ಮೊದಲು ಜನ್ಮ ನೀಡಿದ್ದು ಕೊರೋನಾ ಟೆಸ್ಟ್ ಕಿಟ್ ಗೆ, ನಂತರ ಹೆರಿಗೆ! ತುಂಬು ಗರ್ಭಿಣಿ ವೈದ್ಯೆಗೆ ಮೆಚ್ಚುಗೆಯ ಮಹಾಪೂರ!!

ಮಿನಾಲ್ ದಾಖ್ವೆ ಭೋಸ್ಲೆ
ಮಿನಾಲ್ ದಾಖ್ವೆ ಭೋಸ್ಲೆ

ಪುಣೆ: ಕೊರೋನಾ ವೈರಸ್ ನ ಅಟ್ಟಹಾಸಕ್ಕೆ ಅತ್ಯಂತ ಅಭಿವೃದ್ಧಿ ಹೊಂದಿದ ದೇಶಗಳೂ ನಲುಗಿಹೋಗಿವೆ. ಇನ್ನು ಹೆಲ್ತ್ ಕೇರ್ ವಿಷಯದಲ್ಲಿ ಬೇರೆ ದೇಶಗಳಿಗೆ ಹೋಲಿಸಿದರೆ ಸುಸ್ಥಿತಿಯಲ್ಲಿ ಇಲ್ಲದ ಭಾರತಕ್ಕೆ ಕೊರೋನಾ ವೈರಸ್ ಅತ್ಯಂತ ಸವಾಲಿನ ಸಂಗತಿಯೇ ಸರಿ. ಇಂತಹ ಪರಿಸ್ಥಿತಿಯಲ್ಲಿ ಭಾರತ ತನ್ನದೇ ಕೊರೋನಾ ವೈರಸ್ ಪರೀಕ್ಷೆಗೆ ಮೊದಲ ಮೇಡ್ ಇನ್ ಇಂಡಿಯಾ ಕಿಟ್ ತಯಾರಿಸಿ ಜಗತ್ತಿನ ಗಮನ ಸೆಳೆದಿತ್ತು. ಇದರ ಹಿಂದಿದ್ದದ್ದು ಓರ್ವ ಗರ್ಭಿಣಿ ಮಹಿಳಾ ವೈದ್ಯೆ! 

ಇಂಟಹ ಸಂಕಷ್ಟದ ಪರಿಸ್ಥಿತಿಯಲ್ಲಿ ಛಲ ಬಿಡದೇ ಭಾರತ ಕಿಟ್ ಗಾಗಿ ಕಾಯುತ್ತ ಕುಳಿತುಕೊಳ್ಳುವುದನ್ನ ತಪ್ಪಿಸಿದ ತಂಡದಲ್ಲಿ ಓರ್ವ ತುಂಬು ಗರ್ಭಿಣಿ ಮಹಿಳಾ ವೈದ್ಯೆಯ ಕೊಡುಗೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.   

ಆಕೆಯ ಹೆಸರು ಮಿನಾಲ್ ದಾಖ್ವೆ ಭೋಸ್ಲೆ. ವೈರೋಲಾಜಿಸ್ಟ್. ಪುಣೆ ಮೂಲದ ಮಾಲಿಕ್ಯುಲರ್ ಡೈಯಾಗ್ನೋಸ್ಟಿಕ್ಸ್ ಕಂಪನಿ, ಮೈಲ್ಯಾಬ್ ಡಿಸ್ಕವರಿ ಸೊಲ್ಯೂಷನ್ಸ್, ಕೊರೋನಾ ವೈರಸ್ ಸೋಂಕು ಪರೀಕ್ಷೆಗೆ ಮೊಟ್ಟ ಮೊದಲ ಮೇಡ್ ಇನ್ ಇಂಡಿಯಾ ಕಿಟ್ ನ್ನು ತಯಾರಿಸಿತ್ತು. ಕೇವಲ 6 ವಾರದಲ್ಲಿ ಇಂತಹ ಒಂದು ಕಿಟ್ ತಯಾರಿಸುವ ಸವಾಲನ್ನ ಸ್ವೀಕರಿಸಿ ಯೋಜನೆಯನ್ನು ಪೂರ್ಣಗೊಳಿಸಿದಾಗ ತುಂಬು ಗರ್ಭಿಣಿ. 18ನೇ ಮಾರ್ಚ್ ರಂದು ಕಿಟ್ ಗೆ ಸಂಬಂಧಪಟ್ಟ ಎಲ್ಲವೂ ಸಿದ್ಧಪಡಿಸಿ, ಅದರ ಅನುಮೋದನೆಗೆ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರೊಲೊಜಿಗೆ ಕಳಿಸಿ ನಂತರ ಮಗುವಿಗೆ ಜನ್ಮ ನೀಡಿದ್ದಾರೆ. 

ದೇಶ ತುರ್ತು ಸಂದರ್ಭ ಎದುರಿಸುತ್ತಿತ್ತು. ಇದನ್ನು ನಾನು ಸವಾಲಾಗಿ ಪರಿಗಣಿಸಿದೆ. ನನ್ನ ದೇಶಕ್ಕೆ ಏನಾದರೂ ಒಳ್ಳೆಯದು ಮಾಡಬೇಕಿತ್ತು ಮೊದಲು ಕಿಟ್ ಗೆ ಜೀವ ನೀಡಿದೆ ನಂತರ ನನ್ನ ಮಗುವಿಗೆ ಜನ್ಮ ನೀಡಿದೆ, ನನ್ನ  ತಂಡದಲ್ಲಿ ಇನ್ನೂ 10 ಜನರಿದ್ದಾರೆ. ಅವರೆಲ್ಲ ಬಹಳ ಕಷ್ಟಪಟ್ಟು ಕೆಲಸ ಮಾಡಿದ್ದಾರೆ ಎನ್ನುತ್ತಾರೆ ಮಿನಾಲ್ ದಾಖ್ವೆ ಭೋಸ್ಲೆ.

ಒಂದು ಕಿಟ್ ನಲ್ಲಿ ನೂರು ಟೆಸ್ಟ್ ಮಾಡಬಹುದು, ಭಾರತ ಕಿಟ್ ತಯಾರಿಸುವುದಕ್ಕೂ ಮುನ್ನ ಕೊರೋನಾ ಟೆಸ್ಟ್ ಮಾಡಿಸಲು ಚೀನಾಗೆ ಪ್ರತಿ ಕಿಟ್ ಗೆ 4,500 ರೂಪಾಯಿ ನೀಡಬೇಕಿತ್ತು. ಈಗ ಭಾರತ ತನ್ನದೇ ಆದ ಕಿಟ್ ಹೊಂದಿರುವುದರಿಂದ ಎಲ್ಲವೂ 1,200 ರೂಪಾಯಿಯಲ್ಲಿ ಮುಗಿಯುತ್ತದೆ. 

ಗರ್ಭಿಣಿಯರಿಗೆ ಸಂಬಂಧಪಟ್ಟ ಸಮಸ್ಯೆಗಳ ನಡುವೆಯೂ ಸವಾಲನ್ನು ಸ್ವೀಕರಿಸಿ ಛಲ ಬಿಡದೇ ಸಾಧಿಸಿದ ಮಿನಾಲ್ ಭೋಂಸ್ಲೆ ಅವರಿಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com