ಉನ್ನಾವೋ ಪ್ರಕರಣ: ಉಚ್ಛಾಟಿತ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗರ್ ಗೆ 10 ವರ್ಷ ಜೈಲು ಶಿಕ್ಷೆ

ಉನ್ನಾವೋ ಅತ್ಯಾಚಾರ ಸಂತ್ರಸ್ಥೆಯ ತಂದೆಯನ್ನು ಹತ್ಯೆಗೈದ ಆರೋಪದ ಮೇರೆಗೆ ಉಚ್ಚಾಟಿತ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗರ್ ಗೆ ದೆಹಲಿಯ ನ್ಯಾಯಾಲಯವೊಂದು 10 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿ ಇಂದು ತೀರ್ಪು ಪ್ರಕಟಿಸಿದೆ. 
ಆರೋಪಿ ಕುಲದೀಪ್ ಸಿಂಗ್ ಸೆಂಗರ್
ಆರೋಪಿ ಕುಲದೀಪ್ ಸಿಂಗ್ ಸೆಂಗರ್

ನವದೆಹಲಿ: ಉನ್ನಾವೋ ಅತ್ಯಾಚಾರ ಸಂತ್ರಸ್ಥೆಯ ತಂದೆಯನ್ನು ಹತ್ಯೆಗೈದಿದ್ದ ಆರೋಪದ ಮೇರೆಗೆ ಉಚ್ಚಾಟಿತ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗರ್ ಗೆ ದೆಹಲಿಯ ನ್ಯಾಯಾಲಯವೊಂದು 10 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿ ಇಂದು ತೀರ್ಪು ಪ್ರಕಟಿಸಿದೆ. 

ಕುಲದೀಪ್ ಸಿಂಗ್ ಸೆಂಗರ್ ಹಾಗೂ ಆತನ ಸಹೋದರ ಅತುಲ್ ಸಿಂಗ್ ಸೆಂಗರ್ ಸಂತ್ರಸ್ಥೆಯ ಕುಟುಂಬಕ್ಕೆ ತಲಾ 10 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಜಿಲ್ಲಾ ನ್ಯಾಯಾಧೀಶ ಧರ್ಮೇಶ್ ಶರ್ಮಾ ನಿರ್ದೇಶಿಸಿದ್ದಾರೆ.  ನ್ಯಾಯಾಂಗ ಬಂಧನದಲ್ಲಿದ್ದ ಸಂತ್ರಸ್ಥೆಯ ತಂದೆ ಏಪ್ರಿಲ್ 9, 2018ರಲ್ಲಿ ಸಾವನ್ನಪ್ಪಿದ್ದರು.

ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ತಂದೆಯ ಕೊಲೆ ಪ್ರಕರಣಕ್ಕೆ  ಸಂಬಂಧಿಸಿದಂತೆ ಕುಲದೀಪ್ ಸಿಂಗ್ ಸೆಂಗಾರ್ ಅವರನ್ನು ಮಾರ್ಚ್ 4 ರಂದು ನ್ಯಾಯಾಲಯ ಶಿಕ್ಷೆಗೊಳಪಡಿಸಿತ್ತು. ಈ ಪ್ರಕರಣದಲ್ಲಿ ಇತರ ಏಳು ಮಂದಿಯೊಂದಿಗೆ ಸೆಂಗರ್ ನನ್ನು ಆರೋಪಿ ಎಂದು ನ್ಯಾಯಾಲಯ ಪರಿಗಣಿಸಿತ್ತು. ಆದರೆ, ತಮ್ಮ ಮೇಲಿನ ಮೇಲಿನ ಆರೋಪವನ್ನು ಸೆಂಗರ್ ನಿರಾಕರಿಸುತ್ತಾ ಬಂದಿದ್ದ.

2017ರಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರಕ್ಕೆ ಸಂಬಂಧಿಸಿದ ಪ್ರತ್ಯೇಕ ಪ್ರಕರಣದಲ್ಲಿ ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಕುಲದೀಪ್ ಸಿಂಗ್ ಸೆಂಗರ್ ಜೈಲುಶಿಕ್ಷೆ ವಿಧಿಸಲಾಗಿತ್ತು. 

ಕುಲದೀಪ್ ಸಿಂಗ್ ಸೆಂಗರ್ ಜೊತೆಗೆ ಮಾಕಿ ಪೊಲೀಸ್ ಠಾಣೆ ಉಸ್ತುವಾರಿ ಅಶೋಕ್ ಸಿಂಗ್ ಬಾದೌರಿಯಾ, ಸಬ್ ಇನ್ಸ್ ಪೆಕ್ಟರ್ ಕೆ. ಪಿ. ಸಿಂಗ್. ವಿನೀತ್ ಮಿಶ್ರಾ, ಬಿರೇಂದ್ರ ಸಿಂಗ್, ಶಶಿ ಪ್ರತಾಪ್ ಸಿಂಗ್, ಸುಮನ್ ಸಿಂಗ್ ಹಾಗೂ ಅತುಲ್ ಸಿಂಗ್ ಸೆಂಗರ್ ವಿರುದ್ಧ ಐಪಿಸಿ ಸೆಕ್ಷನ್ 120-ಬಿ ಅಡಿಯಲ್ಲಿ ತಪಿತಸ್ಥರು ಎಂದು ಪರಿಗಣಿಸಲಾಗಿದೆ.

ಆದಾಗ್ಯೂ, ಇತರ ಆರೋಪಿಗಳಾದ ಕಾನ್ಸ್ ಟೇಬಲ್ ಅಮಿರ್ ಖಾನ್, ಶೈಲೇಂದ್ರ ಸಿಂಗ್, ರಾಮ್ ಶರಣ್ ಸಿಂಗ್ ಮತ್ತು ಶಾರದ್ ವೀರ್ ಸಿಂಗ್ ಅವರನ್ನು ನ್ಯಾಯಾಲಯ ದೋಷಮುಕ್ತಗೊಳಿಸಿದೆ.  ಈ ಪ್ರಕರಣದಲ್ಲಿ 55 ಸಾಕ್ಷಿಗಳನ್ನು ಸಿಬಿಐ ಪರೀಕ್ಷಿಸಿದೆ.  ಅತ್ಯಾಚಾರ ಸಂತ್ರಸ್ಥೆಯ ಚಿಕ್ಕಪ್ಪ, ತಾಯಿ, ತಂಗಿ ಹಾಗೂ ಆಕೆಯ ತಂದೆಯ ಸಹೋದ್ಯೋಗಿಯೊಬ್ಬರ ಹೇಳಿಕೆಗಳನ್ನು ನ್ಯಾಯಾಲಯ ದಾಖಲಿಸಿಕೊಂಡಿದೆ.

ಸಿಬಿಐ ಪ್ರಕಾರ, ಏಪ್ರಿಲ್ 3, 2018ರಲ್ಲಿ ಅತ್ಯಾಚಾರ ಸಂತ್ರಸ್ಥೆ ತಂದೆ ಹಾಗೂ ಶಶಿ ಪ್ರತಾಪ್ ಸಿಂಗ್ ಎಂಬವರ ನಡುವೆ ಮಾತಿನ ಚಕಮಕಿ ನಡೆದಿತ್ತು ಎನ್ನಲಾಗಿದೆ. ಅತ್ಯಾಚಾರ ಸಂತ್ರಸ್ಥೆ ತಂದೆ ಹಾಗೂ ಅವರೊಂದಿಗೆ ಕೆಲಸ ಮಾಡುತ್ತಿದ್ದವರು ಸ್ವಗ್ರಾಮ ಮಾಕಿಗೆ ಹಿಂದಿರುಗುವಾಗ ಸಿಂಗ್ ಅವರನ್ನು ಡ್ರಾಪ್ ಕೇಳಿದ್ದಾರೆ. ಆದರೆ, ಡ್ರಾಪ್ ಕೊಡಲು ಸಿಂಗ್ ನಿರಾಕರಿಸಿದ್ದು, ಕುಲದೀಪ್ ಸಿಂಗ್ ಸೆಂಗರ್ ಸಹೋದರ ಅತುಲ್ ಸಿಂಗ್ ಸೆಂಗರ್  ಮತ್ತಿತರರ ಜೊತೆಗೂಡಿ ಅತ್ಯಾಚಾರ ಸಂತ್ರಸ್ಥೆಯ ತಂದೆಯ ಮೇಲೆ ಹಲ್ಲೆ ನಡೆಸಲಾಗಿತ್ತು ಎಂದು ಸಿಬಿಐ ಹೇಳಿದೆ.

ನಂತರ ಅತ್ಯಾಚಾರ ಸಂತ್ರಸ್ಥೆಯ ತಂದೆಯನ್ನು ಪೊಲೀಸ್ ಠಾಣೆಗೆ ಕರೆದೊಯ್ದು ಎಫ್ ಐಆರ್ ದಾಖಲಿಸಿ ಬಂಧಿಸಲಾಗಿತ್ತು.ಈ ಎಲ್ಲಾ  ಘಟನೆಗಳು ನಡೆಯುತ್ತಿರುವಂತೆ  ಕುಲದೀಪ್ ಸಿಂಗ್ ಸೆಂಗರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯೊಂದಿಗೆ ಸಂಪರ್ಕದಲ್ಲಿದ್ದರು ಎಂದು ಚಾರ್ಜ್ ಶೀಟ್ ನಲ್ಲಿ ಹೇಳಲಾಗಿದೆ. 

ಸುಪ್ರೀಂಕೋರ್ಟ್  ಆದೇಶದ ಪ್ರಕಾರ ಕಳೆದ ವರ್ಷ ಆಗಸ್ಟ್ 1ರಂದು ಈ ಪ್ರಕರಣವನ್ನು ಉತ್ತರ ಪ್ರದೇಶದ ಅಧೀನ ನ್ಯಾಯಾಲಯದಿಂದ ದೆಹಲಿಗೆ ವರ್ಗಾವಣೆ ಮಾಡಲಾಗಿತ್ತು. ಜುಲೈ 2019ರಲ್ಲಿ ಅತ್ಯಾಚಾರ ಸಂತ್ರಸ್ಥೆ ಪ್ರಯಾಣಿಸುತ್ತಿದ್ದ ಕಾರು ಟ್ರಕ್ ಗೆ ಡಿಕ್ಕಿಯಾಗಿ ಅವರ ಪರ ವಕೀಲರು ಹಾಗೂ ಕೆಲ ಕುಟುಂಬ ಸದಸ್ಯರು ಸಾವನ್ನಪ್ಪಿದ್ದರು.

ನಂತರ ಆಕೆಯನ್ನು ಲಖನೌನಿಂದ ಏರ್ ಲಿಪ್ಟ್ ಮಾಡಿ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಕೆಗೆ ದೆಹಲಿಯಲ್ಲಿ ವಸತಿ ನೀಡುವುದರ ಜೊತೆಗೆ ಸಿಆರ್ ಪಿಎಫ್ ಭದ್ರತೆ ಒದಗಿಸಲಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com