ಪುಲ್ವಾಮ ದಾಳಿಕೋರ ವಾಜಿ ಉಲ್ ಇಸ್ಲಾಂನ ಸುಳಿವು ಕೊಟ್ಟಿದ್ದು ಅಮೇಜಾನ್!

ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ 40ಕ್ಕೂ ಅಧಿಕ ಸಿಆರ್‌ಪಿಎಫ್ ಯೋಧರ ಬಲಿ ಪಡೆದಿದ್ದ ಪುಲ್ವಾಮ ದಾಳಿ ಪ್ರಕರಣದ ಪ್ರಮುಖ ಆರೋಪಿಯನ್ನು ಹುಡುಕು ಕೊಟ್ಟಿದ್ದು ಖ್ಯಾತ ಇ-ಕಾಮರ್ಸ್ ಸಂಸ್ಥೆ ಅಮೇಜಾನ್.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ 40ಕ್ಕೂ ಅಧಿಕ ಸಿಆರ್‌ಪಿಎಫ್ ಯೋಧರ ಬಲಿ ಪಡೆದಿದ್ದ ಪುಲ್ವಾಮ ದಾಳಿ ಪ್ರಕರಣದ ಪ್ರಮುಖ ಆರೋಪಿಯನ್ನು ಹುಡುಕು ಕೊಟ್ಟಿದ್ದು ಖ್ಯಾತ ಇ-ಕಾಮರ್ಸ್ ಸಂಸ್ಥೆ ಅಮೇಜಾನ್.

ಹೌದು.. 2019ರ ಫೆ. 14ರಂದು ನಡೆದಿದ್ದ ಪುಲ್ವಾಮ ಉಗ್ರ ದಾಳಿ ಪ್ರಕರಣ ಸಂಬಂಧ ಇತ್ತೀಚಿಗೆ ಎನ್ಐಎ ಅಧಿಕಾರಿಗಳು ಬಂಧಿಸಿದ್ದ ಉಗ್ರ ವಾಜಿ ಉಲ್ ಇಸ್ಲಾಂ ಬಂಧನಕ್ಕೆ ಖ್ಯಾತ ಇ-ಕಾಮರ್ಸ್ ಸಂಸ್ಥೆ ಅಮೇಜಾನ್ ನೆರವಾಗಿದ್ದ ಅಂಶ ಇದೀಗ ಬೆಳಕಿಗೆ ಬಂದಿದೆ. 

ಮೂಲಗಳ ಪ್ರಕಾರ ಪುಲ್ವಾಮ ಉಗ್ರ ದಾಳಿಯ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾದಳದ ಅಧಿಕಾರಿಗಳು ದಾಳಿ ರೂವಾರಿ ಉಗ್ರ ವಾಜಿ ಉಲ್ ಇಸ್ಲಾಂ ಬಂಧನಕ್ಕೆ ಬಲೆ ಬೀಸಿದ್ದರು. ವಾಜಿ ಉಲ್ ಇಸ್ಲಾಂ ತನ್ನ ಬ್ಯಾಂಕ್ ಕಾರ್ಡ್ ಬಳಕೆ ಮಾಡಿ ಅಮೇಜಾನ್ ನಲ್ಲಿ ಒಂದಷ್ಟು ವಸ್ತುಗಳನ್ನು ಆನ್ ಲೈನ್ ನಲ್ಲಿ ಖರೀದಿಸಿದ್ದ. ಈ ಮಾಹಿತಿ ತಿಳಿದ ಅಧಿಕಾರಿಗಳು ಅಮೇಜಾನ್ ಇಂಡಿಯಾ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಕೇಳಿದ್ದರು.  ರಾಷ್ಟ್ರೀಯಾ ತನಿಖಾ ಏಜೆನ್ಸಿಯ ವಿಶೇಷ ಮನವಿಯ ಮೇರೆಗೆ ಅಮೆಜಾನ್‌ ಇಂಡಿಯಾ ಈ ಪ್ರಕರಣದ ಕುರಿತು ಮಾಹಿತಿ ನೀಡಿತ್ತು. ತನಿಖಾ ಸಂಸ್ಥೆಗೆ ಆರೋಪಿ ಅಮೆಜಾನ್‌ ಮೂಲಕ ಕೆಲವೊಂದು ಸರಕುಗಳನ್ನು ಖರೀದಿಸಿರುವ ಕುರಿತು ಸುಳಿವು ಲಭಿಸಿತ್ತು. ಈ ಬಗ್ಗೆ ತನಿಖೆ ನಡೆಸಿದಾಗ ಶ್ರೀನಗರದ ವಾಜಿ ಉಲ್ ಇಸ್ಲಾಂ ಎಂಬಾತ ಅಮೆಜಾನ್‌ನಲ್ಲಿ ಸ್ಫೋಟಕ ತಯಾರಿಸಲು ಅಗತ್ಯವಾದ ಕಚ್ಚಾವಸ್ತು ಖರೀದಿಸಿದ್ದ ಅಂಶವನ್ನು ಅಧಿಕಾರಿಗಳು ಪತ್ತೆ ಮಾಡಿದ್ದರು.

ಈ ಬಗ್ಗೆ ಮಾಹಿತಿ ನೀಡಿರುವ ಹೆಸರು ಹೇಳಲಿಚ್ಛಿಸದ ಎನ್ಐಎ ಅಧಿಕಾರಿಯೊಬ್ಬರು, 'ಫೆಬ್ರವರಿ 2019ರಲ್ಲಿ ಸ್ಪೋಟಕ ಖರೀದಿಸಲು ಬಂಧಿತ ಆರೋಪಿ ವಾಜಿ ಉಲ್ ಇಸ್ಲಾಂ ಅಮೆಜಾನ್ ಮೂಲಕ ಸರಕು ಶಾಪಿಂಗ್ ಮಾಡಿದ್ದ. ಆನ್‌ಲೈನ್‌ನಲ್ಲಿ ಆತ ಸುಧಾರಿತ ಸ್ಪೋಟಕಕ್ಕೆ ಅಗತ್ಯವಾದ ಅಮೋನಿಯಂ ಪೌಡರ್, ಬ್ಯಾಟರಿ, ಬಟ್ಟೆ ಮತ್ತು ಕೆಲವೊಂದು ಅಗತ್ಯ ವಸ್ತು ತರಿಸಿಕೊಂಡಿದ್ದ. ಕಚ್ಚಾವಸ್ತುಗಳನ್ನು ಬಳಸಿ, ಗರಿಷ್ಠ ಹಾನಿ ಎಸಗಬಲ್ಲ ಸ್ಫೋಟಕ ತಯಾರಿಸಿದ್ದ. ಅಮೇಜಾನ್ ಸಂಸ್ಥೆಯಿಂದ ಈ ಬಗ್ಗೆ ತನಿಖಾ ತಂಡಕ್ಕೆ ಸುಳಿವು ಲಭಿಸಿತ್ತು. ಹೊರಗಡೆ ಸರಕು ಖರೀದಿಸಿದರೆ ಸಿಕ್ಕಿಬೀಳುವ ಇಲ್ಲವೆ ಸಮಸ್ಯೆ ಎದುರಾಗುವ ಸಾಧ್ಯತೆ ಇದ್ದಿದ್ದರಿಂದ ವಾಜಿ ಉಲ್ ಇಸ್ಲಾಂ ಆನ್‌ಲೈನ್ ಶಾಪಿಂಗ್ ನಡೆಸಿದ್ದ. ಅದಕ್ಕೆ ಬಳಸಿದ್ದ ಕಾರ್ಡ್‌ ವಿವರ ಪರಿಶೀಲಿಸಿದಾಗ ಬ್ಯಾಂಕಿನ ವಹಿವಾಟು ದಾಖಲೆಯಲ್ಲಿ ಅಮೆಜಾನ್ ಮೂಲಕ ಸರಕು ಖರೀದಿ ದೃಢಪಟ್ಟಿತ್ತು. ರಹಸ್ಯವಾಗಿ ಸರಕು ಖರೀದಿಸಿ, ಕಚ್ಚಾ ವಸ್ತು ಬಳಸಿ ಅದರಿಂದ ಸ್ಫೋಟಕ ತಯಾರಿಸಲು ಜೈಶ್ ಇ ಮೊಹಮ್ಮದ್ ಉಗ್ರಸಂಘಟನೆಗೆ ವಾಜಿ ಇಸ್ಲಾಂ ಪೂರೈಸಿದ್ದ ಎಂದು ಹೇಳಿದ್ದಾರೆ.

​ತನಿಖೆಗೆ ಅಮೆಜಾನ್ ಸಹಕಾರ
ಪುಲ್ವಾಮ ದಾಳಿಯ ಬಗ್ಗೆ ತನಿಖೆ ಕುರಿತಂತೆ ಅಮೆಜಾನ್ ಹೇಳಿಕೆ ನೀಡಿದ್ದು, ಇಲ್ಲಿನ ಕಾನೂನು ಮತ್ತು ನಿಯಮಕ್ಕೆ ಅನುಸಾರವಾಗಿ ತನಿಖೆಗೆ ಎಲ್ಲ ವಿಧದ ಸಹಕಾರ ನೀಡುವುದಾಗಿ ಹೇಳಿದೆ. ಅಮೆಜಾನ್‌ನಲ್ಲಿ ವಿವಿಧ ಸ್ವರೂಪದ ಸರಕು ಲಭ್ಯವಿದೆ. ಅದರಲ್ಲಿ ಕಚ್ಚಾ ವಸ್ತು ಖರೀದಿಸಿ ಬಳಿಕ ವಾಜಿ ಇಸ್ಲಾಂ ಉಗ್ರ ಸಂಘಟನೆಗೆ ಸರಕು ಫೂರೈಸಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಎನ್‌ಐಐ ವಾಜಿ ಉಲ್ ಇಸ್ಲಾಮ್ ಮತ್ತು ಮಹಮದ್ ಅಬ್ಬಾಸ್ ಸೇರಿದಂತೆ ಈವರೆಗೆ ಐವರನ್ನು ಬಂಧಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com