ಬಾಬ್ರಿ ಮಸೀದಿ ದ್ವಂಸ ಪ್ರಕರಣ: ಮಾ. ೨೪ರಿಂದ ಸಿಬಿಐ ಕೋರ್ಟ್ ನಿಂದ ಆರೋಪಿಗಳ ವಿಚಾರಣೆ

ಉತ್ತರ ಪ್ರದೇಶದ ಫೈಜಾಬಾದ್ ಜಿಲ್ಲೆಯಲ್ಲಿ ೧೯೯೨ರಲ್ಲಿ ಬಾಬ್ರಿ ಮಸೀದಿ ದ್ವಂಸಗೊಳಿಸಿದ ಪ್ರಕರಣದ ವಿಚಾರಣೆ ನಡೆಸುತ್ತಿರುವ ವಿಶೇಷ ಸಿಬಿಐ ನ್ಯಾಯಾಲಯ ಇದೇ ಮಾರ್ಚ್ ೨೪ ರಂದು ಆರೋಪಿಗಳ ವಿಚಾರಣೆ ನಡೆಸಲಿದೆ.

Published: 14th March 2020 03:10 PM  |   Last Updated: 14th March 2020 03:10 PM   |  A+A-


Babri mosque

ಬಾಬ್ರಿ ಮಸೀದಿ

Posted By : Lingaraj Badiger
Source : UNI

ಲಖನೌ: ಉತ್ತರ ಪ್ರದೇಶದ ಫೈಜಾಬಾದ್ ಜಿಲ್ಲೆಯಲ್ಲಿ ೧೯೯೨ರಲ್ಲಿ ಬಾಬ್ರಿ ಮಸೀದಿ ದ್ವಂಸಗೊಳಿಸಿದ ಪ್ರಕರಣದ ವಿಚಾರಣೆ ನಡೆಸುತ್ತಿರುವ ವಿಶೇಷ ಸಿಬಿಐ ನ್ಯಾಯಾಲಯ ಇದೇ ಮಾರ್ಚ್ ೨೪ ರಂದು ಆರೋಪಿಗಳ ವಿಚಾರಣೆ ನಡೆಸಲಿದೆ.

ಒಂಬತ್ತು ತಿಂಗಳೊಳಗೆ ಪ್ರಕರಣದ ವಿಚಾರಣೆಯನ್ನು ತ್ವರಿತವಾಗಿ ಪೂರ್ಣಗೊಳಿಸಿ ತೀರ್ಪು ಪ್ರಕಟಿಸಬೇಕೆಂದು ಸುಪ್ರೀಂಕೋರ್ಟ್ ೨೦೧೯ರ ಜುಲೈನಲ್ಲಿ ಕಟ್ಟುನಿಟ್ಟಿನ ಸೂಚನೆ ನೀಡಿರುವ ಹಿನ್ನಲೆಯಲ್ಲಿ, ಪ್ರಕರಣದ ೩೫೧ ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳಲು ವಿಶೇಷ ಸಿಬಿಐ ನ್ಯಾಯಾಲಯ ಆರಂಭಿಸಿದೆ. ಸಿಬಿಐ ಅಂದಿನ ಜಂಟಿ ನಿರ್ದೇಶಕ ಹಾಗೂ ಪ್ರಕರಣದ ಮುಖ್ಯ ತನಿಖಾಧಿಕಾರಿ ಎಂ. ನಾರಾಯಣನ್ ಇತ್ತೀಚಿಗೆ ತಮ್ಮ ಹೇಳಿಕೆ ದಾಖಲಿಸಿದ್ದಾರೆ.

ನಾರಾಯಣನ್ ಈ ಮೊದಲೇ ಹೇಳಿಕೆ ದಾಖಲಿಸಿದ್ದರೂ, ಪ್ರತಿವಾದಿಗಳ ವಕೀಲರಿಂದ ಪಾಟೀ ಸವಾಲು ಶುಕ್ರವಾರ ಕೊನೆಗೊಂಡಿತು. ಮುಖ್ಯ ತನಿಖಾಧಿಕಾರಿಯಾಗಿ ಪ್ರಕರಣದ ತನಿಖೆ ನಡೆಸಿದ್ದ ನಾರಾಯಣನ್, ಪ್ರಕರಣದಲ್ಲಿ ಸಿಬಿಐ ಪರವಾಗಿ ಕೊನೆಯ ಸಾಕ್ಷಿಯಾಗಿದ್ದಾರೆ. ೧೯೯೨ರ ಡಿಸೆಂಬರ್ ೬ರಂದು ರಾಮಜನ್ಮಭೂಮಿ ಚೌಕಿಯ ಉಸ್ತುವಾರಿ ಹಾಗೂ ರಾಮಜನ್ಮಭೂಮಿ ಪೊಲೀಸ್ ಠಾಣೆಯ ಅಂದಿನ ಎಸ್ ಹೆಚ್ ಓ ಪ್ರಕರಣ ದಾಖಲಿಸಿದ್ದರು.

ವಿಶೇಷ ಸಿಬಿಐ ನ್ಯಾಯಾಧೀಶ(ಆಯೋಧ್ಯ ವಿಷಯ) ಎಸ್ ಕೆ ಯಾದವ್ , ಮಾರ್ಚ್ ೨೩ ರಿಂದ ಸಿಆರ್ ಪಿ ಸಿ ೩೧೩ ಸೆಕ್ಷನ್ ಅಡಿ ೩೨ ಆರೋಪಿಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಿದ್ದಾರೆ. ಮೊದಲ ದಿನ ಮೂವರು ಆರೋಪಿಗಳಾದ ವಿ ಹೆಚ್ ಪಿ ನಾಯಕ ಚಂಪತ್ ರಾಯ್ ಬನ್ಸಾಲ್, ಫೈಜಾಬಾದ್ ಬಿಜೆಪಿ ಸಂಸದ ಲಲ್ಲು ಸಿಂಗ್ ಹಾಗೂ ಪ್ರಕಾಶ್ ಶರ್ಮಾ ಅವರ ಹೇಳಿಕೆ ದಾಖಲಿಸಿಕೊಳ್ಳಲು ನ್ಯಾಯಾಲಯದ ಮುಂದೆ ಹಾಜರಾಗುವಂತೆ ಸಮನ್ಸ್ ನೀಡಿದೆ.

ಮಾಜಿ ಉಪ ಪ್ರಧಾನಿ ಎಲ್.ಕೆ. ಅಡ್ವಾಣಿ, ಹಿರಿಯ ಬಿಜೆಪಿ ನಾಯಕರಾದ ಎಂಎಂ ಜೋಷಿ, ಉಮಾ ಭಾರತಿ, ಕಲ್ಯಾಣ್ ಸಿಂಗ್ ಹಾಗೂ ಸಾಧ್ವಿ ರಿತಂಭರ ಪ್ರಕರಣದ ಆರೋಪಿಗಳಲ್ಲಿ ಸೇರಿದ್ದಾರೆ.

ಬಾಬ್ರಿ ಮಸೀದಿ ದ್ವಂಸ ಪ್ರಕರಣ ಸಂಬಂಧ ಮೊದಲು ಉತ್ತರಪ್ರದೇಶ ರಾಜ್ಯ ಸರ್ಕಾರದ ಸಿಬಿ- ಸಿಐಡಿ ತನಿಖೆ ನಡೆಸಿ, ನಂತರ ಸಿಬಿಐಗೆ ಹಸ್ತಾಂತರಿಸಲಾಗಿದ್ದು, ಪ್ರಕರಣ ಸಂಬಂಧ ಒಟ್ಟು ೪೮ ಎಫ್ ಐ ಆರ್ ಗಳನ್ನು ದಾಖಲಿಸಲಾಗಿದೆ. ಸಿಬಿಐ ೨೦೧೭ರ ಮೇ ೩೧ರಂದು ಒಟ್ಟು ೪೯ ಆರೋಪಿಗಳ ವಿರುದ್ದ ದೋಷಾರೋಪ ಪಟ್ಟಿ ದಾಖಲಿಸಿದ್ದು, ಈಪೈಕಿ ವಿಚಾರಣೆ ಬಾಕಿ ಇರುವಾಗಲೇ ೧೭ ಮಂದಿ ಮೃತಪಟ್ಟಿದ್ದಾರೆ.

೯ ತಿಂಗಳೊಳಗೆ ತೀರ್ಪು ಪ್ರಕಟಿಸಬೇಕೆಂದು ವಿಶೇಷ ನ್ಯಾಯಾಧೀಶರಿಗೆ ಸುಪ್ರೀಂ ಕೋರ್ಟ್ ಕಳೆದ ವಾರ ಆದೇಶ ನೀಡಿರುವ ಹಿನ್ನಲೆಯಲ್ಲಿ ನ್ಯಾಯಾಲಯ ೨೦೨೦ರ ಮಧ್ಯದಲ್ಲಿ ತೀರ್ಪು ಪ್ರಕಟಿಸುವ ನಿರೀಕ್ಷೆಯಿದೆ.

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp