ನಾಳೆ ಒಡಿಶಾ, ಬಂಗಾಳ ಕಡಲತೀರಕ್ಕೆ ಅಪ್ಪಳಿಸಲಿದೆ ಅಂಫಾನ್ ಚಂಡಮಾರುತ: ಹವಾಮಾನ ಇಲಾಖೆ ಮಾಹಿತಿ

ತೀವ್ರ ಸ್ವರೂಪ ಪಡೆದಿರುವ ಅಂಫಾನ್ ಚಂಡಮಾರುತ ನಾಳೆ ಅಂದರೆ ಬುಧವಾರ ಪಶ್ಚಿಮ ಬಂಗಾಳ ಮತ್ತು ಒಡಿಶಾ ಕಡಲ ತೀರಕ್ಕೆ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಅಂಫಾನ್ ಚಂಡಮಾರುತ
ಅಂಫಾನ್ ಚಂಡಮಾರುತ

ನವದೆಹಲಿ: ತೀವ್ರ ಸ್ವರೂಪ ಪಡೆದಿರುವ ಅಂಫಾನ್ ಚಂಡಮಾರುತ ನಾಳೆ ಅಂದರೆ ಬುಧವಾರ ಪಶ್ಚಿಮ ಬಂಗಾಳ ಮತ್ತು ಒಡಿಶಾ ಕಡಲ ತೀರಕ್ಕೆ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಪೂರ್ವ ಕರಾವಳಿಯ ಪಶ್ಚಿಮ ಬಂಗಾಳ ಹಾಗೂ ಒಡಿಶಾ ರಾಜ್ಯಗಳಿಗೆ ಅಂಫಾನ್‌ ಚಂಡಮಾರುತದ ಆತಂಕ ಹೆಚ್ಚಿದ್ದು, ಸಮುದ್ರ ಭಾಗದಿಂದ ಭೂಪ್ರದೇಶದ ಮೇಲೆ ಚಂಡಮಾರುತ ಬುಧವಾರ ಪ್ರಭಾವ ಬೀರಲಿದೆ. ಅಂಫಾನ್‌ ತೀವ್ರ ಸ್ವರೂಪದ ಚಂಡಮಾರುತವಾಗಿ ಬದಲಾಗಿದ್ದು,  ಬಂಗಾಳ ಕೊಲ್ಲಿ ಭಾಗದಲ್ಲಿ ಕಳೆದ ಎರಡು ದಶಕಗಳಲ್ಲೇ ಇದೇ ಮೊದಲ ಬಾರಿಗೆ ಭಾರಿ ತೀವ್ರತೆಯ ಚಂಡಮಾರುತ ಅಪ್ಪಳಿಸುತ್ತಿದೆ. ಬಿರುಸಾದ ಗಾಳಿಯೊಂದಿಗೆ ಗಂಟೆಗೆ ಸುಮಾರು 200 ಕಿ.ಮೀ ವೇಗದೊಂದಿಗೆ ಚಂಡಮಾರುತ ಧಾವಿಸುತ್ತಿದೆ ಎಂದು ಎಂದು ಹವಾಮಾನ ಇಲಾಖೆ  ಎಚ್ಚರಿಕೆ ನೀಡಿದೆ. 

ಅಂಫಾನ್‌ ಚಂಡಮಾರುತ ಕರಾವಳಿಯ ಅಂಚಿನಲ್ಲಿರುವ ಪಶ್ಚಿಮ ಬಂಗಳಾದ ದಿಂಘಾದಿಂದ ಸುಮಾರು 750 ಕಿ.ಮೀ. ದೂರ ಹಾಗೂ ಒಡಿಶಾದ ಪಾರಾದಿಪ್‌ನಿಂದ ಸುಮಾರು 600 ಕಿ.ಮೀ. ದೂರದಲ್ಲಿರುವುದಾಗಿ ಹವಾಮಾನ ಇಲಾಖೆ ಸೋಮವಾರ ರಾತ್ರಿ ಮಾಹಿತಿ ಪ್ರಕಟಿಸಿದೆ.  ಬುಧವಾರ ಸಂಜೆ ಬಾಂಗ್ಲಾದೇಶದ ಹಾತಿಯಾ ದ್ವೀಪ ಪ್ರದೇಶ ಮತ್ತು ಪಶ್ಚಿಮ ಬಂಗಾಳದ ದಿಂಘಾ ನಡುವೆ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇರುವುದಾಗಿ ಹೇಳಿದೆ. ಇದು ಬೆಳಿಗ್ಗೆ ನೀಡಿರುವ ಹೊಸ ಎಚ್ಚರಿಕೆ ಸಂದೇಶದಲ್ಲಿ ಪಶ್ಚಿಮ ಬಂಗಾಳದ ಕಡೆಗೆ ನುಗ್ಗುತ್ತಿರುವುದಾಗಿ ತಿಳಿಸಿದ್ದು,  ತೀವ್ರ ಸ್ವರೂಪದ ಚಂಡಮಾರುತ ಉಂಟಾಗಲಿದೆ ಎಂದು ಹೇಳಿದೆ. 

ಮೇ 19 ಮತ್ತು 20ರಂದು ಒಡಿಶಾದ ಹಲವು ಭಾಗಗಳಲ್ಲಿ ಭಾರೀ ಮಳೆ ಹಾಗೂ ಬಿರುಸಾದ ಗಾಳಿ ಉಂಟಾಗಲಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ. ರೈಲ್ವೆ ಮತ್ತು ರಸ್ತೆ ಸಂಪರ್ಕಕ್ಕೆ ಹಾನಿಯಾಗುವ ಸಾಧ್ಯತೆ ಹೆಚ್ಚಿದೆ. ಕೋವಿಡ್‌–19 ಲಾಕ್‌ಡೌನ್‌ನಿಂದ ರೈಲು ಸಂಚಾರ  ಮತ್ತು ವಾಹನಗಳ ಸಂಚಾರ ಕಡಿಮೆ ಇರುವುದರಿಂದ ಮನುಷ್ಯರ ಮೇಲೆ ಹಾನಿಯ ಪ್ರಮಾಣ ಕಡಿಮೆ ಇರಲಿದೆ ಎನ್ನಲಾಗಿದೆ. ಹವಾಮಾನ ಇಲಾಖೆ ಉಭಯ ರಾಜ್ಯಗಳ ಕರಾವಳಿಯಲ್ಲಿ ಆರೆಂಜ್‌ ಅಲರ್ಟ್‌ ಘೋಷಿಸಿದೆ. ಬಂಗಾಳ ಕೊಲ್ಲಿ ಮೂಲಕ ಹಾದು ಬರುತ್ತಿರುವ ಎರಡನೇ ತೀವ್ರ  ಸ್ವರೂಪದ ಚಂಡಮಾರುತ ಇದಾಗಿದೆ. 1999ರಲ್ಲಿ ಬೀಸಿದ ಚಂಡಮಾರುತ ಒಡಿಶಾದಲ್ಲಿ ಸಾಕಷ್ಟು ಹಾನಿ ಉಂಟು ಮಾಡುವ ಜೊತೆಗೆ ಸುಮಾರು 10,000 ಜನರು ಸಾವಿಗೀಡಾಗಿದ್ದರು. 

ಕೇಂದ್ರ ಗೃಹ ಸಚಿವಾಲಯದ ಕಾರ್ಯದರ್ಶಿ ಅಜಯ್‌ ಭಲ್ಲಾ ಅವರು ಪಶ್ಚಿಮ ಬಂಗಾಳ ಮತ್ತು ಒಡಿಶಾದ ಮುಖ್ಯ ಕಾರ್ಯದರ್ಶಿಗಳೊಂದಿಗೆ ಚಂಡಮಾರುತದ ಪರಿಣಾಮ ಎದುರಿಸಲು ಸಿದ್ಧತೆಯ ಕುರಿತು ಮಾತುಕತೆ ನಡೆಸಿದ್ದು, ಎರಡೂ ರಾಜ್ಯದ ಕರಾವಳಿ ಭಾಗದಲ್ಲಿ ರಾಷ್ಟ್ರೀಯ ವಿಪತ್ತು  ನಿರ್ವಹಣಾ ಪಡೆಯ (ಎನ್‌ಡಿಆರ್‌ಎಫ್‌)  37 ತಂಡಗಳನ್ನು ನಿಯೋಜಿಸಿರುವುದಾಗಿ ಎನ್‌ಡಿಆರ್‌ಎಫ್ ಮುಖ್ಯಸ್ಥ ಎಸ್‌.ಎನ್‌.ಪ್ರಧಾನ್‌ ಹೇಳಿದ್ದಾರೆ. ಇನ್ನು ಒಡಿಶಾ ಸರ್ಕಾರ 11 ಲಕ್ಷದಿಂದ 12 ಲಕ್ಷ ಜನರನ್ನು ಸ್ಥಳಾಂತರಿಸಲು ಸಜ್ಜಾಗಿರುವುದಾಗಿ ತಿಳಿಸಿದೆ. 

ನಿನ್ನೆಯಷ್ಟೇ ಪರಿಸ್ಥಿತಿ ಎದುರಿಸಲು ಕೈಗೊಂಡಿರುವ ಸಿದ್ಧತೆ ಕುರಿತು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಗೃಹ ಸಚಿವ ಅಮಿತ್‌ ಶಾ ಹಾಗೂ ಸರ್ಕಾರದ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪರಾಮರ್ಶಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com