ಸೋಂಕಿನಿಂದ ಗುಣಮುಖಳಾದ ಗರ್ಭಿಣಿ ಸಹಾಯಕ್ಕೆ ಬಾರದ ಪೊಲೀಸರು: ಮನೆಯಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ

ಕೊರೋನಾ ಸೋಂಕಿಗೊಳಗಾಗಿ ಗುಣಮುಖರಾಗಿದ್ದ ತುಂಬು ಗರ್ಭಿಣಿಯೊಬ್ಬರಿಗೆ ಸಹಾಯ ಮಾಡಲು ಪೊಲೀಸರು ನಿರಾಕರಿಸಿದ್ದು, ಸೂಕ್ತ ಸಮಯಕ್ಕೆ ಆಸ್ಪತ್ರೆಗೆ ತೆರಳಲು ಸಾಧ್ಯವಾಗದೆ ಮಹಿಳೆ ಮನೆಯಲ್ಲೇ ಮಗುವಿಗೆ ಜನ್ಮ ನೀಡಿರುವ ಘಟನೆಯೊಂದು ಕಾಸರಗೋಡಿನ ಕಲ್ನಾಡ್ ನಲ್ಲಿ ನಡೆದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕಾಸರಗೋಡು: ಕೊರೋನಾ ಸೋಂಕಿಗೊಳಗಾಗಿ ಗುಣಮುಖರಾಗಿದ್ದ ತುಂಬು ಗರ್ಭಿಣಿಯೊಬ್ಬರಿಗೆ ಸಹಾಯ ಮಾಡಲು ಪೊಲೀಸರು ನಿರಾಕರಿಸಿದ್ದು, ಸೂಕ್ತ ಸಮಯಕ್ಕೆ ಆಸ್ಪತ್ರೆಗೆ ತೆರಳಲು ಸಾಧ್ಯವಾಗದೆ ಮಹಿಳೆ ಮನೆಯಲ್ಲೇ ಮಗುವಿಗೆ ಜನ್ಮ ನೀಡಿರುವ ಘಟನೆಯೊಂದು ಕಾಸರಗೋಡಿನ ಕಲ್ನಾಡ್ ನಲ್ಲಿ ನಡೆದಿದೆ. 

ಈ ಬಗ್ಗೆ ಮಹಿಳೆಯ ಕುಟುಂಬಸ್ಥರು ಮೆಲ್ಪರಾಂಬ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 

ಕೊರೋನಾದಿಂದ ಬಳಲುತ್ತಿದ್ದ ಮಹಿಳೆ ಹಾಗೂ ಆಕೆಯ ಪತಿ ಇಬ್ಬರು ವೈರಸ್ ನಿಂದ ಗುಣಮುಖರಾಗಿ ಏಪ್ರಿಲ್ 10 ರಂದು ಆಸ್ಪತ್ರೆಯಿಂದ ಬಿಡುಗಡೆಯಗೊಂಡಿದ್ದರು. ಆಸ್ಪತ್ರೆಯಿಂದ ಬಿಡುಗಡೆಗೊಂಡ ಬಳಿಕ ಬಳಿಕ ಕೂಡ 14 ದಿನಗಳ ಕಾಲ ಕ್ವಾರಂಟೈನ್ ಪೂರ್ಣಗೊಳಿಸಿದ್ದರು. 

ತುಂಬು ಗರ್ಭಿಣಿಯಾಗಿದ್ದ ಮಹಿಳೆಗೆ ಭಾನುವಾರ ಪ್ರಸವದ ನೋವು ಕಾಣಿಸಿಕೊಂಡಿದೆ. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರಿಗೆ ಮಹಿಳೆಯ ಪತಿ ಮಾಹಿತಿ ನೀಡಿ, ಆಸ್ಪತ್ರೆಗೆ ಕರೆದೊಯ್ಯಲು ಅನುಮತಿ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. ಈ ವೇಳೆ ದುರ್ವರ್ತನೆ ತೋರಿರುವ ಪೊಲೀಸರು, ನನ್ನ ಬಳಿಯಿದ್ದ ಫೋನ್ ಕಸಿದುಕೊಂಡು, ಬಾಯಿಗೆ ಬಂದಂತೆ ಬೈದರು. 23 ಜನರಿಗೆ ಸೋಂಕು ಹರಡಿದ ವ್ಯಕ್ತಿ ನೀನು, ಇದೀಗ ಬೀದಿ ಸುತ್ತಲು ಬಯಸುತ್ತಿದ್ದೀಯಾ ಎಂದು ಹೇಳಿದರು ಎಂದು ವ್ಯಕ್ತಿ ದೂರಿನಲ್ಲಿ ಹೇಳಿಕೊಂಡಿದ್ದಾರೆ. 

ಕಳೆದ ವಾರ ಕೂಡ ಇದೇ ರೀತಿಯ ನಾಟಕ ಮಾಡಿದ್ದ. ನಿಮಗೆ ಧೈರ್ಯವಿದ್ದರೆ ಕಾರು ತೆಗೆದುಕೊಂಡು ಹೊರಗೆ ಹೋಗಿ ನೋಡಿ ಎಂದೂ ಕೂಡ ದರ್ಪ ತೋರಿಸಿದರು ಎಂದು ಹೇಳಿದ್ದಾರೆ. 

9 ದಿನಗಳ ಹಿಂದೆ ಕೂಡ ನೋವು ಕಾಣಿಸಿಕೊಂಡಿತ್ತು. ಈ ವೇಳೆ ಕಣ್ಣೂರಿನ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ತೆರಳಿದ್ದಾಗ ಸೋಂಕಿನಿಂದಾಗಿ ನೋವು ಬರುತ್ತಿರುವುದಾಗಿ ಹೇಳಿದ್ದರು. 2 ದಿನಗಳ ಬಳಿಕ ಮನೆಗೆ ಬಂದಿದ್ದೆವು. ನೋವಿನಲ್ಲಿ ನನ್ನ ಸೊಸೆ ಶೌಚಾಲಯಕ್ಕೆ ತೆರಳುತ್ತಿರುವುದನ್ನು ನೋಡಿದ್ದೆ, ಈ ವೇಳೆ ಆಕೆ ಕಾಲು ಜಾರಿ ಬಿದ್ದಿದ್ದು ನೋಡಿ ಹೃದಯ ಒಡೆದಂತಾಗಿತ್ತು. ಕೂಡಲೇ ಮನೆಯ ಬಳಿಯಿದ್ದ ನನ್ನ ಸಹೋದರಿಯನ್ನು ಕರೆಯಲಾಗಿತ್ತು. ಬಳಿಕ ನನ್ನ ಸೊಸೆ ಮನೆಯಲ್ಲಿಯೇ ಮಗುವಿಗೆ ಜನ್ಮ ನೀಡಿದಳು ಎಂದು ಮಹಿಳೆಯ ಮಾವ ಹೇಳಿಕೆ ನೀಡಿದ್ದಾರೆ. 

ಘಟನೆ ಬಳಿಕ ಮಾದಕ ವಸ್ತುಗಳ ಕೇಂದ್ರದ ಡಿವೈಎಸ್ಪಿ ಅಸೈನಾರ್ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದೆವು. ಮಾಹಿತಿ ನೀಡಿದ 30 ನಿಮಿಷಗಳಲ್ಲಿ ಇಡೀ ಮನೆ ವೈದ್ಯಕೀಯ ಕೇಂದ್ರವಾಗಿ ನಿರ್ಮಾಣಗೊಂಡಿತ್ತು. ಆರೋಗ್ಯಾಧಿಕಾರಿಗಳು, ಶುಶ್ರೂಕರು ಮನೆಗೆ ಬಂದಿದ್ದರು. ಪೊಲೀಸ್ ಅಧಿಕಾರಿಗಳೂ ಕೂಡ ಬಂದಿದ್ದರು. ಆ್ಯಂಬುಲೆನ್ಸ್ ಕೂಡ ಮನೆ ಬಳಿ ಬಂದಿತ್ತು ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com