ಪಶ್ಚಿಮ ಬಂಗಾಳದಲ್ಲಿ ಅಂಫಾನ್ ಚಂಡಮಾರುತಕ್ಕೆ 12 ಮಂದಿ ಸಾವು; ಕೋಲ್ಕಾತಾ ಏರ್'ಪೋರ್ಟ್'ನಲ್ಲಿ ವಿಮಾನ ಹಾರಾಟ ಪುನರಾರಂಭ

ಬಂಗಾಳ ಕೊಲ್ಲಿಯಲ್ಲಿ ಅಂಫಾನ್ ಸೈಕ್ಲೋನ್ ರೌದ್ರನರ್ತನ ತಾಳಿದ್ದು, ಚಂಡಮಾರುಕ್ಕೆ ಈಗಾಗಲೇ ಪಶ್ಚಿಮ ಬಂಗಾಳದಲ್ಲಿ 12 ಮಂದಿ ಬಲಿಯಾಗಿದ್ದಾರೆ. 
ವಿಮಾನ ನಿಲ್ದಾಣದ ಬಳಿ ನೀರು ತುಂಬಿ ಕೊಂಡಿರುವುದು
ವಿಮಾನ ನಿಲ್ದಾಣದ ಬಳಿ ನೀರು ತುಂಬಿ ಕೊಂಡಿರುವುದು

ಕೋಲ್ಕತಾ; ಬಂಗಾಳ ಕೊಲ್ಲಿಯಲ್ಲಿ ಅಂಫಾನ್ ಸೈಕ್ಲೋನ್ ರೌದ್ರನರ್ತನ ತಾಳಿದ್ದು, ಚಂಡಮಾರುಕ್ಕೆ ಈಗಾಗಲೇ ಪಶ್ಚಿಮ ಬಂಗಾಳದಲ್ಲಿ 12 ಮಂದಿ ಬಲಿಯಾಗಿದ್ದಾರೆ. 

ಕೊರೋನಾ ನಡುವಲ್ಲೇ ಅಂಫಾನ್ ಚಂಡಮಾರುತ ಪಶ್ಚಿಮ ಬಂಗಾಳದಲ್ಲಿ ಅಬ್ಬರಿಸುತ್ತಿದ್ದು, ಗಂಟೆಗೆ ಸುಮಾರು 185 ಕಿಮೀ ವೇಗದಲ್ಲಿ ಪ್ರಬವಾದ ಬಿರುಗಾಳಿ ಬೀಸುತ್ತಿದೆ. ಅಲ್ಲದೆ, ಭಾರೀ ಮಳೆಗೆ ಸಾವಿರಾರು ಮನೆಗಳು ಸಂಪೂರ್ಣವಾಗಿ ನಾಶಗೊಂಡಿದ್ದು, ಈ ನಡುವಲ್ಲೇ ಪೂರ್ವ ಮಿಡ್ನಾಪೋರ್, ದಕ್ಷಿಣದ 24 ಪರಗಣ ಮತ್ತು ಉತ್ತರದ 24 ಪರಗಣ ಜಿಲ್ಲೆಗಳಲ್ಲಿ ಸಾವಿರಾರು ಎಕರೆ ಕೃಷಿ ಭೂಮಿ ನಾಶಗೊಂಡಿದೆ. 

ಈ ಎಲ್ಲಾ ಬೆಳವಣಿಗೆಗಳ ನಡುವಲ್ಲೇ ಟಾಸ್ಕ್ ಫೋರ್ಸ್ ಜೊತೆಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಸಭೆ ನಡೆಸಿ ಮಾತುಕತೆ ನಡೆಸಿದ್ದು, ಚಂಡಮಾರುತದಿಂದ ಎದುರಾಗಿರುವ ನಷ್ಟ ಹಾಗೂ ಮುಂದೆ ತೆಗೆದುಕೊಳ್ಳಬೇಕಾದಂತ ಕ್ರಮಗಳ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ. 

ಬಂಗಾಳದಲ್ಲಿ ಎದುರಾಗಿರುವ ಕೊರೋನಾ ಸಾಂಕ್ರಾಮಿಕ ರೋಗಕ್ಕಿಂತಲೂ ಚಂಡಮಾರುತದ ದುರಂತವೇ ದೊಡ್ಡದಾಗಿದೆ. 5 ಲಕ್ಷ ಜನರನ್ನು ಸ್ಥಳಾಂತರ ಮಾಡದೇ ಹೋಗಿದ್ದರೆ, ಪರಿಸ್ಥಿತಿ ಏನಾಗುತ್ತಿತ್ತು ಎಂಬುದನ್ನು ಊಹಿಸುವುದಕ್ಕೂ ಕಷ್ಟವಾಗುತ್ತದೆ. ಚಂಡಮಾರುತದಿಂದ ಎದುರಾಗಿರುವ ನಷ್ಟ ಇನ್ನೂ ತಿಳಿದುಬಂದಿಲ್ಲ. ರೂ.1 ಲಕ್ಷ ಕೋಟಿ ಎಂದು ಅಂದಾಜಿಸಲಾಗಿದೆ. ನಮಗೆ ಎಲ್ಲರ ಸಹಕಾರ ಬೇಕಿದೆ. ರಾಜಕೀಯ ವಿಚಾರಗಳನ್ನು ಪಕ್ಕಕ್ಕಿಟ್ಟು ರಾಜ್ಯಕ್ಕೆ ಆರ್ಥಿಕ ಸಹಾಯ ಮಾಡುವಂತೆ ಕೇಂದ್ರದ ಬಳಿ ಮನವಿ ಮಾಡಿಕೊಳ್ಳಲಾಗುತ್ತದೆ. 

ಚಂಡಮಾರುತದ ಅಬ್ಬಕ್ಕೆ 75,000ಕ್ಕೂ ಹೆಚ್ಚು ಜನರು ಇದೀಗ ನಿರ್ಗತಿಕರಾಗಿದ್ದು, ಸಹಾಯಕ್ಕಾಗಿ ಅಂಗಲಾಚುತ್ತಿದ್ದಾರೆ. ನಿರಾಶ್ರಿತ ಕೇಂದ್ರಗಳಲ್ಲಿರುವ ಜನರಿಗೆ ಸೂಕ್ತ ರೀತಿಯ ಆಹಾರ ಹಾಗೂ ಸೌಲಭ್ಯಗಳನ್ನು ಒದಗಿಸಬೇಕು. ರಸ್ತೆಗಳು ಸಂಪೂರ್ಣವಾಗಿ ಬಂದ್ ಆಗಿರುವ ಪರಿಣಾಮ ಕರಾವಳಿ ಪ್ರದೇಶಗಳ ಮೇಲೆ ಗಂಭೀರ ಪರಿಣಾಮ ಬೀರಿದೆ ಎಂದು ಅಧಿಕಾರಿಗಳಿಗೆ ಪಶ್ಚಿಮ ಬಂಗಾಳ ಸರ್ಕಾರ ತಿಳಿಸಿದೆ.

ಕೋಲ್ಕತಾ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟ ಪುನರಾರಂಭ
ಚಂಡಮಾರುತದ ಪರಿಣಾಮ ಕೋಲ್ಕತಾ ವಿಮಾನ ನಿಲ್ದಾಣ ಸುತ್ತಲೂ ನೀರು ತುಂಬಿಕೊಂಡು ಪ್ರವಾಹದಂತಹ ಪರಿಸ್ಥಿತಿ ಎದುರಾಗಿತ್ತು. 

ಇದೀಗ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಧ್ಯಾಹ್ನದಿಂದ ಮತ್ತೆ ಪರಿಹಾರ ಕಾರ್ಯಾಚರಣೆಯನ್ನು ಪುನರಾರಂಭಿಸಲಾಗಿದೆ ಎಂದು ವರದಿಗಳಿಂದ ತಿಳಿದಬಂದಿದೆ. 

ಥಾಯ್ ಮತ್ತು ರಷ್ಯಾದ ನಾಗರಿಕರಿಗಾಗಿ ಎರಡು ಪರಿಹಾರ ವಿಮಾನಗಳು ಮಧ್ಯಾಹ್ನದ ವೇಳೆಗೆ ಕಾರ್ಯಾಚರಣೆ ಆರಂಭಿಸಿವೆ. 

ಥಾಯ್ ನಾಗರಿಕರಿಗಾಗಿ ಒಂದು ಏರ್ ಏಷ್ಯಾ ವಿಮಾನ ಇರಲಿದ್ದು, ಈಗಾಗಲೇ ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ  ಬರಲು ಆರಂಭಿಸಿದ್ದಾರೆ. ಮಧ್ಯಾಹ್ನ, ರಷ್ಯಾದ ನಾಗರಿಕರಿಗಾಗಿ ಮತ್ತೊಂದು ವಿಮಾನವು ಹೊರಡಲಿದೆ ಎಂದು ವಿಮಾನ ನಿಲ್ದಾಣದ ನಿರ್ದೇಶಕ ಕೌಶಿಕ್ ಭಟ್ಟಾಚಾರ್ಜಿ ಮಾಹಿತಿ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com