ಮದುವೆಯಾಗಲು ಒಡಿಶಾದಿಂದ ಪಶ್ಚಿಮ ಬಂಗಾಳಕ್ಕೆ ಹೋಗಿ ಹುಡುಗಿ ಜೊತೆ ಕೊರೋನಾ ತಗಲಿಸಿಕೊಂಡು ಬಂದ ಯುವಕ!

ಕೊರೋನಾ ವೈರಸ್ ಸೋಂಕಿನ ಭೀತಿಯ ನಡುವೆ ಮದುವೆಯಾದ ಇಬ್ಬರು ಜೋಡಿಗಳ ಕಥೆಯಿದು. ಕೊರೋನಾ ಸೋಂಕು ವ್ಯಾಪಿಸಿ ಹಾಟ್ ಸ್ಪಾಟ್ ಎನಿಸಿದ್ದ ನೆರೆಯ ಪಶ್ಚಿಮ ಬಂಗಾಳದ ಪೂರ್ವ ಮೇದಿನೀಪುರ ಜಿಲ್ಲೆಯ ಹುಡುಗಿಯನ್ನು ಒಡಿಶಾದ ಭುವನೇಶ್ವರದ ಹುಡುಗ ಕಳೆದ ಕೆಲ ತಿಂಗಳುಗಳಿಂದ ಪ್ರೀತಿಸುತ್ತಿದ್ದ.
ಗ್ರಾಮವನ್ನು ಕಂಟೈನ್ ಮೆಂಟ್ ಪ್ರದೇಶ ಎಂದು ಘೋಷಿಸಿ ಪೊಲೀಸರು ಬ್ಯಾರಿಕೇಡ್ ಹಾಕಿರುವುದು
ಗ್ರಾಮವನ್ನು ಕಂಟೈನ್ ಮೆಂಟ್ ಪ್ರದೇಶ ಎಂದು ಘೋಷಿಸಿ ಪೊಲೀಸರು ಬ್ಯಾರಿಕೇಡ್ ಹಾಕಿರುವುದು

ಭುವನೇಶ್ವರ್: ಕೊರೋನಾ ವೈರಸ್ ಸೋಂಕಿನ ಭೀತಿಯ ನಡುವೆ ಮದುವೆಯಾದ ಇಬ್ಬರು ಜೋಡಿಗಳ ಕಥೆಯಿದು. ಕೊರೋನಾ ಸೋಂಕು ವ್ಯಾಪಿಸಿ ಹಾಟ್ ಸ್ಪಾಟ್ ಎನಿಸಿದ್ದ ನೆರೆಯ ಪಶ್ಚಿಮ ಬಂಗಾಳದ ಪೂರ್ವ ಮೇದಿನೀಪುರ ಜಿಲ್ಲೆಯ ಹುಡುಗಿಯನ್ನು ಒಡಿಶಾದ ಭುವನೇಶ್ವರದ ಹುಡುಗ ಕಳೆದ ಕೆಲ ತಿಂಗಳುಗಳಿಂದ ಪ್ರೀತಿಸುತ್ತಿದ್ದ.

ಮದುವೆಯಾಗುವ ತವಕದಿಂದ ಸಾಹಸ ಮಾಡಿ ಹುಡುಗಿಯ ಗ್ರಾಮಕ್ಕೆ ಹೋಗಿ ಮದುವೆಯಾಗಿ ಬಂದ ಮೇಲೆ ಮೂರು ವಾರ ಕಳೆದ ನಂತರ ಕೊರೋನಾ ಸೋಂಕು ತಗುಲಿದೆ. ಇದೀಗ ಇಡೀ ಕುಟುಂಬದ ಸಂತೋಷ ಕ್ಷಣಾರ್ಧದಲ್ಲಿ ಕರಗಿ ಹೋಗಿದೆ. ಆತನ ಪತ್ನಿ ಮತ್ತು ನಾದಿನಿಗೆ ಸದ್ಯ ಕೊರೋನಾ ನೆಗೆಟಿವ್ ಎಂದು ವರದಿ ಬಂದಿದೆ.

ಏನಾಯ್ತು: ಒಡಿಶಾದ ಬೊಗರೈ ಬ್ಲಾಕ್ ನ ಪಲಸಿಯಾ ಗ್ರಾಮದ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ 27 ವರ್ಷದ ಯುವಕ ದೇಶಾದ್ಯಂತ ಲಾಕ್ ಡೌನ್ ಘೋಷಣೆಯಾಗುವುದಕ್ಕೆ ಮೊದಲು ಊರಿಗೆ ತೆರಳಿದ್ದ. ಆತನ ಮದುವೆ ಏಪ್ರಿಲ್ 17ಕ್ಕೆ ನಿಶ್ಚಯವಾಗಿತ್ತು. ಸೋಷಿಯಲ್ ಮೀಡಿಯಾದಲ್ಲಿ ಪರಿಚಯವಾದ ಹುಡುಗಿಯನ್ನು ಪ್ರೀತಿಸಿ ವಿವಾಹವಾಗಿದ್ದ.

ಲಾಕ್ ಡೌನ್ ಘೋಷಣೆ ಮಾಡಿದ್ದ ಸಂದರ್ಭದಲ್ಲಿ ಸರ್ಕಾರ ಜನರು ಸಾಮಾಜಿಕವಾಗಿ ಒಟ್ಟಿಗೆ ಸೇರುವುದಕ್ಕೆ ಸಹ ತಡೆ ತಂದಿತ್ತು. ಮದುವೆ, ಮುಂಜಿಯಂತಹ ಶುಭ ಸಮಾರಂಭಗಳು, ಹೆಚ್ಚು ಜನ ಸೇರುವ ಸಭೆ, ಸಮಾರಂಭಗಳಿಗೆ ಬ್ರೇಕ್ ಹಾಕಿತ್ತು.

ಆದರೆ ಈ ಯುವಕ ಸರ್ಕಾರದ ನಿಯಮಗಳನ್ನು ಮೀರಿ 16 ಬೈಕ್ ಗಳಲ್ಲಿ 30 ಬರಾಟಿಗಳನ್ನು ತಂದು ಪಶ್ಚಿಮ ಬಂಗಾಳದಲ್ಲಿರುವ ಹುಡುಗಿಯ ಮನೆಯಲ್ಲಿ ವಿವಾಹವಾಗಿದ್ದ. ಮದುವೆಯಾದ ನಂತರ ಪತ್ನಿ ಮತ್ತು ನಾದಿನಿಯನ್ನು ತನ್ನ ಮನೆಗೆ ಕರೆದುಕೊಂಡು ಹೋಗಿದ್ದ. ಸ್ಥಳೀಯ ಆರೋಗ್ಯ ಕಾರ್ಯಕರ್ತರು ಮತ್ತು ಸರ್ಕಾರಿ ಅಧಿಕಾರಿಗಳಿಗೆ ಮಾಹಿತಿ ನೀಡದೆ ವಿವಾಹವಾಗಿದ್ದ.

ಮದುವೆ ಮಾಡಿಕೊಳ್ಳಲೆಂದು ಹೋಗಿ ಸೋಂಕು ತಗಲಿಸಿಕೊಂಡು ಬಂದ: ಇಲ್ಲಿ ಯುವಕ-ಯುವತಿ ಮನೆ ಇರುವುದು ಪಶ್ಚಿಮ ಬಂಗಾಳ ಮತ್ತು ಒಡಿಶಾದ ಗಡಿಭಾಗದಲ್ಲಿ 9 ಕಿಲೋ ಮೀಟರ್ ಅಂತರದಲ್ಲಿ. ಮದುವೆಯಾಗುವ ಹುಮ್ಮಸ್ಸಿನಲ್ಲಿ ಮುಖ್ಯ ಮಾರ್ಗದಲ್ಲಿ ಹೋಗದೆ ಪೊಲೀಸ್ ಅಧಿಕಾರಿಗಳ ಕಣ್ತಪ್ಪಿಸಿ ಹತ್ತಿರದ ಕಿರುದಾರಿಯಲ್ಲಿ ಹೋಗಿ ಹಳ್ಳಿ ಮೂಲಕ ಹುಡುಗಿಯ ಮನೆ ಸೇರಿದ್ದ.

ಮದುವೆಯಾಗಿ ಮನೆಗೆ ಬಂದ ನಂತರ ನೆರೆಹೊರೆಯವರು ಆಶಾ ಕಾರ್ಯಕರ್ತರಿಗೆ ಹೇಳಿದಾಗಲೇ ವಿಷಯ ಬಹಿರಂಗವಾಗಿದ್ದು. ಪ್ರಯಾಣ ಮಾಡಿದ್ದರಿಂದ ಆರೋಗ್ಯ ಕಾರ್ಯಕರ್ತರು ಇತ್ತೀಚೆಗೆ ಯುವಕನ, ಆತನ ಪತ್ನಿ ಮತ್ತು ನಾದಿನಿಯ ಗಂಟಲು ದ್ರವ ಪರೀಕ್ಷೆ ಮಾಡಿಸಿದಾಗ ಯುವಕನಲ್ಲಿ ಕೊರೋನಾ ಪಾಸಿಟಿವ್ ಬಂತು.

ವಿಷಯ ಇಡೀ ಗ್ರಾಮಕ್ಕೆ ಸುದ್ದಿಯಾದಾಗ ಇದೀಗ ಮದುವೆ ಕಾರ್ಯಕ್ರಮಕ್ಕೆ ಬಂದಿದ್ದವರು ಭಯದಿಂದ ಸ್ವಯಂ ಪ್ರೇರಿತವಾಗಿ ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ದಾರೆ. ಸುಮಾರು 160 ಜನರ ಜೊತೆ ಯುವಕನ ಸಂಪರ್ಕ ಸಾಧ್ಯತೆಯಾಗಿರುವ ಸಾಧ್ಯತೆಯಿದ್ದು ಅವರ ಗಂಟಲು ದ್ರವ ಮಾದರಿಯನ್ನು ತೆಗೆದು ಪರೀಕ್ಷೆಗೆ ಕಳುಹಿಸಲಾಗಿದೆ.

ಯುವಕನ ತಂದೆ ಹೃದಯ ಖಾಯಿಲೆ ವ್ಯಕ್ತಿ. ತಂದೆ-ತಾಯಿಯನ್ನು ಸಹ ಪರೀಕ್ಷೆಗೊಳಪಡಿಸಲಾಗಿದ್ದು ಅವರ ವರದಿ ಇಂದು ಸಿಗಬೇಕಿದೆ ಎಂದು ಬಲಸೊರೆ ಸಬ್ ಇನ್ಸ್ ಪೆಕ್ಟರ್ ನಿಲು ಮೊಹಪಾತ್ರ ತಿಳಿಸಿದ್ದು ಈ ಪ್ರದೇಶವನ್ನು ಕಂಟೈನ್ ಮೆಂಟ್ ಪ್ರದೇಶ ಎಂದು ಘೋಷಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com