ಕೊರೋನಾ ಸೋಂಕಿತರು, ವೈದ್ಯರ ಜೊತೆ ಮಾತನಾಡಿದ ಮೋದಿ, ಅವರ ಅನುಭವಗಳೇನು, ಹೇಳಿದ್ದೇನು?

ಪ್ರಧಾನಿ ನರೇಂದ್ರ ಮೋದಿಯವರು ಮಾತನಾಡಿರುವ ಮನ್ ಕಿ ಬಾತ್ ಸರಣಿ ಪ್ರಸಾರವಾಗಿದ್ದು, ಈ ಬಾರಿಯ ಅವತರಣಿಕೆ ಸಂಪೂರ್ಣವಾಗಿ ಕೊರೋನಾ ವೈರಸ್ ಗೆ ಸಂಬಂಧಿಸಿದ್ದಾಗಿತ್ತು.

Published: 29th March 2020 12:16 PM  |   Last Updated: 29th March 2020 01:29 PM   |  A+A-


Posted By : Sumana Upadhyaya
Source : PTI

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಮಾತನಾಡಿರುವ ಮನ್ ಕಿ ಬಾತ್ ಸರಣಿ ಪ್ರಸಾರವಾಗಿದ್ದು, ಈ ಬಾರಿಯ ಅವತರಣಿಕೆ ಸಂಪೂರ್ಣವಾಗಿ ಕೊರೋನಾ ವೈರಸ್ ಗೆ ಸಂಬಂಧಿಸಿದ್ದಾಗಿತ್ತು.

ಇಂದಿನ ಮನ್ ಕಿ ಬಾತ್ ನಲ್ಲಿ ಮೋದಿಯವರು ಕೊರೋನಾ ಸೋಂಕಿತರು, ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರಲ್ಲಿ ಕೆಲವರನ್ನು ಮಾತನಾಡಿಸಿದ್ದಾರೆ.

-ಕೊರೋನಾ ಸೋಂಕಿತ ರಾಮಗಂಪ ತೇಜ ತಮ್ಮ ಅನುಭವವನ್ನು ಪ್ರಧಾನಿ ಮೋದಿ ಜೊತೆ ಹಂಚಿಕೊಂಡು, ಆರಂಭದಲ್ಲಿ ನನಗೆ ಕೊರೋನಾ ಸೋಂಕು ಇರುವುದು ಪತ್ತೆಯಾದಾಗ ಭಯವಾಯಿತು, ಆದರೆ ನಂತರದ ದಿನಗಳಲ್ಲಿ ವೈದ್ಯರು ಮತ್ತು ಆಸ್ಪತ್ರೆ ಸಿಬ್ಬಂದಿ ಧೈರ್ಯ ತುಂಬಿ ಚಿಕಿತ್ಸೆ ನೀಡಿದರು.ಈಗ ಗುಣಮುಖನಾಗುತ್ತಿದ್ದೇನೆ. ಆಸ್ಪತ್ರೆಯಿಂದ ಬಿಡುಗಡೆಗೊಂಡ ಮೇಲೆ ಸಹ ನಾನು ಮನೆಯಲ್ಲಿದ್ದು ನಿಯಮಗಳನ್ನು, ಶುಚಿತ್ವವನ್ನು ಪಾಲಿಸುತ್ತೇನೆ ಎಂದರು.

 -ಆಗ್ರಾದ ಅಶೋಕ್ ಕಪೂರ್ ಮತ್ತು ಅವರ ಇಡೀ ಕುಟುಂಬ ಕೊರೋನಾ ಸೋಂಕಿಗೆ ತುತ್ತಾಗಿದೆ. ಅಶೋಕ್ ಕಪೂರ್ ವೃತ್ತಿಯಲ್ಲಿ ಶೂ ತಯಾರಕರು. ಇಟಲಿಯಲ್ಲಿ ನನಗೆ,ನನ್ನ ಪತ್ನಿ ಮತ್ತು ಇಬ್ಬರು ಪುತ್ರರಿಗೆ ಸೋಂಕು ತಗುಲಿದ್ದು ಅಲ್ಲಿಂದ ಭಾರತಕ್ಕೆ ಬರುವಾಗಲೂ ನಮ್ಮಿಂದ ಕೆಲವರಿಗೆ ಸೋಂಕು ಪಸರಿಸಿದೆ ಎಂದು ಹೇಳಿಕೊಂಡರು.

ಆಗ ಮೋದಿಯವರು, ಆಗ್ರಾದಲ್ಲಿ ಕೊರೋನಾ ವಿರುದ್ಧ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಅರಿವು ಮೂಡಿಸಿ, ಇದಕ್ಕೆ ಸಾಮಾಜಿಕ ಮಾಧ್ಯಮವನ್ನು ಬಳಸಿಕೊಳ್ಳಿ, ನಿಮ್ಮ ಅನುಭವ ಹಂಚಿಕೊಳ್ಳಿ ಎಂದರು.

-ವೈದ್ಯ ಡಾ ನಿತೀಶ್ ಗುಪ್ತಾ ಪ್ರಧಾನಿಗಳ ಜೊತೆ ಮಾತನಾಡಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೊರೋನಾ ರೋಗಿಗಳಿಗೆ ಬೇರೆ ದೇಶಗಳಲ್ಲಿ ಸಾಯುವವರನ್ನು ನೋಡಿ ಭಯವಾಗುತ್ತಿದೆ. ಅಂತವರಿಗೆ ಸಮಾಲೋಚನೆ ನೀಡಬೇಕಿದೆ ಎಂದರು.

ಭಾರತದ ಗಡಿ ಭಾಗದಲ್ಲಿ ಸೈನಿಕರು ಹೋರಾಡುವಂತೆ ನಾವು ಕೊರೋನಾ ರೋಗಿಗಳಿಗೆ ಚಿಕಿತ್ಸೆ ನೀಡಲು ಹೋರಾಟ ಮಾಡುತ್ತಿದ್ದೇವೆ. ರೋಗಿಗಳು ಗುಣಮುಖರಾಗಿ ಮನೆಗೆ ಹೋಗಬೇಕೆಂಬುದು ನಮ್ಮ ಉದ್ದೇಶವಾಗಿದೆ.14 ದಿನಗಳಲ್ಲಿ ಗುಣಮುಖರಾಗಿ ಮನೆಗೆ ಹೋಗುತ್ತೀರಿ ಎಂದು ನಾವು ರೋಗಿಗಳಿಗೆ ಧೈರ್ಯ ತುಂಬುತ್ತಿರುತ್ತೇವೆ ಎಂದು ಮೋದಿ ಜೊತೆ ಅನುಭವ ಹಂಚಿಕೊಂಡರು.

ತಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೊರೋನಾ ರೋಗಿಗಳೆಲ್ಲ ಗುಣಮುಖರಾಗುತ್ತಿದ್ದಾರೆ ಎಂದು ಪುಣೆಯ ವೈದ್ಯ ಡಾ ಬೊರ್ಸೆ ಹೇಳಿದರು.  ಈ ಸಂದರ್ಭದಲ್ಲಿ ಮೋದಿ, ಹಣ ಮಾಡುವ ಉದ್ದೇಶವಿಲ್ಲದೆ ರೋಗಿಗಳಿಗೆ ಈ ಸಂದರ್ಭದಲ್ಲಿ ಚಿಕಿತ್ಸೆ ನೀಡುತ್ತಿರುವ ವೈದ್ಯರು ನಿಜವಾದ ವೈದ್ಯರು ಎಂದು ಕೊಂಡಾಡಿದರು.

-ಪ್ರತಿದಿನ ಅಗತ್ಯ ಕೆಲಸಗಳಾದ ಮನೆ ಮನೆಯಿಂದ ಕಸ ಸಂಗ್ರಹಿಸುವ ಕಾರ್ಮಿಕರನ್ನು, ಬ್ಯಾಂಕ್ ಉದ್ಯೋಗಿಗಳು, ದಿನಸಿ ಅಂಗಡಿಗಳ ಕಾರ್ಮಿಕರು, ಇ-ಮಳಿಗೆಗಳಿಂದ ಪದಾರ್ಥಗಳನ್ನು ಪೂರೈಸುವ ಕಾರ್ಮಿಕರು, ಲಾಕ್ ಡೌನ್ ಸಂದರ್ಭದಲ್ಲಿ ಕೆಲಸ ಮಾಡುವ ಐಟಿ ವೃತ್ತಿಪರರು, ಮಾಧ್ಯಮದವರನ್ನು ಸಹ ಈ ಸಂದರ್ಭದಲ್ಲಿ ನೆನೆಯಬೇಕು ಎಂದು ಮೋದಿ ಹೇಳಿದರು.

ಇಂದು ಕೊರೋನಾ ವೈರಸ್ ಜಾತಿ, ಮತ, ಧರ್ಮ, ಬಡವ,ಶ್ರೀಮಂತ, ಭಾಷೆ, ಗಡಿ, ದೇಶ ಎಂದು ಭೇದಭಾವ ತೋರದೆ ಎಲ್ಲರಲ್ಲಿಯೂ ವ್ಯಾಪಿಸಿದೆ. ಕೊರೋನಾ ವೈರಸ್ ಗೆ ಸಾಮಾಜಿಕ ಅಂತರ ಕಾಯುವುದೆಂದರೆ ಭಾವನಾತ್ಮಕವಾಗಿ ದೂರವಿರುವುದು ಎಂದಲ್ಲ. ನಮ್ಮಲ್ಲಿ ಹಲವರು ಕೊರೋನಾ ಸೋಂಕಿನ ಲಕ್ಷಣವಿಲ್ಲದಿದ್ದರೂ ಸ್ವಯಂ ನಿರ್ಬಂಧವಿಧಿಸಿಕೊಂಡಿದ್ದಾರೆ. ಅಂತವರ ಜವಾಬ್ದಾರಿ ಕಾಳಜಿಗೆ ನನ್ನ ಅಭಿನಂದನೆಗಳು ಎಂದರು.

21 ದಿನಗಳ ಈ ಲಾಕ್ ಡೌನ್ ಸಮಯದಲ್ಲಿ ಮನೆಯಲ್ಲಿದ್ದುಕೊಂಡು ನಿಮ್ಮ ಕುಟುಂಬದವರಿಗೆ, ಮಕ್ಕಳಿಗೆ ಸಮಯ ನೀಡಿ, ನಿಮ್ಮಲ್ಲಿರುವ ಉತ್ತಮ ಹವ್ಯಾಸಗಳನ್ನು ಈ ಸಮಯದಲ್ಲಿ ಸದುಪಯೋಗಪಡಿಸಿಕೊಳ್ಳಿ. ಸಂಗೀತ, ಕಲೆ, ಕಸೂತಿಗಳಲ್ಲಿ ಪಾಲ್ಗೊಳ್ಳಿ ಎಂದು ಮೋದಿ ದೇಶವಾಸಿಗಳಿಗೆ ಕರೆ ನೀಡಿದ್ದಾರೆ.  

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp