ಪ್ರೇಕ್ಷಕರಿಲ್ಲದ ಮೈದಾನದಲ್ಲಿ ಐಪಿಎಲ್: ಅಂತಿಮ ನಿರ್ಧಾರ ಬಿಸಿಸಿಐನದ್ದೇ ಎಂದ ಕೇಂದ್ರ!

ಕೊರೋನಾ ವೈರಸ್ ಸೋಂಕಿನ ಭೀತಿ ಹಿನ್ನಲೆಯಲ್ಲಿ ಪ್ರೇಕ್ಷಕರಿಲ್ಲದ ಮೈದಾನದಲ್ಲಿ ಐಪಿಎಲ್ ಟೂರ್ನಿ ಆಡಿಸುವಂತೆ ಕೇಂದ್ರ ವಿದೇಶಾಂಗ ಇಲಾಖೆ ಸಲಹೆ ನೀಡಿದ್ದು, ಅಂತಿಮ ನಿರ್ಧಾರ ಬಿಸಿಸಿಐನದ್ದೇ ಎಂದು ಹೇಳಿದೆ.
ಐಪಿಎಲ್ ಮತ್ತು ವಿದೇಶಾಂಗ ಸಚಿವ ಜೈ ಶಂಕರ್
ಐಪಿಎಲ್ ಮತ್ತು ವಿದೇಶಾಂಗ ಸಚಿವ ಜೈ ಶಂಕರ್

ಚೆನ್ನೈ: ಕೊರೋನಾ ವೈರಸ್ ಸೋಂಕಿನ ಭೀತಿ ಹಿನ್ನಲೆಯಲ್ಲಿ ಪ್ರೇಕ್ಷಕರಿಲ್ಲದ ಮೈದಾನದಲ್ಲಿ ಐಪಿಎಲ್ ಟೂರ್ನಿ ಆಡಿಸುವಂತೆ ಕೇಂದ್ರ ವಿದೇಶಾಂಗ ಇಲಾಖೆ ಸಲಹೆ ನೀಡಿದ್ದು, ಅಂತಿಮ ನಿರ್ಧಾರ ಬಿಸಿಸಿಐನದ್ದೇ ಎಂದು ಹೇಳಿದೆ.

ಐಪಿಎಲ್ 2020ಗೆ ದಿನಗಣನೆ ಆರಂಭವಾಗಿರುವಂತೆಯೇ ಇತ್ತ ಕ್ರಿಕೆಟ್ ಅಭಿಮಾನಿಗಳು ಪಂದ್ಯಗಳ ವೀಕ್ಷಣೆಗೆ ತುದಿಗಾಲಲ್ಲಿ ನಿಂತಿದ್ದಾರೆ. ಇಂತಹ ಹೊತ್ತಿನಲ್ಲೇ ಚೀನಾದಲ್ಲಿ ಮರಣ ಮೃದಂಗ ಭಾರಿಸುತ್ತಿರುವ ಮಾರಣಾಂತಿಕ ಕೊರೋನಾ ವೈರಸ್ ಭೀತಿ ಎದುರಾಗಿದ್ದು, ಇದೇ ಕಾರಣಕ್ಕೆ ಕೇಂದ್ರ ಸರ್ಕಾರ ಪ್ರೇಕ್ಷಕರಿಲ್ಲದ ಮೈದಾನದಲ್ಲಿ ಐಪಿಎಲ್ ಟೂರ್ನಿ ಆಡಿಸುವಂತೆ ಬಿಸಿಸಿಐಗೆ ಸಲಹೆ ನೀಡಿದೆ.

ಈ ಕುರಿತಂತೆ ಮಾತನಾಡಿರುವ ಕೇಂದ್ರ ವಿದೇಶಾಂಗ ಸಚಿವ ಎಸ್ ಜೈ ಶಂಕರ್ ಅವರು, ಪ್ರೇಕ್ಷಕರಿಲ್ಲದ ಮೈದಾನದಲ್ಲಿ ಐಪಿಎಲ್ ಟೂರ್ನಿ ಆಡಿಸುವ ಕುರಿತು ಟೂರ್ನಿಯ ಆಯೋಜಕರೇ ನಿರ್ಧರಿಸಬೇಕು. ಆದರೆ ಮಾರಣಾಂತಿಕ ಸೋಂಕು ಶರವೇಗದಲ್ಲಿ ಹಬ್ಬುತ್ತಿರುವ ಈ ಹೊತ್ತಿನಲ್ಲಿ ಭಾರಿ ಜನಸ್ಥೋಮ ಸೇರುವುದು ಅಪಾಯಕಾರಿ. ಹೀಗಾಗಿ ಮುಂದಿನ ತಿಂಗಳು ನಡೆಯುತ್ತಿರುವ ಎಲ್ಲ ರೀತಿಯ ಕ್ರೀಡಾ ಟೂರ್ನಿಗಳಲ್ಲಿ ಪ್ರೇಕ್ಷಕ ರಹಿತ ವಾತಾವರಣವಿದ್ದರೆ ಒಳಿತು. ಆದರೆ ಈ ಕುರಿತ ಅಂತಿಮ ನಿರ್ಧಾರ ಬಿಸಿಸಿಐನದ್ದೇ ಎಂದು ಹೇಳಿದ್ದಾರೆ.

ಅಂತೆಯೇ ಇದೇ ಮಾರ್ಚ್ 14 ಹೀರೋ ಇಂಡಿಯನ್ ಸೂಪರ್ ಲೀಗ್ 2019-20 ಫೈನಲ್ ಎಟಿಕೆ ಎಫ್ ಸಿ ಮತ್ತು ಚೆನ್ನಾಯಿನ್ ಎಫ್ ಸಿ ಫೈನಲ್ ಪಂದ್ಯವಿದ್ದು, ಈ ಪಂದ್ವವನ್ನು ಪ್ರೇಕ್ಷಕರಿಲ್ಲದೇ ಫಟೋರ್ಡಾ ಜವಾಹರ್ ಲಾಲ್ ನೆಹರೂ ಕ್ರೀಡಾಂಗಣದಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಈ ಬಗ್ಗೆ ಭಾರತೀಯ ಫುಟ್ಬಾಲ್ ಸಂಸ್ಥೆ ಕೂಡ ಒಪ್ಪಿಗೆ ಸೂಚಿಸಿದೆ. ಅಲ್ಲದೆ ಪಂದ್ಯಕ್ಕಾಗಿ ಈಗಾಗಲೇ ಮಾರಾಟ ಮಾಡಲಾಗಿರುವ ಟಿಕೆಟ್ ಗಳ ಹಣವನ್ನು ಕೂಡ ವಾಪಸ್ ನೀಡುವುದಾಗಿ ಹೇಳಿದೆ. ಇಷ್ಟೇ ಅಲ್ಲ ಭಾರತದಲ್ಲಿ ನಡೆಯಲಿರುವ ಬ್ಯಾಡ್ಮಿಂಟನ್ ಟೂರ್ನಿ ಕೂಡ ಪ್ರೇಕ್ಷಕರಿಲ್ಲದೇ ನಡೆಯಲಿದ್ದು, ಇಂಡಿಯನ್ ಓಪನ್ ಗಾಲ್ಫ್ ಟೂರ್ನಮೆಂಟ್ ಕೊರೋನಾ ವೈರಸ್ ಭೀತಿಯಿಂದಾಗಿ ರದ್ದಾಗಿದೆ ಎಂದು ವಿದೇಶಾಂಗ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com