ಕಾಂಗ್ರೆಸ್ ಸಂಸದರ ಅಮಾನತು: ಸ್ಪೀಕರ್ ಓಂ ಬಿರ್ಲಾ ನೇತೃತ್ವದ ತನಿಖಾ ಸಮಿತಿ ರಚನೆ!

ಸಂಸತ್ತಿನ ಬಜೆಟ್ ಅಧಿವೇಶನದ ಉಳಿದ ಅವಧಿಗೆ ಏಳು ಮಂದಿ ಕಾಂಗ್ರೆಸ್ ಸಂಸದರನ್ನು ಅಮಾನತ್ತುಗೊಳಿಸಿದ ದಿನದ ನಂತರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ರಚಿಸಲಿರುವ ಸಮಿತಿ...
ಓಂ ಬಿರ್ಲಾ
ಓಂ ಬಿರ್ಲಾ

ನವದೆಹಲಿ: ಸಂಸತ್ತಿನ ಬಜೆಟ್ ಅಧಿವೇಶನದ ಉಳಿದ ಅವಧಿಗೆ ಏಳು ಮಂದಿ ಕಾಂಗ್ರೆಸ್ ಸಂಸದರನ್ನು ಅಮಾನತ್ತುಗೊಳಿಸಿದ ದಿನದ ನಂತರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ರಚಿಸಲಿರುವ ಸಮಿತಿ, ಸಂಸತ್ತಿನ ಕೆಳಮನೆಯಲ್ಲಿ ಮಾರ್ಚ್ ೨ ರಿಂದ ೫ರವರೆಗೆ ನಡೆದ ಗದ್ದಲಗಳ ಕುರಿತು ತನಿಖೆ ನಡೆಸಲಿದೆ ಎಂದು ತಿಳಿಸಿದ್ದಾರೆ.

ಸಮಿತಿಯು ಎಲ್ಲ ಪಕ್ಷಗಳ ಸದಸ್ಯರನ್ನು ಒಳಗೊಳ್ಳಲಿದೆ. ಸಮಿತಿಯ ನೇತೃತ್ವವನ್ನು ಸ್ಪೀಕರ್ ಓಂ ಬಿರ್ಲಾ ಅವರೇ ವಹಿಸಲಿದ್ದು, ಮಾರ್ಚ್ ೨ರಿಂದ ೫ರವರೆಗೆ ಲೋಕಸಭೆಯಲ್ಲಿ ನಡೆದ ಎಲ್ಲ ಪ್ರಕ್ರಿಯೆಗಳನ್ನು ತನಿಖೆ ನಡೆಸಿ ತನ್ನ ವರದಿಯನ್ನು ಸಲ್ಲಿಸಲಿದೆ ಎಂದು ಹೇಳಿದ್ದಾರೆ.

ಇದಕ್ಕೂ ಮುನ್ನ ಸಂಸತ್ ಸದಸ್ಯರ ಅಮಾನತ್ತು ಕ್ರಮವನ್ನು ವಾಪಸ್ಸು ಪಡೆಯಬೇಕೆಂದು ಆಗ್ರಹಿಸಿ ಕಾಂಗ್ರೆಸ್, ಡಿಎಂಕೆ ಹಾಗೂ ತೃಣಮೂಲ ಕಾಂಗ್ರೆಸ್ ಸದಸ್ಯರು ಸಭಾಧ್ಯಕ್ಷರ ಪೀಠದ ಅಂಗಳಕ್ಕೆ ತೆರಳಿ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಸದನ ಸುಗಮವಾಗಿ ನಡೆಯುವುದು ಪ್ರತಿಪಕ್ಷಗಳಿಗೆ ಬೇಕಾಗಿಲ್ಲ ಎಂದು ದೂರಿದರು. ಸ್ಪೀಕರ್ ಪೀಠದ ಆವರಣದಿಂದ ಕಾಗದಪತ್ರಗಳನ್ನು ಕಾಂಗ್ರೆಸ್ ಸದಸ್ಯರು ಕಸಿದುಕೊಂಡಿದ್ದಾರೆ ಇದು ಆ ಸದಸ್ಯರ ಹಕ್ಕೇ? ಎಂದು ಪ್ರಶ್ನಿಸಿದರು.

ಇದಕ್ಕೂ ಮುನ್ನ ಕಾಂಗ್ರೆಸ್ ನಾಯಕ ಅಧಿರ್ ರಂಜನ್ ಚೌಧರಿ, ನಾವು ಸಭಾಧ್ಯಕ್ಷರ ಪೀಠವನ್ನು ಗೌರವಿಸುತ್ತೇವೆ ಆದರೆ, ಸ್ಪೀಕರ್ ವ್ಯಾಟಿಕನ್ ಪೋಪ್ ರಂತೆ ವರ್ತಿಸಿದ್ದಾರೆ ಎಂದು ಅಸಮಧಾನ ವ್ಯಕ್ತಪಡಿಸಿದರು. ಹಲವು ಜೀವಗಳನ್ನು ಬಲಿತೆಗೆದುಕೊಂಡ ದೆಹಲಿ ಗಲಭೆಗಳ ಕುರಿತು ತುರ್ತಾಗಿ ಚರ್ಚೆ ನಡೆಸಬೇಕು ಎಂಬುದು ಮಾತ್ರ ನಮ್ಮ ಪಕ್ಷದ ಸದಸ್ಯರ ಆಗ್ರಹವಾಗಿದೆ ಎಂದು ಸ್ಪಷ್ಟಪಡಿಸಿದರು.

ಅನುಚಿತ ನಡವಳಿಕೆ ಪ್ರದರ್ಶಿಸಿದ ಕಾಂಗ್ರೆಸ್ ಪಕ್ಷದ ಏಳು ಸಂಸತ್ ಸದಸ್ಯರನ್ನು ಲೋಕಸಭೆಯಿಂದ ಗುರುವಾರ ಬಜೆಟ್ ಅಧಿವೇಶನದ ಉಳಿದ ಅವಧಿಗೆ ಅಮಾನತ್ತುಗೊಳಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com