ನಾಳೆಯೇ ಬಹುಮತ ಸಾಬೀತುಪಡಿಸಿ: ಕಮಲ್ ನಾಥ್ ಗೆ ರಾಜ್ಯಪಾಲರ ಶಾಕಿಂಗ್ ಡೆಡ್ ಲೈನ್!

ಮಧ್ಯ ಪ್ರದೇಶ ರಾಜಕೀಯ ಬಿಕ್ಕಟ್ಟು ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ನಾಳೆಯೇ ಬಹುಮತ ಸಾಬೀತುಪಡಿಸುವಂತೆ ರಾಜ್ಯಪಾಲ ಲಾಲ್ ಜಿ ಟಂಡನ್ ಅವರು ಮುಖ್ಯಮಂತ್ರಿ ಕಮಲ್ ನಾಥ್ ಅವರಿಗೆ ಶಾಕಿಂಗ್ ಡೆಡ್ ಲೈನ್ ನೀಡಿದ್ದಾರೆ.
ಕಮಲ್‌ನಾಥ್‌
ಕಮಲ್‌ನಾಥ್‌

ಭೋಪಾಲ್: ಮಧ್ಯ ಪ್ರದೇಶ ರಾಜಕೀಯ ಬಿಕ್ಕಟ್ಟು ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ನಾಳೆಯೇ ಬಹುಮತ ಸಾಬೀತುಪಡಿಸುವಂತೆ ರಾಜ್ಯಪಾಲ ಲಾಲ್ ಜಿ ಟಂಡನ್ ಅವರು ಮುಖ್ಯಮಂತ್ರಿ ಕಮಲ್ ನಾಥ್ ಅವರಿಗೆ ಶಾಕಿಂಗ್ ಡೆಡ್ ಲೈನ್ ನೀಡಿದ್ದಾರೆ.

ಕಮಲ್ ನಾಥ್  ನೇತೃತ್ವದ ಕಾಂಗ್ರೆಸ್ ಸರ್ಕಾರದ ಅಳಿವು ಉಳಿವಿನ ಪ್ರಶ್ನೆಯಾಗಿರುವ ವಿಶ್ವಾಸಮತ ಯಾಚನೆ ಇಂದು ನಡೆಯಬೇಕಿತ್ತು. ಆದರೆ ಕೊರೋನಾ ವೈರಸ್ ನೆಪವೊಡ್ಡಿ ಮಧ್ಯ ಪ್ರದೇಶ ವಿಧಾನಸಭೆ ಕಲಾಪವನ್ನು ಮಾರ್ಚ್ 26ಕ್ಕೆ ಸ್ಪೀಕರ್ ಮುಂದೂಡಿದರು. ಸ್ಪೀಕರ್ ಅವರ ಈ ನಿರ್ಧಾರವನ್ನು ಖಂಡಿಸಿರುವ ಬಿಜೆಪಿ 48 ಗಂಟೆಯೊಳಗೆ ವಿಶ್ವಾಸ ಮತ ಯಾಚನೆ ಮಾಡುವಂತೆ ಸಿಎಂ ಕಮಲ್ ನಾಥ್ ಅವರಿಗೆ ಸೂಚಿಸಬೇಕು ಎಂದು ಆಗ್ರಹಿಸಿ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದೆ. ಅಲ್ಲದೆ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಜೌಹಾಣ್ ನೇತೃತ್ವದ ಬಿಜೆಪಿ ನಿಯೋಗ ರಾಜ್ಯಪಾಲರನ್ನು ಭೇಟಿ ಮಾಡಿ, ನಾಳೆ ಮಂಗಳವಾರ ಬಹುಮತ ಸಾಬೀತುಪಡಿಸುವಂತೆ ಕಾಂಗ್ರೆಸ್ ಸರ್ಕಾರಕ್ಕೆ ಸೂಚಿಸಬೇಕು ಎಂದು ಮನವಿ ಮಾಡಿದ್ದರು.

ಬಿಜೆಪಿ ಮನವಿಗೆ ಸ್ಪಂದಿಸಿದ ರಾಜ್ಯಪಾಲ ಲಾಲ್ ಜಿ ಟಂಡನ್ ಅವರು ಸಿಎಂ ಕಮಲ್ ನಾಥ್ ಅವರಿಗೆ ಪತ್ರ ಬರೆದಿದ್ದು, ಮಂಗಳವಾರ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸುವಂತೆ ಸೂಚಿಸಿದ್ದಾರೆ. ಒಂದು ವೇಳೆ ನಾಳೆ ವಿಶ್ವಾಸಮತ ಯಾಚಿಸದಿದ್ದರೆ ನಿಮ್ಮ ಸರ್ಕಾರಕ್ಕೆ ವಿಧಾನಸಭೆಯಲ್ಲಿ ಬಹುಮತವಿಲ್ಲ ಎಂದು ಪರಿಗಣಿಸಬೇಕಾಗುತ್ತೆ ಎಂದು ಎಚ್ಚರಿಸಿದ್ದಾರೆ.

ಕಾಂಗ್ರೆಸ್‌ನಿಂದ ಬಂಡೆದ್ದು ಬಿಜೆಪಿ ಸೇರಿರುವ ಜ್ಯೋತಿರಾದಿತ್ಯ ಸಿಂಧಿಯಾ 2 ಶಾಸಕರನ್ನು ತಮ್ಮೆಡೆಗೆ ಸೆಳೆದುಕೊಂಡಿರುವುದರಿಂದ ಹಾಗೂ ಶಾಸಕರು ರಾಜೀನಾಮೆ ನೀಡಿರುವುದರಿಂದ ಕಮಲ್‌ನಾಥ್ ಸರ್ಕಾರ ಅಲ್ಪಮತಕ್ಕೆ ಕುಸಿದಿದೆ. ಹೀಗಾಗಿ, ಮಂಗಳವಾರ ವಿಶ್ವಾಸಮತ ಯಾಚನೆ ವೇಳೆ ಕಾಂಗ್ರೆಸ್‌ ಸರ್ಕಾರ ಪತನವಾಗೋದು ಬಹುತೇಕ ನಿಶ್ಚಿತವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com