ಸದನದಲ್ಲಿ ಮತ್ತೆ ದೆಹಲಿ ಹಿಂಸಾಚಾರ ಗದ್ದಲ: ಲೋಕಸಭೆ ಕಲಾಪ ಮಧ್ಯಾಹ್ನಕ್ಕೆ, ರಾಜ್ಯಸಭೆ ಕಲಾಪ ನಾಳೆಗೆ ಮುಂದೂಡಿಕೆ 

ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮತ್ತೆ ದೆಹಲಿ ಹಿಂಸಾಚಾರ ಗದ್ದಲ, ಕೋಲಾಹಲ ಉಂಟಾಗಿದೆ. ಇಂದು ಬೆಳಗ್ಗೆ ಲೋಕಸಭೆಯಲ್ಲಿ ಕಲಾಪ ಆರಂಭವಾಗುತ್ತಿದ್ದಂತೆ ವಿರೋಧ ಪಕ್ಷದ ನಾಯಕರು ದೆಹಲಿ ಹಿಂಸಾಚಾರ ವಿಷಯ ಎತ್ತಿದರು. 
ಸದನದಲ್ಲಿ ಮತ್ತೆ ದೆಹಲಿ ಹಿಂಸಾಚಾರ ಗದ್ದಲ: ಲೋಕಸಭೆ ಕಲಾಪ ಮಧ್ಯಾಹ್ನಕ್ಕೆ, ರಾಜ್ಯಸಭೆ ಕಲಾಪ ನಾಳೆಗೆ ಮುಂದೂಡಿಕೆ 

ನವದೆಹಲಿ: ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮತ್ತೆ ದೆಹಲಿ ಹಿಂಸಾಚಾರ ಗದ್ದಲ, ಕೋಲಾಹಲ ಉಂಟಾಗಿದೆ. ಇಂದು ಬೆಳಗ್ಗೆ ಲೋಕಸಭೆಯಲ್ಲಿ ಕಲಾಪ ಆರಂಭವಾಗುತ್ತಿದ್ದಂತೆ ವಿರೋಧ ಪಕ್ಷದ ನಾಯಕರು ದೆಹಲಿ ಹಿಂಸಾಚಾರ ವಿಷಯ ಎತ್ತಿದರು. 


ನಮಗೆ ನ್ಯಾಯ ಸಿಗಬೇಕು ಎಂದು ಪ್ರತಿಪಕ್ಷದ ಸದಸ್ಯರು ಹೇಳುತ್ತಿದ್ದಂತೆ ಸ್ಪೀಕರ್ ಸ್ಥಾನದಲ್ಲಿ ಕುಳಿತಿದ್ದ ಭೃತ್ರಿಹರಿ ಮಹತಾಬ್, ಸದನದಲ್ಲಿ ಕಲಾಪ ನಡೆಯದೆ ಮುಂದೂಡುತ್ತಿರುವುದರಿಂದ ಸ್ಪೀಕರ್ ಅವರಿಗೆ ತೀವ್ರ ಬೇಸರವಾಗಿದೆ ಎಂದರು. ಕಲಾಪ ಮುಂದುವರಿಸಲಾಗದೆ ಮಧ್ಯಾಹ್ನ 12 ಗಂಟೆಯವರೆಗೆ ಮುಂದೂಡಲಾಯಿತು.


ಕಾಂಗ್ರೆಸ್, ಸಮಾಜವಾದಿ ಪಾರ್ಟಿ, ಆಮ್ ಆದ್ಮಿ ಪಾರ್ಟಿ ಮತ್ತು ಸಿಪಿಐನ ಸದಸ್ಯರು ರಾಜ್ಯಸಭೆಯಲ್ಲಿ ಗುರುವಾರ ದೆಹಲಿ ಹಿಂಸಾಚಾರಕ್ಕೆ ಸಂಬಂಧಪಟ್ಟಂತೆ ಕಲಾಪದಲ್ಲಿ ಚರ್ಚೆಗೆ ಕೋರಿ ನೊಟೀಸ್ ಹೊರಡಿಸಿದ್ದಾರೆ.ತೀವ್ರ ಗದ್ದಲ, ಕೋಲಾಹಲವುಂಟಾಗಿ ಕಲಾಪವನ್ನು ನಾಳೆಗೆ ಮುಂದೂಡಲಾಗಿದೆ. 


ಕಾಂಗ್ರೆಸ್ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಮತ್ತು ಆನಂದ್ ಶರ್ಮ ಇಂದು ರಾಜ್ಯಸಭಾ ಕಲಾಪ ಸಮಾವೇಶಗೊಳ್ಳುತ್ತಿದ್ದಂತೆ ನಿಯಮ 267ರಡಿ ನೊಟೀಸ್ ಹೊರಡಿಸಿದರು. ದೆಹಲಿ ಹಿಂಸಾಚಾರದಲ್ಲಿ ಬಲಿಯಾದವರ ಕುಟುಂಬಸ್ಥರಿಗೆ ಪರಿಹಾರ ನೀಡಬೇಕು ಮತ್ತು ಘಟನೆ ಕುರಿತು ತನಿಖೆ ನಡೆಸಲು ಸ್ವತಂತ್ರ ಆಯೋಗ ರಚಿಸಬೇಕೆಂದು ಒತ್ತಾಯಿಸಿದರು.


ಸಿಪಿಐ ಸದಸ್ಯ ಬಿನೊಯ್ ವಿಸ್ವಂ ಮತ್ತು ಡಿಎಂಕೆ ಸದಸ್ಯ ಟಿ ಶಿವ ಮತ್ತು ಆಮ್ ಆದ್ಮಿ ಪಕ್ಷದ ಸದಸ್ಯ ಸಂಜಯ್ ಸಿಂಗ್, ಸಮಾಜವಾದಿ ನಾಯಕರಾದ ರಾಮ್ ಗೋಪಾಲ್ ಯಾದವ್ ಮತ್ತು ಜಾವೇದ್ ಆಲಿ ಖಾನ್ ಅವರು ಸಹ ರಾಜ್ಯಸಭೆಯಲ್ಲಿ ಇಂದು 267 ಕಲಂ ಅಡಿ ದೆಹಲಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸಬೇಕೆಂದು ನೊಟೀಸ್ ನೀಡಿದರು. 


ನಿನ್ನೆ ರಾಜ್ಯಸಭೆಯಲ್ಲಿ ಇದೇ ದೆಹಲಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ತೀವ್ರ ಗದ್ದಲ, ಕೋಲಾಹಲ ಉಂಟಾಗಿ ಕಲಾಪವನ್ನು ಮುಂದೂಡಲಾಗಿತ್ತು. ಸದನದಲ್ಲಿ ವಿಳಂಬ ಮಾಡದೆ ದೆಹಲಿ ಹಿಂಸಾಚಾರ ವಿಷಯವನ್ನು ಚರ್ಚೆ ಮಾಡಬೇಕೆಂದು ಪ್ರತಿಪಕ್ಷಗಳು ಒತ್ತಾಯಿಸುತ್ತಿವೆ. ಕಳೆದ ಮಂಗಳವಾರದಿಂದ ರಾಜ್ಯಸಭಾ ಕಲಾಪ ಇದೇ ವಿಚಾರಕ್ಕೆ ಸಂಬಂಧಪಟ್ಟಂತೆ ಮುಂದೂಡಿಕೆಯಾಗುತ್ತಲೇ ಇದೆ. ಯಾವುದೇ ಸಕಾರಾತ್ಮಕ ಚರ್ಚೆಗಳು ನಡೆಯುತ್ತಿಲ್ಲ.


ಈಶಾನ್ಯ ದೆಹಲಿಯಲ್ಲಿ ಇತ್ತೀಚೆಗೆ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಡೆದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿ 48 ಮಂದಿ ಮೃತಪಟ್ಟು 250ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com