ರಾಜ್ಯಸಭಾ ಸದಸ್ಯರಾಗಿ ಮಾಜಿ ಸಿಜೆಐ ರಂಜನ್ ಗೊಗೊಯಿ ಪ್ರಮಾಣ ವಚನ, ಕಲಾಪದಿಂದ ಹೊರ ನಡೆದ ಕಾಂಗ್ರೆಸ್
ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಗುರುವಾರ (ಮಾರ್ಚ್ ೧೯) ನೂತನ ರಾಜ್ಯಸಭಾ ಸಂಸದರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಗೊಗೊಯ್ ಅವರನ್ನು ರಾಜ್ಯಸಭೆಗೆ ನಾಮಕರಣ ಮಾಡಿದ್ದರು.
Published: 19th March 2020 11:29 AM | Last Updated: 19th March 2020 03:38 PM | A+A A-

ಮಾಜಿ ಸಿಜೆಐ ರಂಜನ್ ಗೊಗೊಯ್
ನವದೆಹಲಿ: ಸುಪ್ರೀಂ ಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಅವರು ಗುರುವಾರ ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಸದನದ ವಿಚಾರಣೆ ಪ್ರಾರಂಭವಾದ ಕೂಡಲೇ ಉಪರಾಷ್ಟ್ರಪತಿ ಹಾಗೂ ರಾಜ್ಯಸಭಾಧ್ಯಕ್ಷ ಎಂ.ವೆಂಕಯ್ಯ ನಾಯ್ಡು ಅವರು ನಾಮನಿರ್ದೇಶಿತ ಸದಸ್ಯ ಗೊಗೊಯಿ ಅವರನ್ನು ಪ್ರಮಾಣವಚನ ಸ್ವೀಕರಿಸಲು ಆಹ್ವಾನಿಸಿದರು. ಗೊಗೊಯಿ ಇಂಗ್ಲಿಷ್‍ನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ನಾಲ್ಕು ತಿಂಗಳ ಹಿಂದೆ ನಿವೃತ್ತರಾದ ಶ್ರೀ ಗೊಗೊಯಿ ಅವರನ್ನು, ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ರಾಜ್ಯಸಭಾ ಸದಸ್ಯರಾಗಿ ನಾಮನಿರ್ದೇಶನ ಮಾಡಿರುವುದು ಉಲ್ಲೇಖನೀಯ.
ಗೊಗೊಯಿ ಅವರ ನಾಮಪತ್ರವನ್ನು ಕಾಂಗ್ರೆಸ್ ವಿರೋಧಿಸಿದೆ. ಗೊಗೊಯಿ ಪ್ರಮಾಣವಚನ ಸ್ವೀಕರಿಸುವಾಗ ಕಾಂಗ್ರೆಸ್ ಸದಸ್ಯರು ಸಾಕಷ್ಟು ಶಬ್ದ ಮಾಡಿದರು ಮತ್ತು ಪ್ರತಿಭಟನೆಯಲ್ಲಿ ಸದನದಿಂದ ಹೊರ ನಡೆದರು.
ನ್ಯಾಯಶಾಸ್ತ್ರಜ್ಞ ಕೆಟಿಎಸ್ ತುಳಸಿ ಅವರ ನಿವೃತ್ತಿಯ ನಂತರ ತೆರವಾಗಿದ್ದ ಹುದ್ದೆಗೆ ಗೊಗೊಯ್ ನೇಮಕವಾಗಿದ್ದಾರೆ.
65 ವರ್ಷದ ರಂಜನ್ ಗೊಗೊಯ್ ಅವರು 13 ತಿಂಗಳ ಅಧಿಕಾರಾವಧಿಯ ನಂತರ ಕಳೆದ ವರ್ಷದ ನವೆಂಬರ್‌ನಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ನಿವೃತ್ತರಾದರು. ಸುಪ್ರೀಂ ಕೋರ್ಟ್‌ನಲ್ಲಿದ್ದ ಸಮಯದಲ್ಲಿ, ಸಲಿಂಗಕಾಮ, ಶಬರಿಮಳ ದೇವಸ್ಥಾನದಲ್ಲಿ ಮಹಿಳೆಯರ ಪ್ರವೇಶ ಮತ್ತು ರಾಫೆಲ್ ಜೆಟ್ ಒಪ್ಪಂದ, ಅಸ್ಸಾಂನ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಹಾಗೂ ಅಯೋಧ್ಯೆ ಭೂವಿವಾದದ ಕುರಿತು ಐತಿಹಾಸಿಕ ತೀರ್ಪು ನೀಡಿದ್ದರು.