಾಪ ನಡೆಯಲು ಅನುವು ಮಾಡಿಕೊಡುವಂತೆ ಸ್ಪೀಕರ್‌ ಮಾಡಿದ ಮನವಿಗೆ ಕಾಂಗ್ರೆಸ್‌ ಸದಸ್ಯರು ಸ್ಪಂದಿಸಲಿಲ್ಲ. ಬದಲಿಗೆ, ‘ನಮಗೆ ನ್ಯಾಯ ಬೇಕು’,’ ‘ಅಮಿತ್‌ ಶಾ ರಾಜೀನಾಮೆ ನೀಡಲಿ’ ಎಂಬ ಘೋಷಣೆಗಳನ್ನು ತೀವ್ರಗೊಳಿಸಿದರು. ‘ದ್ವೇಷದ ಭಾಷಣ ನಿಲ್ಲಿಸಿ, ನಮ್ಮ ಭಾರತವನ್ನು ಉಳಿಸಿ’ ಎಂಬ ಭಿತ್ತಿಪತ್ರಗಳನ್ನೂ ಪ್ರದರ್ಶಿಸಿದರು. 

ಗದ್ದಲದ ನಡುವೆಯೇ ಮಂಡನೆಯಾದ ‘ವಿವಾದ್‌ ಸೆ ವಿಶ್ವಾಸ್‌’ ವಿಧೇಯಕದ ಕುರಿತು ಮಾತನಾಡುತ್ತಿದ್ದ ಬಿಜೆಪಿಯ ಸಂಜಯ್‌ ಜೈಸ್ವಾಲ್‌ ಅವರತ್ತ ಕಾಂಗ್ರೆಸ್‌ನ ಗೌರವ್‌ ಗೊಗೊಯ್‌ ಮತ್ತು ರವನೀತ್‌ ಸಿಂಗ್‌ ಬಿಟ್ಟು ಭಿತ್ತಿಪತ್ರ ಹಿಡಿದು ನುಗ್ಗಿದಾಗ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿತು. ಬಿಜೆಪಿ ಸದಸ್ಯರು ಬಾವಿಗೆ ತೆರಳುವಂತೆ ಕಾಂಗ್ರೆಸ್‌ ಸದಸ್ಯರಿಗೆ ಮನವಿ ಮಾಡಿದರು. ಇಬ್ಬರೂ ಅದಕ್ಕೆ ಒಪ್ಪದೇ ಇದ್ದಾಗ ಉಭಯ ಪಕ್ಷಗಳ ಸದಸ್ಯರೂ ಪರಸ್ಪರ ನೂಕಾಟ, ತಳ್ಳಾಟದಲ್ಲಿ ತೊಡಗಿದರು. ಕೆಲವರು ಸದಸ್ಯರು ಪರಸ್ಪರ ಕೈ,ಕೈ ಮಿಲಾಯಿಸಿಕೊಂಡರು. ಇಷ್ಟೆಲ್ಲ ಆದರೂ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ, ನಾಯಕ ರಾಹುಲ್‌ ಗಾಂಧಿ ಎಲ್ಲವನ್ನೂ ನೋಡುತ್ತ ಸುಮ್ಮನೆ ಕುಳಿತಿದ್ದರು. ಗದ್ದಲ ನಿಯತ್ರಣಕ್ಕೆ ಬರದೇ ಇದ್ದಾಗ ಸ್ಪೀಕರ್‌ ಮಧ್ಯಾಹ್ನ 3 ಗಂಟೆವರೆಗೆ ಕಲಾಪ ಮುಂದೂಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com