ಕೊರೋನಾ ಸೋಂಕು ಪೀಡಿತರ ಸಂಪೂರ್ಣ ವೆಚ್ಚ ಸರ್ಕಾರದ್ದೇ, ಮೃತರ ಕುಟುಂಬಕ್ಕೆ 4 ಲಕ್ಷ ರೂ ಪರಿಹಾರ: ಬಿಹಾರ ಸಿಎಂ ನಿತೀಶ್ ಕುಮಾರ್

ಕೊರೋನಾ ವೈರಸ್‌ ಸೋಂಕಿತರ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಲಿದ್ದು, ಸೋಂಕಿನಿಂದ ಸಾವು ಸಂಭವಿಸಿದರೆ 4 ಲಕ್ಷ ರೂ ಪರಿಹಾರ ನೀಡಲಾಗುವುದು ಎಂದು ಬಿಹಾರ ಸಿಎಂ ನಿತೀಶ್ ಕುಮಾರ್ ಘೋಷಿಸಿದ್ದಾರೆ. 
ಬಿಹಾರ್ ಸಿಎಂ ನಿತೀಶ್ ಕುಮಾರ್
ಬಿಹಾರ್ ಸಿಎಂ ನಿತೀಶ್ ಕುಮಾರ್

ಪಾಟ್ನಾ: ಕೊರೋನಾ ವೈರಸ್‌ ಸೋಂಕಿತರ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಲಿದ್ದು, ಸೋಂಕಿನಿಂದ ಸಾವು ಸಂಭವಿಸಿದರೆ 4 ಲಕ್ಷ ರೂ ಪರಿಹಾರ ನೀಡಲಾಗುವುದು ಎಂದು ಬಿಹಾರ ಸಿಎಂ ನಿತೀಶ್ ಕುಮಾರ್ ಘೋಷಿಸಿದ್ದಾರೆ. 

ವಿಶ್ವಾದ್ಯಂತ ವ್ಯಾಪಕವಾಗಿ ಹರಡಿರುವ ಕೊರೋನಾ ವೈರಸ್ ಕುರಿತಂತೆ ಇಂದು ನಡೆದ ಬಿಹಾರ ವಿಧಾನಸಭೆ ಅಧಿವೇಶನದಲ್ಲಿ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ಸರ್ಕಾರ ಕೈಗೊಂಡ ಕ್ರಮಗಳ ಕುರಿತು ವಿವರ ನೀಡಿದರು. ಈ ವೇಳೆ ಮಾತನಾಡಿದ ಅವರು, 'ಕೊರೊನಾ ವೈರಸ್‌ ಸೋಂಕಿಗೆ ಗುರಿಯಾಗುವವರ ಚಿಕಿತ್ಸಾ ವೆಚ್ಚವನ್ನು ಸರ್ಕಾರ ‘ಮುಖ್ಯಮಂತ್ರಿ ಚಿಕಿತ್ಸಾ ಸಹಾಯತಾ ಕೋಶ್‌ ಯೋಜನೆ’ಯ ಮೂಲಕ ಭರಿಸಲಿದೆ. ಒಂದು ವೇಳೆ ಈ ಕಾಯಿಲೆಯಿಂದ ಯಾವುದೇ ವ್ಯಕ್ತಿ ಮೃತಪಟ್ಟಿರೆ ಅವರ ಕುಟುಂಬಸ್ಥರಿಗೆ ‘ಮುಖ್ಯಮಂತ್ರಿ ಪರಿಹಾರ ನಿಧಿ’ಯಿಂದ 4 ಲಕ್ಷ ರೂ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು. 

ಅಂತೆಯೇ ಬಿಹಾರದಲ್ಲಿ ಕರ್ನಾಟಕ ಮಾದರಿಯಲ್ಲೇ ಮಾರ್ಚ್ 31ರವರೆಗೂ ಮಾಲ್, ಚಿತ್ರಮಂದಿರ, ಸಾರ್ವಜನಿಕ ಪಾರ್ಕ್ ಗಳ ಮುಚ್ಚುವಂತೆ ಆದೇಶಿಸುರುವುದಾಗಿ ಹೇಳಿದರು. ಅಲ್ಲದೆ ಸರ್ಕಾರದ ಎಲ್ಲ ವಿಭಾಗಗಳ ಗ್ರೂಪ್ ಸಿ ಮತ್ತು ಗ್ರೂಪ್ ಡಿ ವಿಭಾಗದ ನೌಕರರು ಪ್ರತ್ಯೇಕ ದಿನಗಳಲ್ಲಿ ಕೆಲಸ ಮಾಡುವಂತೆ ಸೂಚನೆ ನೀಡಲಾಗಿದ್ದು. ಇದರಿಂದ ಸರ್ಕಾರಿ ಕಚೇರಿಗಳಲ್ಲಿ ಹೆಚ್ಚಿನ ಜನ ಸಂದಣಿ ತಪ್ಪಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು. 

ಆ ಮೂಲಕ ಕೊರೋನಾ ಸೋಂಕಿನಿಂದ ಮೃತಪಟ್ಟವರ ಕುಟುಂಬಸ್ಥರಿಗೆ ಪರಿಹಾರ ಘೋಷಿಸಿದ ಮೊದಲ ರಾಜ್ಯ ಬಿಹಾರವಾಗಿದೆ. ದೇಶದಲ್ಲಿ ಇದುವರೆಗೆ ಕೊರೊನಾ ವೈರಸ್‌ನಿಂದ ಇಬ್ಬರು ಸಾವಿಗೀಡಾಗಿದ್ದಾರೆ. ಅದರಲ್ಲಿ ಒಬ್ಬರು ಕರ್ನಾಟಕದವರು. ಮತ್ತೊಂದು ಸಾವು ದೆಹಲಿಯಲ್ಲಿ ಸಂಭವಿಸಿತ್ತು.  ಇನ್ನು ಇಲ್ಲಿಯವರೆಗೂ ಬಿಹಾರದಲ್ಲಿ ಯಾವುದೇ ರೀತಿಯ ಸೋಂಕು ಕಾಣಿಸಿಕೊಂಡಿಲ್ಲ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com