ವಿಶಾಖಪಟ್ಟಣ ವಿಷಾನಿಲ ಸೋರಿಕೆ ದುರಂತ: ಜನರ ಜೀವ ರಕ್ಷಣೆಗೆ ಅಗತ್ಯವಾದ ಎಲ್ಲ ಕ್ರಮ- ಸಿಎಂ ಜಗನ್ ಮೋಹನ್ ರೆಡ್ಡಿ

ಜನರ ಜೀವ ರಕ್ಷಣೆಗೆ ಅಗತ್ಯವಾದ ಎಲ್ಲ ಕ್ರಮ ಕೈಗೊಂಡಿದ್ದೇವೆ ಎಂದು ಆಂಧ್ರ ಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ ಗುರುವಾರ ಹೇಳಿದ್ದಾರೆ.
ಸಿಎಂ ಜಗನ್
ಸಿಎಂ ಜಗನ್

ವಿಶಾಖಪಟ್ಟಣ: ಜನರ ಜೀವ ರಕ್ಷಣೆಗೆ ಅಗತ್ಯವಾದ ಎಲ್ಲ ಕ್ರಮ ಕೈಗೊಂಡಿದ್ದೇವೆ ಎಂದು ಆಂಧ್ರ ಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ ಗುರುವಾರ ಹೇಳಿದ್ದಾರೆ.

ವಿಶಾಖಪಟ್ಟಣ ವಿಷಾನಿಲ ಸೋರಿಕೆ ದುರಂತಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ಆಂಧ್ರ ಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ, ಅಧಿಕಾರಿಗಳಿಂದ ದುರಂತಕ್ಕೆ ಸಂಬಂಧಿಸಿದಂತೆ ಮಾಹಿತಿ ಪಡೆದಿದ್ದೇನೆ. ಅಂತೆಯೇ ಹೆಚ್ಚು ಜೀವ ಹಾನಿ ಸಂಭವಿಸದಂತೆ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಿ ಎಂದು ಸೂಚಿಸಿದ್ದೇನೆ. ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಕುರಿತು ನಿಗಾ ವಹಿಸಿದ್ದು, ಸಂತ್ರಸ್ಥರಿಗೆ ಎಲ್ಲ ರೀತಿಯ ನೆರವು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಹೇಳಿದರು.

ಪರಿಸ್ಥಿತಿ ನಿಯಂತ್ರಣಕ್ಕೆ ಗಂಟೆಗಳೇ ಬೇಕು
ಇನ್ನು ವಿಶಾಖಪಟ್ಟಣ ವಿಷಾನಿಲ ಸೋರಿಕೆ ಪ್ರಕರಣ ಗಂಭೀರವಾಗಿದ್ದು, ಪರಿಸ್ಥಿತಿ ನಿಯಂತ್ರಿಸಲು ಗಂಟೆಗಳೇ ಬೇಕು ಎಂದು ಹೇಳಲಾಗುತ್ತಿದೆ. ವಿಷಾನಿಲ ಸೋರಿಕೆಯಿಂದಾಗಿ ಕಾರ್ಖಾನೆಯ ಸುಮಾರು 5 ಕಿ.ಮೀ ವ್ಯಾಪ್ತಿಯಲ್ಲಿ ಆತಂಕ ಸೃಷ್ಟಿಯಾಗಿದ್ದು, ಗೋಪಾಲಪಟ್ಟಣಂ ಸುತ್ತಲಿನ ಐದು  ಗ್ರಾಮಗಳಲ್ಲಿನ ಜನರಿಗೆ ಉಸಿರಾಟದ ತೊಂದರೆ ಮತ್ತು ಗಂಟಲು ಕೆರೆತ ಸಮಸ್ಯೆ ಆರಂಭವಾಗಿದೆ. ನೂರಾರು ಮಂದಿ ಉಸಿರಾಟದ ಸಮಸ್ಯೆ, ಗಂಟಲು ನೋವು, ಕಣ್ಣಿನ ಉರಿ, ಹೊಟ್ಟೆ ನೋವು, ಇತರೆ ಸಮಸ್ಯೆಗಳಿಂದಾಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಅಸ್ವಸ್ಥರನ್ನು ಆಸ್ಪತ್ರೆಗೆ  ರವಾನಿಸಲು ಇದೀಗ ಆ್ಯಂಬುಲೆನ್ಸ್ ಗಳನ್ನು ಮತ್ತು ಸರ್ಕಾರಿ ಸಾರಿಗೆ ಬಸ್ ಗಳನ್ನು ಕೂಡ ನಿಯೋಜನೆ ಮಾಡಲಾಗಿದೆ.

ಇದೇ ವಿಚಾರವಾಗಿ ಮಾತನಾಡಿರುವ ಆಂಧ್ರ ಪ್ರದೇಶ ಡಿಜಿಪಿ ಗೌತಮ್ ಸವಾಂಗ್ ಅವರು, ಪ್ರಸ್ತುತ ಅಸ್ವಸ್ಥರಾಗಿರುವವರ ಪೈಕಿ ಬಹುತೇಕ ಮಂದಿ ಇದೇ ಎಲ್ ಜಿ ಪಾಲಿಮರ್ಸ್ ಕಾರ್ಖಾನೆಯ ನೌಕರರಾಗಿದ್ದಾರೆ. ಬಹುತೇಕ ಮಂದಿ ಸುತ್ತಮುತ್ತಲಿನ ನಿವಾಸಿಗಳೇ ಆಗಿದ್ದು, ಎಲ್ಲರನ್ನು  ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಹೇಳಿದರು.

ಆಘಾತ ವ್ಯಕ್ತಪಡಿಸಿದ ಮಾಜಿ ಸಿಎಂ ಚಂದ್ರಬಾಬು ನಾಯ್ಡು, ಪವನ್ ಕಲ್ಯಾಣ್
ಇನ್ನು ದುರಂತಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರು ಆಘಾತ ವ್ಯಕ್ತಪಡಿಸಿದ್ದು, ಕೂಡಲೇ ಕಾರ್ಖಾನೆಯ ಸುತ್ತಮುತ್ತಲಿನ ಗ್ರಾಮಸ್ಥರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಿ ಎಂದು ಸಲಹೆ ನೀಡಿದ್ದಾರೆ. ಅಲ್ಲದೆ ಘಟನಾ ಸ್ಥಳದಲ್ಲಿರು ಮೂಕ ಪ್ರಾಣಿಗಳನ್ನೂ  ಕೂಡಲೇ ರವಾನಿಸಬೇಕು ಎಂದು ಹೇಳಿದ್ದಾರೆ. ಇದೇ ವೇಳೆ ರಾಜ್ಯಸರ್ಕಾರದ ವಿರುದ್ಧ ಕೆಂಡಕಾರಿದ ಚಂದ್ರಬಾಬು ನಾಯ್ಡು ಅವರು, ಕಾರ್ಖಾನೆಯ ವಿಷಾನಿಲ ಸೋರಿಕೆ ಅಧಿಕಾರಿಗಳ ನಿರ್ಲಕ್ಷ್ಯತನಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಕಿಡಿಕಾರಿದರು. ಇನ್ನು ಇದೇ ವಿಚಾರವಾಗಿ  ಮಾತನಾಡಿದ ನಟ ಹಾಗೂ ಜನಸೇನಾ ಪಕ್ಷದ ಸಂಸ್ಥಾಪಕ ಪವನ್ ಕಲ್ಯಾಣ್, ಹೃದಯವಿದ್ರಾವಕ ಘಟನೆ ಎಂದು ಹೇಳಿದ್ದಾರೆ. ಅಲ್ಲದೆ ಅಸ್ವಸ್ಥರು ಶೀಘ್ರ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿರುವ ಅವರು, ರಾಜ್ಯ ಸರ್ಕಾರ ದುರಂತದಲ್ಲಿನ ಸಂತ್ರಸ್ಥರಿಗೆ ನೆರವಾಗಬೇಕು. ಸೂಕ್ತ ವೈದ್ಯಕೀಯ  ಚಿಕಿತ್ಸೆ ನೀಡಬೇಕು. ಅಲ್ಲದೆ ಇಂತಹ ಪ್ರಮಾದಗಳ ಪುನರಾವರ್ತನೆಯಾಗದಂತೆ ಮುಂಜಾಗ್ರತೆ ವಹಿಸಬೇಕು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com