ಕೊರೋನಾ ವೈರಸ್: ಲಾಕ್ ಡೌನ್ ನಡುವೆಯೇ ದೆಹಲಿಯಲ್ಲಿ ಭಯ ಬೀಳಿಸುವ ದೃಶ್ಯ, ತವರಿಗೆ ವಾಪಸ್ ಆಗಲು ನಿಲ್ದಾಣಕ್ಕೆ ಬಂದ ಸಾವಿರಾರು ಜನ!

ದೇಶಾದ್ಯಂತ 900ಕ್ಕೂ ಅಧಿಕ ಮಂದಿ ವೈರಸ್ ತಗುಲಿದ್ದು, ವೈರಸ್ ಪ್ರಸರಣ ತಪ್ಪಿಸಲು ಕೇಂದ್ರ ಸರ್ಕಾರ ಲಾಕ್ ಡೌನ್ ಹೇರಿದ್ದರೂ ಅತ್ತ ರಾಜಧಾನಿ ದೆಹಲಿಯಲ್ಲಿ ಮಾತ್ರ ಲಾಕ್ ಡೌನ್ ನಿಯಮಾವಳಿಗಳನ್ನು ಗಾಳಿಗೆ ತೂರಿ ಸಾವಿರಾರು ಜನರು ತಮ್ಮ ತಮ್ಮ ಊರಿಗೆ  ತೆರಳಲು ಏಕಕಾಲದಲ್ಲಿ ಜಮಾಯಿಸಿದ್ದಾರೆ.
ದೆಹಲಿಯ ಆನಂದ್ ವಿಹಾರ್ ಬಸ್ ನಿಲ್ದಾಣದಲ್ಲಿ ಜನಸ್ತೋಮ
ದೆಹಲಿಯ ಆನಂದ್ ವಿಹಾರ್ ಬಸ್ ನಿಲ್ದಾಣದಲ್ಲಿ ಜನಸ್ತೋಮ

ನವದೆಹಲಿ: ದೇಶಾದ್ಯಂತ 900ಕ್ಕೂ ಅಧಿಕ ಮಂದಿ ವೈರಸ್ ತಗುಲಿದ್ದು, ವೈರಸ್ ಪ್ರಸರಣ ತಪ್ಪಿಸಲು ಕೇಂದ್ರ ಸರ್ಕಾರ ಲಾಕ್ ಡೌನ್ ಹೇರಿದ್ದರೂ ಅತ್ತ ರಾಜಧಾನಿ ದೆಹಲಿಯಲ್ಲಿ ಮಾತ್ರ ಲಾಕ್ ಡೌನ್ ನಿಯಮಾವಳಿಗಳನ್ನು ಗಾಳಿಗೆ ತೂರಿ ಸಾವಿರಾರು ಜನರು ತಮ್ಮ ತಮ್ಮ ಊರಿಗೆ  ತೆರಳಲು ಏಕಕಾಲದಲ್ಲಿ ಜಮಾಯಿಸಿದ್ದಾರೆ.

ದೆಹಲಿಯ ಆನಂದ್ ವಿಹಾರ್ ಬಸ್ ಟರ್ಮಿನಲ್ ನಲ್ಲಿ ಏಕಾಏಕಿ ಸಾವಿರಾರು ಕಾರ್ಮಿಕರು ಆಗಮಿಸಿದ್ದು ತಮ್ಮ ತಮ್ಮ ಊರಿಗೆ ತೆರಳಲು ಪರದಾಡುತ್ತಿದ್ದಾರೆ. ಪೂರ್ವ ದೆಹಲಿಯ ಆನಂದ್ ವಿಹಾರ್ ಬಳಿ ಇರುವ ಸ್ವಾಮಿ ವಿವೇಕಾನಂದ ಅಂತರ್ ರಾಜ್ಯ ಬಸ್ ನಿಲ್ದಾಣ(ISBT) ತುಂಬಿ  ತುಳುಕುತ್ತಿದ್ದು, ಬರೋಬ್ಬರಿ 25 ಏಕರೆ ಪ್ರದೇಶದಲ್ಲಿರುವ ಈ ಬಸ್ ನಿಲ್ದಾಣದಲ್ಲಿ ಎಲ್ಲಿ ನೋಡಿದರೂ ಜನ ತುಂಬಿದ್ದಾರೆ. ISBT ಬಸ್ ನಿಲ್ದಾಣದಿಂದ ಉತ್ತರ ಪ್ರದೇಶ, ಉತ್ತರಖಂಡ ಸೇರದಂತೆ ಹಲವು ರಾಜ್ಯಗಳಿಗೆ ಬಸ್ ಸೇವೆ ಕಲ್ಪಿಸಲಾಗುತ್ತಿದೆ. ಲಾಕ್‌ ಡೌನ್ ಬಳಿಕ ಜನರು ತಮ್ಮ  ಊರುಗಳಿಗೆ ತೆರಳಲು ನಿಲ್ದಾಣಕ್ಕೆ ಬರುತ್ತಲೇ ಇದ್ದಾರೆ. 

ದೆಹಲಿಯ ISBT ಬಸ್ ನಿಲ್ದಾಣದಿಂದ ಉತ್ತರ ಪ್ರದೇಶ ಹಾಗೂ ಉತ್ತರಖಂಡ್ ರಾಜ್ಯಗಳಿಗೆ ಪ್ರತಿ ದಿನ 1,400 ರಿಂದ 1,500 ಬಸ್ ಪ್ರತಿ ದಿನ ಓಡಾಡುತ್ತಿದೆ. ಇನ್ನೂ 1,800 ರಿಂದ 2,000 ಸ್ಥಳೀಯ ಸಿಟಿ ಬಸ್‌ಗಳು ಇದೇ ಬಸ್ ನಿಲ್ದಾಣದಿಂದ ಪ್ರತಿ ದಿನ ಕಾರ್ಯನಿರ್ವಹಿಸುತ್ತಿದೆ.  ಪೂರ್ವ ದೆಹಲಿ ಜೊತೆ ಪೂರ್ವ ದೆಹಲಿಯನ್ನು ಜೋಡಿಸುವ ಈ ಬಸ್ ನಿಲ್ದಾಣ ಭಾರತದ ಅತ್ಯಂತ ಹೆಚ್ಚು ಬಸ್ ಸೇವೆ ಹಾಗೂ ಜನಸಂದಣಿ ಹೊಂದಿರುವ ಬಸ್ ನಿಲ್ದಾಣ ಎಂಬ ಹೆಸರು ಪಡೆದಿದೆ. ದೆಹಲಿಯಲ್ಲಿ ಕೆಲಸ ಮಾಡುವ ದಿನಗೂಲಿ ಕಾರ್ಮಿಕರು ತಮ್ಮ ಊರಿಗೆ ತೆರಳಲು  ಧಾವಿಸುತ್ತದ್ದಾರೆ. ದೆಹಲಿ ಬಸ್ ನಿಲ್ದಾಣ ಮಾತ್ರವಲ್ಲ, ದೆಹಲಿ ಹಾಗೂ ಉತ್ತರ ಪ್ರದೇಶ ಗಡಿಯಲ್ಲೂ ಜನ ಸಾಗರವೇ ಇದೆ. 

ಲಾಕ್‌ಡೌನ್‌ನಿಂದ ಊಟ ಹಾಗೂ ಉಳಿದುಕೊಳ್ಳಲು ಯಾವುದೇ ಸಮಸ್ಯ ಆಗಬಾರದು ಎಂದು ಕೇಂದ್ರ ಸರ್ಕಾರ ಹಾಗೂ ಆಯಾ ರಾಜ್ಯ ಸರ್ಕಾರಗಳು ವಿಶೇಷ ಪ್ಯಾಕೇಜ್ ಘೋಷಿಸಿದೆ. ಆದರೂ ಇಲ್ಲಿ ಯಾವುದೇ ಸಾಮಾಜಿಕ ಅಂತರ ಕಾಯ್ದುಕೊಂಡಿಲ್ಲ. ಕೊರೋನಾಗೆ ಕೈಗೊಂಡ  ಪ್ರಯತ್ನಗಳೆಲ್ಲಾ ನೀರಿನಲ್ಲಿ ಮಾಡಿದ ಹೋಮದಂತಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com