ಒಂದೇ ಬಾವಿಯಲ್ಲಿ ತೇಲಿದ 9 ವಲಸೆ ಕಾರ್ಮಿಕರ ಹೆಣ, ಬೇಸ್ತು ಬಿದ್ದ ತೆಲಂಗಾಣ ಪೊಲೀಸರು!

ತೆಲಂಗಾಣದ ವರಂಗಲ್ ಜಿಲ್ಲೆಯ ಬಾವಿಯೊಂದರಲ್ಲಿ 9 ಮಂದಿಯ ಹೆಣ ತೇಲುವ ಮೂಲಕ ಇಲ್ಲಿನ ಸ್ಥಳೀಯರು ತೀವ್ರ ಆತಂಕಕ್ಕೊಳಗಾದ ಘಟನೆ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಹೈದರಾಬಾದ್: ತೆಲಂಗಾಣದ ವರಂಗಲ್ ಜಿಲ್ಲೆಯ ಬಾವಿಯೊಂದರಲ್ಲಿ 9 ಮಂದಿಯ ಹೆಣ ತೇಲುವ ಮೂಲಕ ಇಲ್ಲಿನ ಸ್ಥಳೀಯರು ತೀವ್ರ ಆತಂಕಕ್ಕೊಳಗಾದ ಘಟನೆ ನಡೆದಿದೆ.

ತೆಲಂಗಾಣದ ವರಂಗಲ್ ಜಿಲ್ಲೆಯ ಗೊರ್ರೆಗುಂಟಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಒಂದೇ ಬಾವಿಯಿಂದ 9 ಹೆಣಗಳನ್ನು ಪೊಲೀಸರು ಹೊರತೆಗೆದಿದ್ದಾರೆ. ನಿನ್ನೆ 4 ಮೃತ ದೇಹಗಳನ್ನು ಹೊರತೆಗೆದಿದ್ದ ಪೊಲೀಸರು ಇಂದು ಮತ್ತೆ 5 ಹೆಣಗಳನ್ನು ಹೊರತೆಗೆದಿದ್ದಾರೆ. ಆ ಮೂಲಕ ಒಟ್ಟು 9  ಹೆಣಗಳನ್ನು ಹೊರತೆಗೆಯಲಾಗಿದೆ. ಮೃತ ಒಂಭತ್ತು ಮಂದಿಯ ಪೈಕಿ 8 ಮಂದಿ ವಲಸೆ ಕಾರ್ಮಿಕರು ಎಂದು ತಿಳಿದುಬಂದಿದೆ. ಮೃತ ಕಾರ್ಮಿಕರ ಪೈಕಿ 6 ಮಂದಿ ಪಶ್ಚಿಮ ಬಂಗಾಳ ಮೂಲದವರಾಗಿದ್ದು, ಇಬ್ಬರು ಬಿಹಾರ ಮೂಲದವರೆಂದು ತಿಳಿದುಬಂದಿದೆ. 

ಮೃತರನ್ನು 56 ವರ್ಷದ ಮಕ್ಸೂದ್, ಅವರ ಪತ್ನಿ ನಿಶಾ (48 ವರ್ಷ) ಪುತ್ರಿ ಬುಶ್ರಾ (24 ವರ್ಷ) ಮತ್ತು 3 ವರ್ಷದ ಮಕ್ಸೂದ್ ಅವರ ಮೊಮ್ಮಗ ಎಂದು ಗುರುತಿಸಲಾಗಿದೆ. ಇವರೆಲ್ಲರ ಮೃತದೇಹಗಳನ್ನು ಗುರುವಾರ ಹೊರತೆಗೆಯಲಾಗಿತ್ತು. ಇಂದು ಮತ್ತೆ ಐದು ಮೃತ ದೇಹಗಳು  ಪತ್ತೆಯಾಗಿದ್ದು, ಇಂದು ಮಕ್ಸೂದ್ ಅವರ ಮಗ, ಬಿಹಾರದ ಇಬ್ಬರು ವಲಸೆ ಕಾರ್ಮಿಕರು, ಒರ್ವ ಸ್ಥಳೀಯ ಮೃತದೇಹ ಸೇರಿದಂತೆ ಒಟ್ಟು ಐದು ಮೃತದೇಹಗಳನ್ನು ಪೊಲೀಸರು ಹೊರತೆಗೆದಿದ್ದಾರೆ.

ಮೇಲ್ನೋಟಕ್ಕೆ ಇದು ಸಾಮೂಹಿಕ ಆತ್ಮಹತ್ಯೆ ಎಂದು ಹೇಳಲಾಗುತ್ತಿದೆಯಾದರೂ, ಸಾವಿನ ಹಿಂದಿನ ನಿಖರ ಕಾರಣ ಬಹಿರಂಗವಾಗಿಲ್ಲ. ಮೃತ ದೇಹಗಳ ಮೇಲೆ ಯಾವುದೇ ಬಾಹ್ಯ ಗಾಯಗಳಾಗಿಲ್ಲ. ಪ್ರಕರಣದ ತನಿಖಾ ಜವಾಬ್ದಾರಿಯನ್ನು ವಿಶೇಷ ತನಿಖಾ ತಂಡಕ್ಕೆ ವಹಿಸಲಾಗಿದೆ. ಮೃತ  ದೇಹಗಳ ಮರಣೋತ್ತರ ಪರೀಕ್ಷೆ ಕೈ ಗೆ ಸಿಕ್ಕ ಬಳಿಕ ಮುಂದಿನ ತನಿಖಾ ಹಂತ ನಿರ್ಧರಿಸಲಾಗುತ್ತದೆ. ಮೃತದೇಹಗಳನ್ನು ಮಹಾತ್ಮಾ ಗಾಂಧಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ ಎಂದು ವರಂಗಲ್ ಪೊಲೀಸ್ ಆಯುಕ್ತ ವಿ ರವೀಂದ್ರ ಅವರು ಹೇಳಿದ್ದಾರೆ.

ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಗೀಸುಕೊಂಡಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಶ್ವಾನದಳ ಆಗಮಿಸಿ ತನಿಖೆ ನಡೆಸಿದೆ.

ಇನ್ನು ಕರೀಮ್ ಬಾದ್ ನಲ್ಲಿ ವಾಸಿಸುತ್ತಿದ್ದ ಮೃತ ಮಕ್ಸೂದ್ ಕುಟುಂಬ ಕಳೆದ 20 ವರ್ಷಗಳ ಹಿಂದೆ ಬಂಗಾಳದಿಂದ ತೆಲಂಗಾಣಕ್ಕೆ ಬಂದು ನೆಲೆಸಿತ್ತು. ಲಾಕ್ ಡೌನ್ ನಿಂದಾಗಿ ಅವರು ಕೆಲಸ ಮಾಡುತ್ತಿದ್ದ ಸಂಸ್ಥೆಯ ಮಾಲೀಕ ಕುಟುಂಬಕ್ಕೆ ತಮ್ಮ ಶೆಲ್ಟರ್ ನಲ್ಲಿ ತಂಗಲು ಹೇಳಿದ್ದ. ಹೀಗಾಗಿ  ಮಾಲೀಕನ ಗೋಡೌನ್ ನಲ್ಲಿ ಇಡೀ ಕುಟುಂಬ ತಂಗಿತ್ತು. ಇದೇ ಗೋಡೌನ್ ಬಳಿಯ ಬಾವಿಯಲ್ಲಿ ಮೃತ ದೇಹಗಳು ಪತ್ತೆಯಾಗಿದೆ. ಇತ್ತೀಚೆಗಷ್ಟೇ ಮಕ್ಸೂದ್ ತಮ್ಮ ಮೊಮ್ಮಗನ ಬರ್ತ್ ಡೇ ಪಾರ್ಟಿ ಆಯೋಜನೆ ಮಾಡಿದ್ದರು. ಈ ಪಾರ್ಟಿಗೆ ಬಿಹಾರ ಮೂಲಕ ಯುವಕರು ಮತ್ತು ಸ್ಥಳೀಯ  ಯುವಕರು ಕೂಡ ಭಾಗಿಯಾಗಿದ್ದರು. ಇದಾದ ಕೆಲ ದಿನಗಳ ಬಳಿಕ ಮಕ್ಸೂದ್ ಮಗಳ ವಿಚಾರವಾಗಿ ಬಿಹಾರಿ ಯುವಕರು ಮತ್ತು ಸ್ಥಳೀಯ ಯುವಕರ ನಡುವೆ ಜಗಳವಾಗಿತ್ತು. ಈ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com