ಕೊರೋನಾ ವೈರಸ್: 20 ಲಕ್ಷ ಕೋಟಿ ಪ್ಯಾಕೇಜ್ ದೇಶದ ಜನರ ಕುರಿತ ಕ್ರೂರ ವ್ಯಂಗ್ಯ; ಪ್ರತಿಪಕ್ಷಗಳ ಸಭೆಯಲ್ಲಿ ಸೋನಿಯಾ ಗಾಂಧಿ ಆಕ್ರೋಶ

ಪ್ರಧಾನಿ ಮೋದಿ ಘೋಷಣೆ ಮಾಡಿದ 20 ಲಕ್ಷ ಕೋಟಿಯ ಆರ್ಥಿಕ ಪ್ಯಾಕೇಜ್‌ ದೇಶದ ಮೇಲೆ ಮಾಡಿರುವಂತಹ ಕ್ರೂರ ಜೋಕ್‌ ಆಗಿದೆ ಎಂದು ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿ ಕಿಡಿಕಾರಿದ್ದಾರೆ.
ಸೋನಿಯಾ ಗಾಂಧಿ ಸಭೆ
ಸೋನಿಯಾ ಗಾಂಧಿ ಸಭೆ

ನವದೆಹಲಿ: ಪ್ರಧಾನಿ ಮೋದಿ ಘೋಷಣೆ ಮಾಡಿದ 20 ಲಕ್ಷ ಕೋಟಿಯ ಆರ್ಥಿಕ ಪ್ಯಾಕೇಜ್‌ ದೇಶದ ಮೇಲೆ ಮಾಡಿರುವಂತಹ ಕ್ರೂರ ಜೋಕ್‌ ಆಗಿದೆ ಎಂದು ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿ ಕಿಡಿಕಾರಿದ್ದಾರೆ.

ದೆಹಲಿಯಲ್ಲಿ ಇಂದು 22 ವಿರೋಧ ಪಕ್ಷಗಳ ಮುಖಂಡರೊಂದಿಗೆ ಆಯೋಜಿಸಿದ್ದ ವಿಡಿಯೋ ಕಾನ್ಫರೆನ್ಸ್ ನಲ್ಲಿ ಮಾತನಾಡಿದ ಸೋನಿಯಾ ಗಾಂಧಿ ಅವರು, ಪ್ರಧಾನಿ ಮೋದಿ ಘೋಷಣೆ ಮಾಡಿದ 20 ಲಕ್ಷ ಕೋಟಿಯ ಆರ್ಥಿಕ ಪ್ಯಾಕೇಜ್‌ ದೇಶದ ಮೇಲೆ ಮಾಡಿರುವಂತಹ ಕ್ರೂರ ಜೋಕ್‌  ಆಗಿದೆ. ಕೇಂದ್ರ ಸರ್ಕಾರವು ಒಕ್ಕೂಟ ವ್ಯವಸ್ಥೆಯನ್ನೇ ಮರೆತಿದ್ದು, ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನೇ ತ್ಯಜಿಸಿದೆ ಎಂದು ಹೇಳಿದ್ದಾರೆ.

ಬಿಜೆಪಿಯೇತರ ಸರ್ಕಾರಗಳ ಕಡೆಗಣನೆ, ಒಕ್ಕೂಟ ವ್ಯವಸ್ಥೆ ಉತ್ಸಾಹ ಕುಂದಿಸಿದ ಸರ್ಕಾರ
ಕೊರೋನಾ ವೈರಸ್ ಸಾಂಕ್ರಾಮಿಕ ನಂತಹ ಕಠಿಣ ಸಂದರ್ಭದಲ್ಲೂ ಕೇಂದ್ರ ಸರ್ಕಾರ ಕ್ಷುಲ್ಲಕ ರಾಜಕೀಯ ಮಾಡುತ್ತಿದ್ದು, ಬಿಜೆಪಿಯೇತರ ಸರ್ಕಾರಗಳನ್ನು ಕಡೆಗಣಿಸುತ್ತಿದೆ. ಆ ಮೂಲಕ ಕೊರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ಒಕ್ಕೂಟ ವ್ಯವಸ್ಥೆಯ ಉತ್ಸಾಹವನ್ನೇ ಕುಂದಿಸಿದೆ.  ಕೇಂದ್ರ ಸರ್ಕಾರವು ಒಕ್ಕೂಟ ವ್ಯವಸ್ಥೆಯನ್ನೇ ಮರೆತಿದ್ದು, ಪ್ರಜಾಸತ್ತಾತ್ಮಕವಾಗಿರುವುದನ್ನೇ ತ್ಯಜಿಸಿದೆ ಎಂದು ಸೋನಿಯಾ ಗಾಂಧಿ ಹೇಳಿದರು.

ಬಡ ವಲಸೆ ಕಾರ್ಮಿಕರ ಬಗ್ಗೆ ದಿವ್ಯ ನಿರ್ಲಕ್ಷ್ಯ
ಶ್ರೀಮಂತ ಅನಿವಾಸಿ ಭಾರತೀಯರನ್ನು ಏರ್ ಲಿಫ್ಟ್ ಮಾಡಿದ ಕೇಂದ್ರ ಸರ್ಕಾರ ಅವರಿಗೆ ರೆಡ್ ಕಾರ್ಪೆಟ್ ಸ್ವಾಗತ ಕೋರುತ್ತಿದೆ. ಆದರೆ ಲಾಕ್ ಡೌನ್ ನಿಂದಾಗಿ ತತ್ತರಿಸುತ್ತಿರುವ ಬಡ ವಲಸೆ ಕಾರ್ಮಿಕ ಬರಿಗಾಲಲ್ಲೇ ತನ್ನ ತವರಿನತ್ತೆ ಹೆಜ್ಜೆ ಹಾಕುತ್ತಿದ್ದು, ವಲಸೆ ಕಾರ್ಮಿಕರ ರವಾನೆ ಸೂಕ್ತ  ವ್ಯವಸ್ಥೆ ಮಾಡಿಲ್ಲ. ವಲಸೆ ಕಾರ್ಮಿಕರ ಬಗ್ಗೆ ಕೇಂದ್ರ ಸರ್ಕಾರ ದಿವ್ಯ ನಿರ್ಲಕ್ಷ್ಯವಹಿಸಿದೆ. ಪ್ರಧಾನಿ ಮೋದಿ ಈ ಹಿಂದೆ ಘೋಷಣೆ ಮಾಡಿದ್ದ ಆರ್ಥಿಕ ಪ್ಯಾಕೇಜ್ ನಿಂದ ವಲಸೆ ಕಾರ್ಮಿಕರಿಗೆ ಯಾವುದೇ ರೀತಿಯ ಲಾಭವಾಗಿಲ್ಲ. 20 ಲಕ್ಷ ಕೋಟಿ ಪ್ಯಾಕೇಜ್ ದೇಶದ ಜನರ ಕುರಿತ ಕ್ರೂರ  ವ್ಯಂಗ್ಯವಾಗಿದ್ದು, 13 ಕೋಟಿ ವಲಸೆ ಕಾರ್ಮಿಕರಿಗೆ ಏನೂ ಸಿಕ್ಕಿಲ್ಲ. ವಲಸೆ ಕಾರ್ಮಿಕರನ್ನು ಪ್ಯಾಕೇಜ್ ನಿಂದ ದೂರ ಇಡಲಾಗಿದೆ. ಹಣಕಾಸು ಸಚಿವೆ ಐದು ದಿನ ಘೋಷಣೆ ಮಾಡಿದ್ದು ಬಿಟ್ಟರೆ ಮತ್ತೇನು ಆಗಿಲ್ಲ. ಕೇಂದ್ರ ಸರ್ಕಾರ ಕೂಡಲೇ ವಲಸೆ ಕಾರ್ಮಿಕರ ನೆರವಿಗೆ ಧಾವಿಸಬೇಕು. ಅವರ  ಖಾತೆಗಳಿಗೆ ನೇರವಾಗಿ ಹಣ ಹಾಕಬೇಕು. ಅವರಿಗೆ ರೇಷನ್‌ ಸಿಗುವಂತೆ ಆಗಬೇಕು. ಬೇರೆ ಕಡೆ ಇರುವ ವಲಸೆ ಕಾರ್ಮಿಕರನ್ನ ಕೇಂದ್ರ ಸರ್ಕಾರ ಬಸ್‌ ಅಥವಾ ರೈಲಿನ ಮೂಲಕ ಕಳುಹಿಸಿ ಕೊಡಬೇಕು ಎಂದು ಸೋನಿಯಾ ಗಾಂಧಿ ಹೇಳಿದರು.

ಅವೈಜ್ಞಾನಿಕ ಲಾಕ್ ಡೌನ್, ತೆರವುಗೊಳಿಸುವ ಮನಸ್ಥಿತಿಯಿಲ್ಲ
ಕೊರೋನಾ ವೈರಸ್ ಪ್ರಸರಣ ತಡೆಗೆ ಕೇಂದ್ರ ಸರ್ಕಾರ ಹೇರಿದ್ದ ಲಾಕ್ ಡೌನ್ ಪ್ರಕ್ರಿಯೇ ಅವೈಜ್ಞಾನಿಕವಾಗಿದ್ದು, ಲಾಕ್‌ಡೌನ್‌ನಿಂದ ಹೊರ ಬರಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಬಳಿ ಯಾವುದೇ ಸೂಕ್ತ ಯೋಜನೆ ಇಲ್ಲ. ಸರ್ಕಾರದ ಸಂಪೂರ್ಣ ಪವರ್‌ ಪ್ರಧಾನಿ ಕಚೇರಿಯಲ್ಲಿದೆ.  ಇದೇ ಕಾರಣಕ್ಕೆ ಲಾಕ್‌ಡೌನ್‌ ವೇಳೆ ಸರ್ಕಾರ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಲಾಕ್‌ಡೌನ್‌ಗಳ ಮಾನದಂಡಗಳ ಬಗ್ಗೆ ಸರ್ಕಾರದಲ್ಲಿ ಅನಿಶ್ಚಿತತೆ ತಲೆದೋರಿದೆ. ಮತ್ತು ಅದನ್ನು ಅಂತ್ಯಗೊಳಿಸುವ ಕುರಿತು ಯಾವುದೇ ತಂತ್ರಗಳನ್ನೂ ರೂಪಿಸಿಲ್ಲ ಎಂದು ಸೋನಿಯಾ ಗಾಂಧಿ  ಟೀಕಿಸಿದರು.

ಸಂವಿಧಾನಕ್ಕೆ ಬೆಲೆ ಇಲ್ಲ, ಸಂಸತ್ ಕೂಡ ಕಡೆಗಣನೆ
ಹಾಲಿ ಎನ್ ಡಿಎ ಸರ್ಕಾರದಲ್ಲಿ ಸಂವಿಧಾನಕ್ಕೆ ಬೆಲೆಯೇ ಇಲ್ಲದಂತಾಗಿದೆ. ಸಂಸತ್ ಅನ್ನು ಕೂಡ ಕಡೆಗಣಿಸಲ್ಪಟ್ಟಿದ್ದು, ಕೊರೋನಾ ವೈರಸ್ ಸಾಂಕ್ರಾಮಿಕದ ಕುರಿತು ಸರ್ಕಾರ ಸಂಸತ್ತಿನ ಸದನಗಳಲ್ಲಿ ಚರ್ಚೆ ನಡೆಸುವ ಕಾರ್ಯಕ್ಕೆ ಮುಂದಾಗಿಲ್ಲ. ಕನಿಷ್ಠ ಪಕ್ಷ ಸಂಸದೀಯ ಸಮಿತಿಗಳನ್ನೂ ಸಂಪರ್ಕಿಸಿ ಸಲಹೆ ಪಡೆಯುವ ಗೋಜಿಗೆ ಹೋಗಿಲ್ಲ. ಪ್ರಜಾಪ್ರಭುತ್ವದ ಎಲ್ಲ ಸಿದ್ಧಾಂತಗಳನ್ನೂ ಕೇಂದ್ರ ಸರ್ಕಾರ ಗಾಳಿಗೆ ತೂರಿದೆ. ಸುಧಾರಣೆಗಳ ಹೆಸರಲ್ಲಿ ಕೇಂದ್ರ ಸರ್ಕಾರ ಹುಚ್ಚು ಸಾಹಸಕ್ಕೆ ಮುಂದಾಗಿದೆ. ಕಾರ್ಮಿಕ ನೀತಿ ರದ್ಧತಿ, ಪಿಎಸ್ ಯುಗಳ ಕುರಿತು ನಿರ್ಧಾರ ಸರ್ಕಾರದ ಕಾರ್ಯವೈಖರಿಗೆ ಹಿಡಿದ ಕನ್ನಡಿಯಾಗಿದೆ ಎಂದು ಹೇಳಿದರು.

ಆರ್ಥಿಕತೆ ಸರಿದಾರಿಗೆ ತರಲು ಬೃಹತ್ ಹಣಕಾಸಿನ ಕಾರ್ಯಯೋಜನೆ ಬೇಕು
ಕೊರೋನಾ ವೈರಸ್ ನಿಂದಾಗಿ ಕುಸಿದಿರುವ ಆರ್ಥಿಕತೆಯನ್ನು ಸರಿದಾರಿಗೆ ತರಲು ಬೃಹತ್ ಹಣಕಾಸಿನ ಕಾರ್ಯಯೋಜನೆ ಬೇಕು. ಆದರೆ ಸರ್ಕಾರದ ಕಾರ್ಯವೈಖರಿಯನ್ನು ಗಮನಿಸುತ್ತಿದ್ದರೆ ದೇಶದ ಆರ್ಥಿಕತೆ ಮೈನಸ್ 5ಕ್ಕೆ ಕುಸಿಯಲಿದೆ ಎಂದು ಆರ್ಥಿಕ ತಜ್ಞರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಕೊರೋನಾಗಿಂತಲೂ ಮುಂಚಿತವಾಗಿಯೇ ಅಂದರೆ 2017-2018ರಲ್ಲೇ ದೇಶದ ಆರ್ಥಿಕತೆಯ ಕುಸಿತ ಆರಂಭವಾಗಿತ್ತು ಎಂದು ಸೋನಿಯಾಗಾಂಧಿ ಹೇಳಿದರು.

ಅಂಫಾನ್ ಚಂಡಮಾರುತ ಸಂತ್ರಸ್ಥರಿಗೆ ಸಂತಾಪ
ಇದೇ ವೇಳೆ ಒಡಿಶಾ ಮತ್ತು ಪಶ್ಚಿಮ ಬಂಗಾಳದ ಅಂಫಾನ್ ಚಂಡಮಾರುತ ಸಂತ್ರಸ್ಥರಿಗೆ ಸೋನಿಯಾಗಾಂಧಿ ಸಾಂತ್ವನ ಹೇಳಿದರು. ಚಂಡಮಾರುತ ಸಂತ್ರಸ್ಥರೊಂದಿಗೆ ನಾವಿದ್ದೇವೆ ಎಂದು ಧೈರ್ಯ ತುಂಬಿದರು.

22 ಪಕ್ಷಗಳ ಮುಖಂಜರು ಭಾಗಿ
ಸೋನಿಯಾ ಗಾಂಧಿ ಅವರು ಆಯೋಜಿಸಿದ್ದ ಪ್ರತಿಪಕ್ಷಗಳ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಸೇರಿದಂತೆ ಟಿಎಂಸಿ, ಎನ್‌ಸಿಪಿ, ಡಿಎಂಕೆ ಮತ್ತು ಎಡ ಪಕ್ಷಗಳ ಮುಖಂಡರು ಸೇರಿದಂತೆ 22 ಪಕ್ಷಗಳ ಮುಖಂಡರು ಭಾಗಿಯಾಗಿದ್ದರು. ಪ್ರಮುಖವಾಗಿ  ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ, ಮಹಾರಾಷ್ಟ್ರ ಮುಖ್ಯಮಂತ್ರಿ ಮತ್ತು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ, ಜಾರ್ಖಂಡ್ ಮುಖ್ಯಮಂತ್ರಿ ಮತ್ತು ಜೆಎಂಎಂ ಮುಖಂಡ ಹೇಮಂತ್ ಸೊರೆನ್, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ಡಿಎಂಕೆ  ನಾಯಕ ಎಂ ಕೆ ಸ್ಟಾಲಿನ್ ಮತ್ತು ಜೆಡಿ (ಎಸ್) ನಾಯಕ ಎಚ್‌ಡಿ ದೇವೇಗೌಡ, ಸಿಪಿಐ-ಎಂ ನ ಸೀತಾರಾಮ್ ಯೆಚೂರಿ ಮತ್ತು ಸಿಪಿಐನ ಡಿ ರಾಜಾ ಸಭೆಯಲ್ಲಿ ಭಾಗವಹಿಸಿದರು. 

ಇನ್ನು ಕಾಂಗ್ರೆಸ್ ಮುಖಂಡರಾದ ರಾಹುಲ್ ಗಾಂಧಿ, ಎ.ಕೆ.ಆಂಟನಿ, ಅಹ್ಮದ್ ಪಟೇಲ್, ಗುಲಾಮ್ ನಬಿ ಆಜಾದ್, ಅಧೀರ್ ರಂಜನ್ ಚೌಧರಿ ಮತ್ತು ಮಲ್ಲಿಕರ್ಜುನ್ ಖರ್ಗೆ ಉಪಸ್ಥಿತರಿದ್ದರು. ಇತರೆ ಪ್ರಾದೇಶಿಕ ಪಕ್ಷಗಳ ನಾಯಕರಾದ ಶರದ್ ಯಾದವ್ (ಎಲ್ ಜೆಡಿ), ಒಮರ್ ಅಬ್ದುಲ್ಲಾ  (ಎನ್‌ಸಿ), ತೇಜಸ್ವಿ ಯಾದವ್ (ಆರ್‌ಜೆಡಿ), ಜೀತಾನ್ ರಾಮ್ ಮಾಂಝಿ (ಎಚ್‌ಎಎಂ), ಉಪೇಂದ್ರ ಕುಶ್ವಾಹ್ (ಆರ್‌ಎಲ್‌ಎಸ್‌ಪಿ), ಜೋಸ್ ಕೆ ಮಣಿ (ಕೆಸಿ-ಎಂ), ಬದ್ರುದ್ದೀನ್ ಅಜ್ಮಲ್ (ಎಐಯುಡಿಎಫ್), ಜಯಂತ್ ಚೌಧರಿ (ಆರ್‌ಎಲ್‌ಡಿ) ಮತ್ತು ರಾಜು ಶೆಟ್ಟಿ (ಸ್ವಾಭಿಮಾನಿ ಪಕ್ಷ) ಅವರು  ಭಾಗವಹಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com