ತೆಲಂಗಾಣ ಬಾವಿಯಲ್ಲಿ ಸಿಕ್ಕ ಹೆಣಗಳ ಪ್ರಕರಣಕ್ಕೆ ಭಾರೀ ಟ್ವಿಸ್ಟ್; ಪ್ರೇಯಸಿ ಕೊಲೆ ಮರೆಮಾಚಲು 9 ಜನರನ್ನು ಕೊಂದ ಬಿಹಾರದ ಯುವಕ

ತೆಲಂಗಾಣದ ವರಂಗಲ್ ನಲ್ಲಿ ಬಾವಿಯಲ್ಲಿ ಸಿಕ್ಕ ರಾಶಿ ರಾಶಿ ಹೆಣಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರಿ ಟ್ವಿಸ್ಟ್ ದೊರೆತಿದ್ದು, ತನ್ನ ಪ್ರೇಯಸಿ ಕೊಲೆಯ ಮರೆಮಾಚಲು ಬಿಹಾರಿ ಯುವಕ ನಡೆಸಿದ್ದ ಮಾರಣ ಹೋಮ ಇದು ಎಂದು ಪೊಲೀಸರು ಸ್ಫೋಟಕ ಮಾಹಿತಿ  ನೀಡಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ವರಂಗಲ್: ತೆಲಂಗಾಣದ ವರಂಗಲ್ ನಲ್ಲಿ ಬಾವಿಯಲ್ಲಿ ಸಿಕ್ಕ ರಾಶಿ ರಾಶಿ ಹೆಣಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರಿ ಟ್ವಿಸ್ಟ್ ದೊರೆತಿದ್ದು, ತನ್ನ ಪ್ರೇಯಸಿ ಕೊಲೆಯ ಮರೆಮಾಚಲು ಬಿಹಾರಿ ಯುವಕ ನಡೆಸಿದ್ದ ಮಾರಣ ಹೋಮ ಇದು ಎಂದು ಪೊಲೀಸರು ಸ್ಫೋಟಕ ಮಾಹಿತಿ  ನೀಡಿದ್ದಾರೆ.

ಕಳೆದ ಮೇ 22ರಂದು ತೆಲಂಗಾಣದ ವರಂಗಲ್ ಜಿಲ್ಲೆಯ ಗೊರ್ರೆಗುಂಟಾ ಗ್ರಾಮದಲ್ಲಿ ಒಂದೇ ಬಾವಿಯಿಂದ 9 ಹೆಣಗಳನ್ನು ಪೊಲೀಸರು ಹೊರತೆಗೆದಿದ್ದರು. ಮೃತ ಕಾರ್ಮಿಕರ ಪೈಕಿ 6 ಮಂದಿ ಪಶ್ಚಿಮ ಬಂಗಾಳ ಮೂಲದವರಾಗಿದ್ದು, ಇಬ್ಬರು ಬಿಹಾರ ಮೂಲದವರೆಂದು ತಿಳಿದುಬಂದಿತ್ತು. ಈ  ಪ್ರಕರಣ ತೆಲಂಗಾಣ ಮಾತ್ರವಲ್ಲದೇ ಇಡೀ ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿತ್ತು. ಇದೀಗ ಈ ಪ್ರಕರಣವನ್ನು ಭೇದಿಸುವಲ್ಲಿ ತೆಲಂಗಾಣ ಪೊಲೀಸರು ಯಶಸ್ವಿಯಾಗಿದ್ದು, ತನ್ನ ಪ್ರೇಯಸಿ ಕೊಲೆಯನ್ನು ಮರೆ ಮಾಚಲು ಬಿಹಾರದ ಯುವಕನೋರ್ವ ನಡೆಸಿದ ಮಾರಣ ಹೋಮ  ಇದು. ಬಿಹಾರ ಮೂಲದ ಯುವಕ ಸಂಜಯ್ ಕುಮಾರ್ ಯಾದವ್ ಎಂಬಾತ ತನ್ನ ಪ್ರೇಯಸಿ ರಫೀಖಾಳನ್ನು ಕೊಂದಿರುತ್ತಾನೆ. ಈ ವಿಚಾರವನ್ನು ಮರೆ ಮಾಚಲು ಆಕೆಯ ಕುಟುಂಬಸ್ಥರು ಸೇರಿದಂತೆ ತನ್ನ ಸಹೋದ್ಯೋಗಿಗಳನ್ನೇ ಅಮಾನವೀಯವಾಗಿ ಬಾವಿ ತಳ್ಳಿ ಕೊಂದಿದ್ದಾನೆ ಎಂದು  ಪೊಲೀಸರು ಮಾಹಿತಿ ನೀಡಿದ್ದಾರೆ. 

ಈ ಬಗ್ಗೆ ಮಾಹಿತಿ ನೀಡಿರುವ ವರಂಗಲ್ ಪೊಲೀಸ್ ಆಯುಕ್ತ ವಿ ರವೀಂದ್ರ ಅವರು, ಸಂಜಯ್ ಕುಮಾರ್ ಯಾದವ್ ಮೂರು ಮಕ್ಕಳ ತಾಯಿಯಾಗಿದ್ದ ರಫೀಖಾಳೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಈ ವೇಳೆ ಸಂಜಯ್ ಕುಮಾರ್ ಯಾದವ್  ರಫೀಖಾಳ 15 ವರ್ಷದ ಮಗಳೊಂದಿಗೆ ಅಸಭ್ಯವಾಗಿ ವರ್ತಿಸಲು ಆರಂಭಿಸಿದ್ದ. ಇದನ್ನು ಜೀರ್ಣಿಸಿಕೊಳ್ಳಲಾಗ ರಫೀಖಾ ಈ ಬಗ್ಗೆ ಪೊಲೀಸ್ ದೂರು ನೀಡುವುದಾಗಿ ಎಚ್ಚರಿಕೆ ನೀಡಿದ್ದಳು. ಈ ವೇಳೆ ರಫೀಖಾಳ ವಿರುದ್ಧ ತೀವ್ರ ಆಕ್ರೋಶಗೊಂಡಿದ್ದ ಸಂಜಯ್, ಆಕೆಯ ಕೊಲೆ ಮಾಡಿ ಆಕೆಯ  ಪುತ್ರಿಯೊಂದಿಗೆ ಅಕ್ರಮ ಸಂಬಂಧ ಬೆಳಸಲು ನಿರ್ಧರಿಸಿದ್ದ. ಈ ವೇಳೆ ರಫೀಖಾಳನ್ನು ಮದುವೆಯಾಗುವುದಾಗಿ ನಂಬಿಸಿ, ಮಾರ್ಚ್ 7ರಂದು ಪಶ್ಚಿಮ ಬಂಗಾಳಕ್ಕೆ ರೈಲಿನಲ್ಲಿ ಆಕೆಯನ್ನು ಕರೆದೊಯ್ದಿದ್ದ. ಪ್ರಯಾಣದ ವೇಳೆ ರಫೀಖಾಳಿಗೆ ನಿದ್ರೆ ಬರುವ ಮಾತ್ರೆಗಳನ್ನು ಊಟದಲ್ಲಿ ಮಿಶ್ರಣ ಮಾಡಿ  ಕೊಟ್ಟಿದ್ದ. ಆಕೆ ಪ್ರಜ್ಞೆ ತಪ್ಪಿದ್ದ ವೇಳೆ ಆಕೆಯನ್ನು ಉಸಿರುಗಟ್ಟಿಸಿಕೊಂದು ಚಲಿಸುತ್ತಿದ್ದ ರೈಲಿನಿಂದಲೇ ಆಕೆಯ ದೇಹವನ್ನು ಹೊರಗೆ ಎಸೆದಿದ್ದ. 

ಬಳಿಕ ವರಂಗಲ್ ಗೆ ವಾಪಸ್ ಆಗಿದ್ದ ಸಂಜಯ್ ನನ್ನು ಮಕ್ಸೂದ್ ಪತ್ನಿ ನಿಶಾ ಅನುಮಾನದಿಂದ ನೋಡಿದ್ದಳು. ಅಲ್ಲದೆ ರಫೀಖಾಳ ಎಲ್ಲಿದ್ದಾಳೆ, ನೀನು ಒಬ್ಬನೇ ಏಕೆ ಬಂದೆ ಎಂದು ಪ್ರಶ್ನಿಸತೊಡಗಿದ್ದಳು. ಈ ವೇಳೆ ಸಂಜಯ್ ನ ನಡವಳಿಕೆಯಿಂದ ಅನುಮಾನಗೊಂಡ ಆಕೆ ಈ ಬಗ್ಗೆ  ಪೊಲೀಸ್ ದೂರು ನೀಡುವುದಾಗಿ ಬೆದರಿಸಿದ್ದಳು. ಇದೇ ಸಂದರ್ಭದಲ್ಲಿ ಮಕ್ಸೂದ್ ಮೇ 16 ರಿಂದ ಮೇ 20ರವರೆಗೆ ಸಂಜಯ್ ಮಕ್ಸೂದ್ ಅವರ ಮನೆಗೆ ಸತತವಾಗಿ ಭೇಟಿ ನೀಡುತ್ತಿದ್ದ.  ರಫೀಖಾಳಂತೆ ನೀಶಾಳನ್ನು ಕೊಲ್ಲಲು ಸಂಚು ರೂಪಿಸಿದ್ದ ಸಂಜಯ್ ಇದಕ್ಕಾಗಿ ಮತ್ತೆ ನಿದ್ರೆ ಬರುವ  ಮಾತ್ರೆಗಳನ್ನು ಖರೀದಿ ಮಾಡಿದ್ದ. ಮೇ 20ರಂದು ಮಕ್ಸೂದ್ ಪುತ್ರನ ಬರ್ತ್ ಡೇ ಪಾರ್ಟಿಯಂದು ಊಟದಲ್ಲಿ ನಿದ್ರೆ ಬರುವ ಮಾತ್ರೆಗಳನ್ನು ಮಿಶ್ರಣ ಮಾಡಿದ್ದ. ಈ ಅಡುಗೆಯನ್ನು ತಿಂದಿದ್ದ ಮಕ್ಸೂದ್ ಕುಟುಂಬ ಮತ್ತು ಆತನ ಸ್ನೇಹಿತ ಶಕೀಲ್ ನಿದ್ರೆಗೆ ಜಾರಿದ್ದರು. ಈ ವೇಳೆ ಎಲ್ಲರನ್ನೂ  ಬಾವಿಗೆ ಹಾಕಲು ನಿರ್ಧರಿಸಿದ್ದ ಸಂಜಯ್, ಕಟ್ಟಡದ ಮೊದಲ ಮಹಡಿಯಲ್ಲಿ ಇದ್ದ ಇಬ್ಬರು ವಲಸೆ ಕಾರ್ಮಿಕರು ತನ್ನ ಕೃತ್ಯಕ್ಕೆ ಅಡ್ಡಿಯಾಗಬಹುದು ಎಂದು ಭಾವಿಸಿ ಅವರಿಗೂ ನಿದ್ರೆ ಮಾತ್ರೆ ಬೆರೆಸಿದ್ದ ಆಹಾರ ನೀಡಿದ್ದ. 

ಬಳಿಕ ಮಧ್ಯರಾತ್ರಿ ಸುಮಾರು 12.30ರ ವೇಳೆಯಲ್ಲಿ ಎಚ್ಚರಗೊಂಡಿದ್ದ ಸಂಜಯ್ ಎಲ್ಲರೂ ನಿದ್ರಿಸುತ್ತಿರುವುದನ್ನು ಖಚಿತಪಡಿಸಿಕೊಂಡು ಎಲ್ಲರ ದೇಹಗಳನ್ನೂ ಗೋಣಿಚೀಲದಲ್ಲಿ ಹಾಕಿಕೊಂಡು ಬಾವಿ ಬಳಿ ಎಳೆದುಕೊಂಡು ಹೋಗಿ ಒಬ್ಬೊಬ್ಬರಾಗಿ ಬಾವಿ ಎಸೆದಿದ್ದಾನೆ ಎಂದು ಹೇಳಿದ್ದಾರೆ.  ಅಂತೆಯೇ ಈ ಪ್ರಕರಣವನ್ನು ಭೇದಿಸಲು ತಾವು ಆರು ತಂಡಗಳನ್ನು ರಚಿಸಿದ್ದು, ಪ್ರಸ್ತುತ ಆರೋಪಿ ಸಂಜಯ್ ನನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಈ ಪಾತ್ರದ ಕುರಿತ ಎಲ್ಲ ಸಾಕ್ಷ್ಯಗಳನ್ನೂ ಕಲೆಹಾಕಿದ್ದು, ಅಪರಾಧಿಗೆ ಖಂಡಿತಾ ಕಠಿಣ ಶಿಕ್ಷೆ ಕೊಡಿಸುವ ವಿಶ್ವಾಸವಿದೆ ಎಂದು  ಆಯುಕ್ತ ವಿ  ರವೀಂದ್ರ ಅವರು ಹೇಳಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com