ರಾಣಾ ಕಪೂರ್ ಗೆ ಪ್ರಿಯಾಂಕಾ ಗಾಂಧಿ ಮಾರಾಟ ಮಾಡಿದ್ದ 'ಪೇಂಟಿಂಗ್' ಜಪ್ತಿ ಮಾಡಿದ ಇಡಿ

ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ, ಯೆಸ್ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್ ಅವರಿಗೆ ಈ ಹಿಂದೆ ಮಾರಾಟ ಮಾಡಿದ್ದ ವರ್ಣಚಿತ್ರವನ್ನು ಜಾರಿ ನಿರ್ದೇಶನಾಲಯ(ಇಡಿ) ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. 
ಪ್ರಿಯಾಂಕಾ ಗಾಂಧಿ
ಪ್ರಿಯಾಂಕಾ ಗಾಂಧಿ

ಮುಂಬೈ: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ, ಯೆಸ್ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್ ಅವರಿಗೆ ಈ ಹಿಂದೆ ಮಾರಾಟ ಮಾಡಿದ್ದ ವರ್ಣಚಿತ್ರವನ್ನು ಜಾರಿ ನಿರ್ದೇಶನಾಲಯ(ಇಡಿ) ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. 

ಈ ಸಂಬಂಧ ಸೋಮವಾರ ಇಡಿ ಅಧಿಕಾರಿಗಳು ಮುಂಬೈನ ರಾಣಾ ಕಪೂರ್ ನಿವಾಸದಿಂದ ವರ್ಣಚಿತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಆದರೆ, “ಪೇಂಟಿಂಗ್” ಮಾರಾಟ ಕುರಿತು ಕಾಂಗ್ರೆಸ್ ವಿರುದ್ದ ಬಿಜೆಪಿ ವಾಗ್ದಾಳಿ ನಡೆಸಿದ್ದು, ದೇಶದ ಪ್ರತಿಯೊಂದು ಆರ್ಥಿಕ ಅಪರಾಧದಲ್ಲೂ ಗಾಂಧಿ ಕುಟುಂಬಕ್ಕೆ ಸಂಬಂಧವಿದೆ ಎಂದು ಆರೋಪಿಸಿದೆ.

೧೯೮೫ ರಲ್ಲಿ ಸುಪ್ರಸಿದ್ದ ಚಿತ್ರಕಾರ ಎಂ.ಎಫ್ ಹುಸೇನ್ ರಚಿಸಿದ ವರ್ಣಚಿತ್ರ(ಪೇಂಟಿಂಗ್)ವನ್ನು ಕಾಂಗ್ರೆಸ್ ಪಕ್ಷದ ಶತಮಾನೋತ್ಸವದ ಸಂದರ್ಭದಲ್ಲಿ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಅವರಿಗೆ ಕೊಡುಗೆಯಾಗಿ ನೀಡಿದ್ದರು. ಈ ವರ್ಣಚಿತ್ರಗಳನ್ನು ರಾಣಾ ಕಪೂರ್ ೨ ಕೋಟಿ ರೂ.ಗೆ ೨೦೧೦ರಲ್ಲಿ ಪ್ರಿಯಾಂಕ ಗಾಂಧಿ ಅವರಿಂದ ಖರೀದಿಸಿದ್ದರು. ಈ ಸಂಬಂಧ ಪ್ರಿಯಾಂಕಾ ಗಾಂಧಿ, ರಾಣಾ ಕಪೂರ್‌ಗೆ ಬರೆದಿದ್ದ ಪತ್ರದಲ್ಲಿ “ನನ್ನ ತಂದೆಯ ವರ್ಣ ಚಿತ್ರ ಖರೀದಿಸಿದ್ದಾಕ್ಕಾಗಿ ಧನ್ಯವಾದಗಳು. ಪ್ರಸಿದ್ಧ ಕಲಾವಿದ ಎಂ.ಎಫ್. ಹುಸೇನ್ ಚಿತ್ರಿಸಿದ ವರ್ಣ ಚಿತ್ರವನ್ನು ೧೯೮೫ ರಲ್ಲಿ ಕಾಂಗ್ರೆಸ್ ಪಕ್ಷದ ಶತಮಾನೋತ್ಸವದ ಸಂದರ್ಭದಲ್ಲಿ ನನ್ನ ತಂದೆಗೆ ಕೊಡುಗೆಯಾಗಿ ನೀಡಿದ್ದರು ಎಂದು ಪತ್ರದಲ್ಲಿ ತಿಳಿಸಿದ್ದರು.

ಇದಲ್ಲದೆ, ವರ್ಣ ಚಿತ್ರ ಖರೀದಿ ಸಂಬಂಧ ಜೂನ್ ೩, ೨೦೧೦ ರಂದು ಎಚ್‌ಎಸ್‌ಬಿಸಿ ಬ್ಯಾಂಕ್ ಖಾತೆಯಿಂದ ೨ ಕೋಟಿ ರೂ.ಗಳ ಚೆಕ್ ಪಾವತಿಗೆ ಸಂಬಂಧಿಸಿದ ರಸೀದಿಯ ವಿವರಗಳನ್ನು ಪತ್ರದಲ್ಲಿ ತಿಳಿಸಲಾಗಿದೆ. 

ಪ್ರಿಯಾಂಕಾ ಗಾಂಧಿ ತನ್ನ ಆದಾಯ ತೆರಿಗೆ ರಿಟರ್ನ್ಸ್‌ನಲ್ಲಿ ಈ ಮೊತ್ತವನ್ನು ಘೋಷಿಸಿಕೊಂಡಿದ್ದಾರೆ ಎಂದು ಕಾಂಗ್ರೆಸ್ ಸ್ಪಷ್ಟಪಡಿಸಿದೆ. 

ಬಿಜೆಪಿಯ ಆರೋಪಗಳು ಎಲ್ಲದರಲ್ಲೂ ತಪ್ಪು ಹುಡುಕುವ, ಹೆಸರಿಗೆ ಮಸಿಬಳಿಯುವ ಕಿಡಿಗೇಡಿತನದಿಂದ ಕೂಡಿದ್ದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಯಸ್ ಬ್ಯಾಂಕ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಅಧಿಕಾರ ದುರುಪಯೋಗ, ಅವ್ಯವಹಾರ ಆರೋಪದ ಮೇಲೆ ಬ್ಯಾಂಕಿನ ಸಂಸ್ಥಾಪಕ ರಾಣಾ ಕಪೂರ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com