ಐಐಟಿ ದೆಹಲಿಯ ಕಡಿಮೆ ವೆಚ್ಚದ ಕೋವಿಡ್-19 ಟೆಸ್ಟ್ ಕಿಟ್ ಗೆ ಬೆಂಗಳೂರು ಮೂಲದ ಸಂಸ್ಥೆಯ ಸಹಭಾಗಿತ್ವ, ಜೂನ್ ವೇಳೆಗೆ ಕಿಟ್ ಲಭ್ಯ!

ಐಐಟಿ ದೆಹಲಿ ತಯಾರಿಸುತ್ತಿರುವ ಕಡಿಮೆ ವೆಚ್ಚದ ಕೋವಿಡ್-19 ಪರೀಕ್ಷೆ ಕಿಟ್ ತಯಾರಿಕೆಗೆ ಬೆಂಗಳೂರು ಮೂಲದ ಸಂಸ್ಥೆ ಬಂಡವಾಳ ಹೂಡುತ್ತಿದ್ದು, ಈ ವಿಶೇಷ ಕಿಟ್ ಗಳು ಜೂನ್ ಮೊದಲ ವಾರದಲ್ಲಿ ಲಭ್ಯವಾಗುವ ಸಾಧ್ಯತೆ ಎಂದು ಹೇಳಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ; ಐಐಟಿ ದೆಹಲಿ ತಯಾರಿಸುತ್ತಿರುವ ಕಡಿಮೆ ವೆಚ್ಚದ ಕೋವಿಡ್-19 ಪರೀಕ್ಷೆ ಕಿಟ್ ತಯಾರಿಕೆಗೆ ಬೆಂಗಳೂರು ಮೂಲದ ಸಂಸ್ಥೆ ಬಂಡವಾಳ ಹೂಡುತ್ತಿದ್ದು, ಈ ವಿಶೇಷ ಕಿಟ್ ಗಳು ಜೂನ್ ಮೊದಲ ವಾರದಲ್ಲಿ ಲಭ್ಯವಾಗುವ ಸಾಧ್ಯತೆ ಎಂದು ಹೇಳಲಾಗಿದೆ.

ಹೌದು.. ಬೆಂಗಳೂರು ಮೂಲದ ಜೀನೀ ಲ್ಯಾಬೊರೋಟರೀಸ್ ಸಂಸ್ಥೆ ಐಐಟಿ ದೆಹಲಿ ತಯಾರಿಸುತ್ತಿರುವ ಕಡಿಮೆ ವೆಚ್ಚದ ಕೋವಿಡ್-19 ಪರೀಕ್ಷೆ ಕಿಟ್ ತಯಾರಿಕೆಗೆ ಬೇಕಾದ ಎಲ್ಲ ರೀತಿಯ ಆರ್ಥಿಕ ಮತ್ತು ತಾಂತ್ರಿಕ ನೆರವು ನೀಡುತ್ತಿದ್ದು, ಇದಕ್ಕಾಗಿ ಆಂಧ್ರ ಪ್ರದೇಶದ ವಿಶಾಖಪಟ್ಟಣಂ  ನಲ್ಲಿರುವ ಮೆಡ್ ಟೆಕ್ ಝೋನ್ (AMTZ)ನಲ್ಲಿ ವಿಶೇಷ ಘಟಕವನ್ನೂ ಕೂಡ ತೆರೆಯುತ್ತಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಐಐಟಿ ದೆಹಲಿಯ ನಿರ್ದೇಶಕ ವಿ ರಾಮ್ ಗೋಪಾಲ್ ರಾವ್ ಅವರು, ಬೆಂಗಳೂರು ಮೂಲದ ಜೀನೀ ಲ್ಯಾಬೋರೋಟರೀಸ್ ಸಂಸ್ಥೆ ಐಐಟಿ ದೆಹಲಿಯಿಂದ ಅನುಮೋದನೆ ಪಡೆದ ಸಂಸ್ಥೆಯಾಗಿದ್ದು, ನಾವು ತಯಾರಿಸುತ್ತಿರುವ ಕಡಿಮೆ ವೆಚ್ಚದ ಕೋವಿಡ್-19  ಪರೀಕ್ಷೆ ಕಿಟ್ ತಯಾರಿಕೆಯಲ್ಲಿ ಸಹಭಾಗಿತ್ವ ಹೊಂದಿದೆ ಎಂದು ಹೇಳಿದ್ದಾರೆ. ಅಂತೆಯೇ ಈ ವಿಶೇಷ ಕಡಿಮೆ ವೆಚ್ಚದ ಕೋವಿಡ್-19 ಪರೀಕ್ಷೆ ಕಿಟ್ ಅನ್ನು ಪರವಾನಗಿ ರಹಿತವಾಗಿ ನೀಡಲು ನಿರ್ಧರಿಸಲಾಗಿದ್ದು, ಇದರಿಂದ ಯಾರು ಬೇಕಾದರೂ ಈ ಕಿಟ್ ಗಳನ್ನು ಮಾರಾಟ ಮಾಡಬಹುದು  ಇದರಿಂದ ಯಥೇಚ್ಛ ಪ್ರಮಾಣದಲ್ಲಿ ಈ ಕಿಟ್ ಗಳು ಜನರನ್ನು ತಲುಪುತ್ತದೆ ಎಂಬ ವಿಶ್ವಾಸವಿದೆ. ಆದರೆ ಈ ಕಿಟ್ ಗಳನ್ನು ಗರಿಷ್ಠ 500 ರೂಗೆ ಮಾರಾಟ ಮಾಡಬೇಕು ಎನ್ನುವುದು ನಮ್ಮ ಬಯಕೆ. ಹಾಲಿ ಕೊರೋನಾ ಟೆಸ್ಟ್ ಗಳಿಗೆ 3500ರಿಂದ 4500 ರೂ ತಗುಲುತ್ತಿದೆ. ನಮ್ಮ ಈ ಕಿಟ್  ಅತ್ಯಂತ ಕಡಿಮೆ ವೆಚ್ಚದ್ದಾಗಿದೆ. ಆದರೆ ಈ ವರೆಗೂ ನಿಖರ ದರ ನಿಗದಿ ಪಡಿಸಿಲ್ಲ ಎಂದು ಹೇಳಿದ್ದಾರೆ.

ಇನ್ನು ಇದೇ ವಿಚಾರವಾಗಿ ಮಾತನಾಡಿರುವ ಜೀನೀ ಲ್ಯಾಬೋರೋಟರೀಸ್ ಸಂಸ್ಥೆಯ ನಿರ್ವಾಹಕ ನಿರ್ದೇಶಕ ಎಸ್ ಚಂದ್ರಶೇಖರನ್ ಅವರು, ಐಐಟಿ ದೆಹಲಿಯ ತಜ್ಞರೊಂದಿಗೆ ಸಹಭಾಗಿತ್ವ ಹೊಂದಿರುವುದು ನಿಜಕ್ಕೂ ನಮಗೆ ಸಂತಸ ತಂದಿದೆ. ಕೊರೋನಾ ಸಾಂಕ್ರಾಮಿಕದಂತಹ ಈ  ಸಂದರ್ಭದಲ್ಲಿ ಜನರ ಕೈಗೆಟುಕುವ ದರದಲ್ಲಿ ಕೊರೋನಾ ಪರೀಕ್ಷಾ ಕಿಟ್ ಗಳನ್ನು ತಯಾರಿಸಿ ನೀಡುವುದು ನಮ್ಮ ಗುರಿಯಾಗಿದೆ. ಐಐಟಿ ದೆಹಲಿ ವಿಜ್ಞಾನಿಗಳ ತಂತ್ರಗಾರಿಕೆಯಿಂದಾಗಿ ದುಬಾರಿ ಪರೀಕ್ಷಾ ವಿಧಾನ ಕಡಿಮೆ ವೆಚ್ಚದಲ್ಲಿ ಜನರ ಕೈಸೇರುವಂತಾಗುತ್ತಿದೆ. ನಾವು ಈ ಮೂಲಕ  ನಿಖರ ಮತ್ತು ಕೈಗೆಟುಕುವ ದರದ ಕಿಟ್ ತಯಾರಿಸುವ ಗುರಿ ಮತ್ತು ವಿಶ್ವಾಸ ಹೊಂದಿದ್ದೇವೆ ಎಂದು ಹೇಳಿದ್ದಾರೆ. ಅಲ್ಲದೆ ಪರೀಕ್ಷಾ ಕಿಟ್ ಗಳಿಗೆ ಬೇರೆ ದೇಶಗಳ ಮೇಲೆ ಆಧಾರವಾಗದೇ ಮೇಕ್ ಇನ್ ಇಂಡಿಯಾ ಅಡಿಯಲ್ಲೇ ನಾವೇ ಕಿಟ್ ಗಳ ತಯಾರಿಸುತ್ತಿರುವುದು ಹೆಮ್ಮೆಯ ಸಂಗತಿ  ಎಂದು ಹೇಳಿದ್ದಾರೆ.

ಅಂತೆಯೇ ಅಂತಿಮ ರೂಪದಲ್ಲಿ ನಾವು 2 ಬಗೆಯ ಕಿಟ್ ಗಳನ್ನು ತಯಾರಿಸುವ ಗುರಿ ಹೊಂದಿದ್ದು, ಆಂಧ್ರ ಪ್ರದೇಶದ ಮೆಡ್ ಟೆಕ್ ಝೋನ್ (AMTZ)ನಲ್ಲಿನ ವಿಶೇಷ ಘಟಕದಲ್ಲಿ ಜೂನ್ ಮೊದಲ ವಾರದಲ್ಲಿ ಈ ಕಿಟ್ ಬಳಕೆಗೆ ಸಿದ್ಧವಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಅಲ್ಲದೆ ಐಐಟಿ  ದೆಹಲಿ ಮತ್ತು ಜೀನೀ ಲ್ಯಾಬೋರೇಟರೀಸ್ ನ ಸಹಭಾಗಿತ್ವದ ಈ ಪರೀಕ್ಷಾ ಕಿಟ್ ಗೆ ಐಸಿಎಂಆರ್ ಕೂಡ ಅನುಮೋದನೆ ನೀಡಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com