ಕಳೆದ ಹೋಗಿದ್ದ ಮಕ್ಕಳನ್ನು ಮನೆ ಸೇರುವಂತೆ ಮಾಡಿದ ಲಾಕ್ ಡೌನ್!

ಕೊರೋನಾ ವೈರಸ್ ನಿಯಂತ್ರಿಸುವುದಕ್ಕಾಗಿ ದೇಶಾದ್ಯಂತ ಲಾಕ್ ಡೌನ್ ಜಾರಿಗೊಳಿಸಿದ್ದರಿಂದ ಕೋಟ್ಯಾಂತರ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ ಲಾಕ್ ಡೌನ್ ಚತ್ತೀಸ್‌ಗಢ ಮತ್ತು ಮಧ್ಯಪ್ರದೇಶದ ಎರಡು ಕುಟುಂಬಗಳಿಗೆ ಭರ್ಜರಿ ಗಿಫ್ಟ್ ನೀಡಿದ್ದು, ಹಲವು ವರ್ಷಗಳ ನಂತರ ಕಳೆದುಹೋಗಿದ್ದ ಅವರ ಮಕ್ಕಳು ಮತ್ತೆ ಮನೆ ಸೇರುವಂತೆ ಮಾಡಿದೆ.
ಉದಯ್ ಆದಿವಾಸಿ
ಉದಯ್ ಆದಿವಾಸಿ

ಭೋಪಾಲ್: ಕೊರೋನಾ ವೈರಸ್ ನಿಯಂತ್ರಿಸುವುದಕ್ಕಾಗಿ ದೇಶಾದ್ಯಂತ ಲಾಕ್ ಡೌನ್ ಜಾರಿಗೊಳಿಸಿದ್ದರಿಂದ ಕೋಟ್ಯಾಂತರ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ ಲಾಕ್ ಡೌನ್ ಚತ್ತೀಸ್‌ಗಢ ಮತ್ತು ಮಧ್ಯಪ್ರದೇಶದ ಎರಡು ಕುಟುಂಬಗಳಿಗೆ ಭರ್ಜರಿ ಗಿಫ್ಟ್ ನೀಡಿದ್ದು, ಹಲವು ವರ್ಷಗಳ ನಂತರ ಕಳೆದುಹೋಗಿದ್ದ ಅವರ ಮಕ್ಕಳು ಮತ್ತೆ ಮನೆ ಸೇರುವಂತೆ ಮಾಡಿದೆ.

ಮಧ್ಯ ಪ್ರದೇಶದ ಛತ್ತರ್ ಪುರ ಜಿಲ್ಲೆಯ ದೆಲರಿ ಗ್ರಾಮದ ಬುಡಕಟ್ಟು ಕುಟುಂಬಕ್ಕೆ ಸೇರಿದ 16 ವರ್ಷದ ಉದಯ್ ಆದಿವಾಸಿ ಸೋಮವಾರ ಮನೆಗೆ ಮರಳಿದ್ದಾನೆ. ಉದಯ್ 2017ರಲ್ಲಿಯೇ ನಾಪತ್ತೆಯಾಗಿದ್ದ. ಉದಯ್ ತಂದೆ ನೀಡಿದ್ದ ದೂರಿನ ಆಧಾರದ ಮೇಲೆ ಸ್ಥಳೀಯ ಪೊಲೀಸರು ಅಪಹರಣ ಕೇಸ್ ಸಹ ದಾಖಲಿಸಿಕೊಂಡಿದ್ದರು. ಆದರೆ ಕೆಲವು ದಿನಗಳ ನಂತರ ಅರಣ್ಯ ಪ್ರದೇಶದಲ್ಲಿ ಮಾನವ ಅಸ್ಥಿಪಂಜರವೊಂದು ಪತ್ತೆಯಾಗಿತ್ತು. ಇದು ಉದಯ್ ಮೃತದೇಹವೇ ಇರಬೇಕು ಎಂದು ಭಾವಿಸಿ ಕುಟುಂಬಸ್ಥರು ಆತನ ಅಂತ್ಯಸಂಸ್ಕಾರ ಸಹ ನಡೆಸಿದ್ದರು.

ಆದರೆ ಉದಯ್ ಮೃತಪಟ್ಟಿರಲಿಲ್ಲ. ಆತ ದೆಹಲಿ ಮತ್ತು ಗುರುಗ್ರಾಮಕ್ಕೆ ತೆರಳಿ ಅಂಗಡಿ ಮತ್ತು ಹೋಟೆಲ್ ಗಳಲ್ಲಿ ಕೆಲಸ ಮಾಡಿಕೊಂಡಿದ್ದ. ಅಲ್ಲದೆ ಈ ವರ್ಷ ಹೋಳಿ ಹಬ್ಬಕ್ಕೂ ಮುನ್ನ ತನ್ನ ತಂದೆ ಭಗೋಲ ಆದಿವಾಸಿಗೆ ಒಂದು ಬಾರಿ ಫೋನ್ ಸಹ ಮಾಡಿದ್ದನು. ಆದರೆ ತಂದೆ ನೀನು ಸುಳ್ಳು ಹೇಳುತ್ತಿದ್ದಿಯಾ, ನನ್ನ ಮಗ ಮೂರು ವರ್ಷಗಳ ಹಿಂದೆಯೇ ಮೃತಪಟ್ಟಿದ್ದಾನೆ ಎಂದು ಭೋಗಲ ಹೇಳಿರುವುದಾಗಿ ಪೊಲೀಸ್ ಉಪ ವಿಭಾಗೀಯ ಅಧಿಕಾರಿ ಸೀತಾರಾಮ ಅಸವಾ ಅವರು ತಿಳಿಸಿದ್ದಾರೆ.

ಲಾಕ್ ಡೌನ್ ಪರಿಣಾಮ ಕೆಲಸ ಕಳೆದುಕೊಂಡ ಉದಯ್, ವಾಪಸ್ ಊರಿಗೆ ಹೋಗಲು ನಿರ್ಧರಿಸಿ, ಇತರೆ ವಲಸೆ ಕಾರ್ಮಿಕರೊಂದಿಗೆ ಸೋಮವಾರ ಮನೆಗೆ ಬಂದಿದ್ದಾನೆ. ಈ ಹಿಂದೆ ಉದಯ್ ಕುಟುಂಬ ಅಂತ್ಯ ಸಂಸ್ಕಾರ ನಡೆಸಿದ ಅಸ್ಥಿಪಂಜರ ಯಾರದ್ದು ಎಂಬುದರ ಬಗ್ಗೆ ತನಿಖೆ ನಡೆಸುವುದಾಗಿ ಸೀತಾರಾಮ ಹೇಳಿದ್ದಾರೆ.

ಇಂತಹದ್ದೆ ಮತ್ತೊಂದು ಘಟನೆ ಛತ್ತೀಸಗ್ ಢದಲ್ಲಿ ನಡೆದಿದ್ದು, ಕೊರ್ಬಾ ಜಿಲ್ಲೆಯಿಂದ 10 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ 25 ವರ್ಷದ ಯುವಕ ಈಗ ಲಾಕ್ ಡೌನ್ ಪರಿಣಾಮ ಮನಗೆ ವಾಪಸ್ ಆಗಿದ್ದಾನೆ.

ಕಳೆದ ತಿಂಗಳು, ಮಹಾರಾಷ್ಟ್ರ ಮಧ್ಯ ಪ್ರದೇಶ, ಉತ್ತರ ಪ್ರದೇಶ ಮತ್ತು ಇತರ ರಾಜ್ಯಗಳಿಂದ ಟ್ರಕ್ ಗಳಲ್ಲಿ ಹಿಂದಿರುಗಿದ ವಲಸೆ ಕಾರ್ಮಿಕರಲ್ಲಿ ಛತ್ತೀಸ್ ಗಢದ 25 ವರ್ಷದ ಲಕ್ಷ್ಮಿ ದಾಸ್ ಮಾಣಿಕ್ಪುರಿ ಕೂಡ ಇದ್ದರು. ಅವರ ಗುರುತಿನ ಬಗ್ಗೆ ಮಹಾರಾಷ್ಟ್ರ- ಮಧ್ಯ ಪ್ರದೇಶ ಗಡಿಯ ಬಾರ್ವಾನಿ ಜಿಲ್ಲೆಯ ಅಧಿಕಾರಿಗಳನ್ನು ಪ್ರಶ್ನಿಸಿದಾಗ, ದಾಸ್ ಅವರು 'ಮಾಲಾತು ಉರಾವ್' ನನ್ನ ಉಪನಾಮ ಎಂದು ಒಂದು ಕಾಗದದ ಮೇಲೆ ಬರೆದುಕೊಟ್ಟಿದ್ದಾರೆ.

ದಾಸ್ ಉಪನಾಮ ಛತ್ತೀಸ್‌ಗಢದಲ್ಲಿ ವಾಸಿಸುವ ಜನರ ಉಪನಾಮಗಳನ್ನು ಹೋಲುತ್ತಿದ್ದರಿಂದ ಅಧಿಕಾರಿಗಳು ಛತ್ತೀಸ್ ಗಢದಲ್ಲಿ ಯುವಕನ ಕುಟುಂಬಕ್ಕಾಗಿ ಹುಡುಕಾಟವನ್ನು ಪ್ರಾರಂಭಿಸಿದರು. ಸುಮಾರು ಎರಡು ವಾರಗಳ ನಂತರ ಛತ್ತೀಸ್ ಗಢದ ಕೊರ್ಬಾ ಜಿಲ್ಲೆಯಲ್ಲಿ ಆತನ ಕುಟಂಬ ಪತ್ತೆಯಾಗಿದೆ.

ಅಧಿಕಾರಿಗಳು ಯುವಕನ ತಂದೆ ಇಟ್ವಾರಿ ದಾಸ್ ಅವರಿಗೆ ಲಕ್ಷ್ಮಿ ದಾಸ್ ಅವರ ಚಿತ್ರಗಳನ್ನು ಕಳುಹಿಸಿದ್ದಾರೆ. ಒಂದು ದಶಕದ ಹಿಂದೆ ನಾಪತ್ತೆಯಾದ ತನ್ನ ಮಗ ಲಕ್ಷ್ಮಿ ದಾಸ್ ಮಾಣಿಕ್ಪುರಿಯನ್ನು ಮತ್ತು ಆತನ ಮಾತಿನ ದುರ್ಬಲತೆಯನ್ನು ಅವರು ತಕ್ಷಣ ಗುರುತಿಸಿದರು.

ಮೇ 9 ರಂದು, ಇಟ್ವಾರ್ ದಾಸ್ ಬಾರ್ವಾನಿಗೆ ಬಂದರು, ಅಲ್ಲಿ ಅವರು ಕಳೆದುಹೋದ ಮಗ ಲಕ್ಷ್ಮಿ ದಾಸ್ ಅವರೊಂದಿಗೆ ಮತ್ತೆ ಒಂದಾದರು ಮತ್ತು ದಶಕದ ನಂತರ ತಂದೆ ಮತ್ತು ಮಗನ ಕಣ್ಣೀರಿನ ಪುನರ್ಮಿಲನವು ಎಲ್ಲರ ಕಣ್ಣಲ್ಲಿ ನೀರು ತರಿಸಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com